ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 16-10-2020

Bar & Bench

ಕೃಷಿ ತ್ಯಾಜ್ಯ ದಹನ ನಿಗಾ ಸಮಿತಿಯ ಮುಖ್ಯಸ್ಥರಾಗಿ ನಿವೃತ್ತ ನ್ಯಾ. ಮದನ್ ಲೋಕೂರ್  ನೇಮಕ

ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಕೃಷಿ ತ್ಯಾಜ್ಯ ದಹನದ ಮೇಲೆ ನಿಗಾ ಇಡಲು ಮತ್ತು ಅವುಗಳನ್ನು ತಡೆಯುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕೂರ್ ಅವರ ನೇತೃತ್ವದ ಏಕಸದ್ಯ ಸಮಿತಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರಚಿಸಿದೆ.

Justice Madan Lokur

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ಲೋಕೂರ್ ಅವರು ಪರಿಸರ ಸಂಬಂಧಿ ವಿಷಯಗಳ ವಿಚಾರಣಾ ಪೀಠದ ನೇತೃತ್ವ ವಹಿಸಿದ್ದರು. ಹಿರಿಯ ವಕೀಲ ವಿಕಾಸ್ ಸಿಂಗ್ ಅವರ ಅರ್ಜಿದಾರರ ಶಿಫಾರಸಿನಂತೆ ಲೋಕೂರ್ ಅವರ ನೇತೃತ್ವದ ಸಮಿತಿ ರಚಿಸಲು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಒಪ್ಪಿಗೆ ಸೂಚಿಸಿದೆ.

ಮಹಾರಾಷ್ಟ್ರ ಎಷ್ಟು ದೊಡ್ಡದಿದೆ ಎಂದು ನಿಮಗೆ ಗೊತ್ತೇ? ಪಿಐಎಲ್ ವಿಚಾರಣೆಗೆ ನಿರಾಕರಿಸಿದ ಸುಪ್ರೀಂ

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ವಜಾಗೊಳಿಸಿ, ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಿಚಾರಣೆಗೆ ಪರಿಗಣಿಸಲು ನಿರಾಕರಿಸಿತು.

Maharashtra President's Rule

ಮಹಾರಾಷ್ಟ್ರ ಎಷ್ಟು ದೊಡ್ಡದಿದೆ ಎಂಬುದು ನಿಮಗೆ ಗೊತ್ತೆ? ಮುಂಬೈ ಮಾತ್ರ ಇಡೀ ರಾಜ್ಯವಲ್ಲ. ಬೀಸು ಹೇಳಿಕೆಗಳನ್ನು ನೀಡಬೇಡಿ ಎಂದು ಅರ್ಜಿದಾರರನ್ನು ಉದ್ದೇಶಿಸಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಕಟುವಾಗಿ ನುಡಿದರು. “ಅರ್ಜಿದಾರರಾದ ನೀವು ರಾಷ್ಟ್ರಪತಿ ಅವರನ್ನು ಕಾಣಲು ಸ್ವತಂತ್ರರು. ಆದರೆ, ಇಲ್ಲಿಗೆ ಬರಬೇಡಿ” ಎಂದು ನುಡಿದರು.

ಮಹಿಳೆಯ ಮೇಲಿನ ಲೈಂಗಿನ ದೌರ್ಜನ್ಯ ಕ್ಷುಲ್ಲಕವಾಗಿ ಕಾಣುತ್ತಿರುವ ನ್ಯಾಯಮೂರ್ತಿಗಳು: ಎಜಿ ವೇಣುಗೋಪಾಲ್‌ಗೆ ಸುಪ್ರೀಂ ನೋಟಿಸ್

ಭಾರತದಲ್ಲಿ ನ್ಯಾಯಾಲಯಗಳು ಲೈಂಗಿಕ ಅಪರಾಧಗಳನ್ನು ಕ್ಷುಲ್ಲಕವಾಗಿ ಕಾಣುತ್ತಿವೆ ಎಂದು ಉಲ್ಲೇಖಿಸಿ ಮಹಿಳಾ ವಕೀಲೆಯರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ.

Supreme Court

ಜಾಮೀನು ಮಂಜೂರು ಮಾಡಲು ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳುವ ಷರತ್ತು ವಿಧಿಸಿದ್ದ ಮಧ್ಯ ಪ್ರದೇಶದ ಹೈಕೋರ್ಟ್‌ನ ಜುಲೈ 30ರ ಆದೇಶವನ್ನು ಪ್ರಶ್ನಿಸಿ ವಕೀಲೆ ಅಪರ್ಣಾ ಭಟ್ ಮತ್ತು ಇತರೆ ಎಂಟು ಮಂದಿ ಮಹಿಳಾ ವಕೀಲೆಯರು ಮನವಿ ಸಲ್ಲಿಸಿದ್ದಾರೆ.