ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ವಿದೇಶ ಪ್ರಯಾಣದ ಮಾಹಿತಿ ಬಹಿರಂಗಗೊಳಿಸುವಂತೆ ನಿರ್ದೇಶಿಸಿ ಆದೇಶಿಸಿದ್ದ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶಕ್ಕೆ ದೆಹಲಿ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ), ವಾಯುಪಡೆ ಪ್ರಧಾನ ಕಚೇರಿಯ ಸಿಬ್ಬಂದಿ ಸೇವಾ ನಿರ್ದೇಶನಾಲಯ, ಭಾರತೀಯ ವಾಯು ಪಡೆ (ಅರ್ಜಿದಾರರು) ಸಲ್ಲಿಸಿದ್ದ ಮನವಿ ಆಧರಿಸಿ ನ್ಯಾಯಮೂರ್ತಿ ನವೀನ್ ಚಾವ್ಲಾ ನೇತೃತ್ವದ ಏಕಸದಸ್ಯ ಪೀಠವು ನೋಟಿಸ್ ಜಾರಿಗೊಳಿಸಿದ್ದು, ಆರ್‌ಟಿಐ ಅರ್ಜಿದಾರ, ನಿವೃತ್ತ ವಾಯುಪಡೆ ಅಧಿಕಾರಿ ಲೋಕೇಶ್ ಕೆ ಬಾತ್ರಾ ಅವರಿಂದ ಪ್ರತಿಕ್ರಿಯೆ ಬಯಸಿದೆ. ಅರ್ಜಿದಾರರನ್ನು ರಾಹುಲ್ ಶರ್ಮಾ ಪ್ರತಿನಿಧಿಸಿದ್ದರು.
ನಕಲಿ ಟಿಆರ್‌ಪಿ ಹಗರಣ ವಿಚಾರದಲ್ಲಿ ಮುಂಬೈ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಪ್ರಿಯಾ ಮುಖರ್ಜಿ ಅವರಿಗೆ ಮುಂಬೈ ನ್ಯಾಯಾಲಯವು ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸಂಬಂಧಿತ ಪೊಲೀಸ್ ಠಾಣೆಗೆ ವಾರಕ್ಕೆ ಒಮ್ಮೆ ಭೇಟಿ ನೀಡುವಂತೆ ಸೆಷನ್ಸ್ ನ್ಯಾಯಾಲಯವು ಮುಖರ್ಜಿ ಅವರಿಗೆ ಸೂಚಿಸಿದ್ದು, ಒಂದೊಮ್ಮೆ ಆಕೆಯನ್ನು ಬಂಧಿಸಿದರೆ ಅವರನ್ನು 50 ಸಾವಿರ ರೂಪಾಯಿ ಮೊತ್ತದ ಬಾಂಡ್ ಮೇಲೆ ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ. ಎಫ್‌ಐಆರ್ ಅಥವಾ ಹನ್ಸ್ ಸಮೂಹ ದಾಖಲಿಸಿರುವ ದೂರಿನಲ್ಲಿ ರಿಪಬ್ಲಿಕ್ ಟಿವಿ ಅಥವಾ ಎಆರ್‌ಜಿಯ ಯಾವುದೇ ಅಧಿಕಾರಿಯನ್ನು ಆರೋಪಿಗಳು ಎಂದು ಉಲ್ಲೇಖಿಸಲಾಗಿಲ್ಲ ಎಂದು ಮುಖರ್ಜಿ ಜಾಮೀನು ಮನವಿಯಲ್ಲಿ ವಿವರಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕತೆಯ ನಡುವೆಯೂ ಕೇರಳದಲ್ಲಿ ಸಿಬಿಎಸ್‌ಇ ಮಾನ್ಯತೆ ಪಡೆದಿರುವ ಶಾಲೆಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಶಾಲಾ ಶುಲ್ಕಕ್ಕೆ ಸಂಬಂಧಿಸಿದಂತೆ ತನ್ನ ನಿರ್ದೇಶನಗಳ ನಡುವೆಯೂ ಅದನ್ನು ಜಾರಿಗೊಳಿಸಲಾಗದಿರುವುದಕ್ಕೆ ಅಸಹಾಯಕತೆ ವ್ಯಕ್ತಪಡಿಸಿರುವುದಕ್ಕೆ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿದ್ದ ಏಕಸದಸ್ಯ ಪೀಠವು ಸಿಬಿಎಸ್‌ಇ ತಾನೇಕೆ ಅಗತ್ಯವಾದ ಪರಿಶೀಲನೆ ನಡೆಸಲಾಗುತ್ತಿಲ್ಲ ಎಂಬುದನ್ನು ವಿವರಿಸಿಲ್ಲ ಎಂದು ಹೇಳಿತು. ಸಿಬಿಎಸ್‌ಇ ನಿಲುವು ಸಂಕಟಕರವೂ, ದುರದೃಷ್ಟಕರವೂ ಆಗಿದೆ ಎಂದಿರುವ ನ್ಯಾಯಮೂರ್ತಿ ರಾಮಚಂದ್ರನ್ ಅವರ ಪೀಠವು, ಶಾಲೆಗಳು ತಮ್ಮ ವೆಚ್ಚಕ್ಕೆ ಅನುಗುಣವಾಗಿ ಶುಲ್ಕ ಸಂಗ್ರಹಿಸಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಹೇಗೆ ಯೋಜಿಸಿದೆ ಎನ್ನುವುದನ್ನು ತಿಳಿಯಬಯಸಿದೆ.