ತೃತೀಯ ಲಿಂಗಿಗಳ (ಹಕ್ಕುಗಳ ಸಂರಕ್ಷಣೆ) ಕಾಯಿದೆ – 2019ಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವುದರಿಂದ ಗಂಭೀರ ಅಂತರ ಕಾಯ್ದುಕೊಳ್ಳುವುದಾಗಿ ಕರ್ನಾಟಕ ಹೈಕೋರ್ಟ್ ಶುಕ್ರವಾರ ಹೇಳಿದೆ.
ಕಾಯಿದೆಯ ವಿವಿಧ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠವು ನಡೆಸಿತು. ಸರ್ಕಾರೇತರ ಸಂಸ್ಥೆಯಾದ ʼಒಂದೆಡೆʼಯು ತೃತೀಯ ಲಿಂಗಿಗಳ (ಹಕ್ಕುಗಳ ಸಂರಕ್ಷಣೆ) ಕಾಯಿದೆಯ ಸೆಕ್ಷನ್‌ಗಳಾದ 4, 5, 6, 7, 12 (3), 18 (a) ಮತ್ತು18 (d) ಅನ್ನು ಪ್ರಶ್ನಿಸಿವೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ವಿರುದ್ಧದ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ ಹಾಸ್ಯ ಕಲಾವಿದ ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತೊಂದು ಮನವಿಗೆ ಸಮ್ಮತಿ ನೀಡಿದ್ದಾರೆ.
ಏರ್‌ಕ್ರಾಫ್ಟ್‌ನಲ್ಲಿ ಕುಳಿತು ಎರಡು ಬೆರಳುಗಳನ್ನು ತೋರುತ್ತಿರುವುದರ ಅಡಿಯಲ್ಲಿ, “ಎರಡು ಬೆರಳುಗಳ ಪೈಕಿ ಒಂದು ಸಿಜೆಐ ಅರವಿಂದ್ ಬೊಬ್ಡೆ ಅವರಿಗೆ... ನಿಮಗೆ ಗೊಂದಲ ಉಂಟು ಮಾಡುವುದು ಬೇಡ ಮಧ್ಯದ ಬೆರಳು” ಎಂದು ಬರೆದಿದ್ದ ಟ್ವೀಟ್ ಆಧರಿಸಿ ಕ್ರಮಕ್ಕೆ ಕೋರಿ ಪತ್ರ ಬರೆಯಲಾಗಿತ್ತು. ಅರ್ಜಿದಾರರಾದ ಅನೂಜ್ ಸಿಂಗ್ ಅವರು ಅಲಾಹಾಬಾದ್ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಕಮ್ರಾ ಅವರ ಟ್ವೀಟ್‌ಗಳು ವೈರಲ್ ಆಗಿದ್ದು, ಇದರಿಂದ ನ್ಯಾಯಾಂಗದ ಘನತೆಗೆ ಚ್ಯುತಿಯಾಗಿದೆ ಎಂದು ಹೇಳಿ ನಿಂದನಾ ಪ್ರಕ್ರಿಯೆಗೆ ವೇಣುಗೋಪಾಲ್ ಅನುಮತಿ ನೀಡಿದ್ದಾರೆ.
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಜೆಎನ್‌ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ನ್ಯಾಯಾಂಗ ಬಂಧನವನ್ನು ನವೆಂಬರ್ 23ರವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಆರೋಪಿಗಳನ್ನು ಇನ್ನಷ್ಟು ದಿನ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕಡಕಡಡೂಮಾದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಅಮಿತಾಭ್ ರಾವತ್ ಆದೇಶ ನೀಡಿದರು. ಇಮಾಮ್ ಮತ್ತು ಖಾಲಿದ್ ಅವರನ್ನು ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ನಟಿಯೊಬ್ಬರ ಅಪಹರಣ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಮಲೆಯಾಳಂ ನಟ ದಿಲೀಪ್ ವಿರುದ್ದ ದಾಖಲಿಸಲಾಗಿರುವ ಪ್ರಕರಣದ ವಿಚಾರಣೆಯನ್ನು ಒಬ್ಬರು ನ್ಯಾಯಮೂರ್ತಿಯ ಪೀಠದಿಂದ ಮತ್ತೊಬ್ಬರಿಗೆ ವರ್ಗಾವಣೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳು ಪಕ್ಷಪಾತಿಯಾಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಹಾಗೂ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ವಿ ಜಿ ಅರುಣ್ ಅವರಿದ್ದ ಏಕಸದಸ್ಯ ಪೀಠವು ವಜಾಗೊಳಿಸಿತು. ಎರ್ನಾಕುಲಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಮುಂದೆ ಪ್ರಕರಣ ವಿಚಾರಣೆ ನಡೆಯುತ್ತಿದೆ.