ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 19-12-2020

>> ಉತ್ತರಪ್ರದೇಶದ ಜೋಡಿಗೆ ದೆಹಲಿ ಪೊಲೀಸರ ರಕ್ಷಣೆ >> ಕಂಗನಾ ವಿರುದ್ಧದ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ >> ಬಗರ್‌ ಹುಕುಂ ಪ್ರಕರಣ >> ಕ್ಷಮೆ ಕೋರಿದ ಜೈರಾಂ ರಮೇಶ್‌

Bar & Bench

ಕಿರುಕುಳ ತಪ್ಪಿಸಿಕೊಳ್ಳಲು ಉತ್ತರಪ್ರದೇಶದಿಂದ ಬಂದ ಅಂತರ್ಧರ್ಮೀಯ ಜೋಡಿಗೆ ರಕ್ಷಣೆ ನೀಡುವುದಾಗಿ ದೆಹಲಿ ಹೈಕೋರ್ಟ್‌ಗೆ ತಿಳಿಸಿದ ದೆಹಲಿ ಪೊಲೀಸರು

ಕಿರುಕುಳ ಮತ್ತು ಬೆದರಿಕೆಯಿಂದಾಗಿ ಉತ್ತರಪ್ರದೇಶದಿಂದ ಪಾರಾಗಿ ಬಂದಿರುವ ಅಂತರ್ಧರ್ಮೀಯ ಜೋಡಿಗೆ ಸೂಕ್ತ ರಕ್ಷಣೆ ನೀಡುವುದಾಗಿ ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ರಕ್ಷಣೆ ಹಾಗೂ ವಸತಿಯನ್ನು ಕೋರಿ ಜೋಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಮಲ್ಹೋತ್ರಾ ಅವರಿದ್ದ ಏಕಸದಸ್ಯ ಪೀಠದ ಎದುರು ಈ ಹೇಳಿಕೆ ನೀಡಲಾಗಿದೆ.

Delhi Police

ಮತಾಂತರವಾಗುವ ಯಾವುದೇ ಉದ್ದೇಶವಿಲ್ಲದೆ ಇಲ್ಲದೆ ಸ್ವಇಚ್ಛೆ ಮತ್ತು ಸಂಕಲ್ಪದಿಂದ ಇಬ್ಬರೂ 1954ರ ವಿಶೇಷ ವಿವಾಹ ಕಾಯಿದೆಯಡಿ ಮದುವೆಯಾಗಲು ಮುಂದಾಗಿದ್ದಾರೆ. ಮದುವೆಯಾಗಲು ಹೊರಟಿರುವ ಮುಸ್ಲಿಂ ವ್ಯಕ್ತಿ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಬಹುದು ಮತ್ತು ನಿಗಾ ಗುಂಪುಗಳಿಂದ ಕಿರುಕುಳ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಅವರು ಉತ್ತರಪ್ರದೇಶ ಬಿಟ್ಟು ಬಂದಿದ್ದಾರೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಅರ್ಜಿಯ ಸಂಬಂಧ ದೆಹಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಜೋಡಿಗೆ ವಸತಿಯನ್ನು ಕಲ್ಪಿಸಲು ಸಿದ್ಧವಿರುವುದಾಗಿಯೂ ತಿಳಿಸಿದೆ.

ನಟಿ ಕಂಗನಾ ವಿರುದ್ಧ ಜಾವೇದ್‌ ಅಖ್ತರ್‌ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ: ತನಿಖೆಗೆ ಆದೇಶಿಸಿದ ಮುಂಬೈ ನ್ಯಾಯಾಲಯ

ಬಾಲಿವುಡ್‌ ನಟಿ ಕಂಗನಾ ರನೌತ್‌ ವಿರುದ್ಧ ಖ್ಯಾತ ಚಿತ್ರಸಾಹಿತಿ ಜಾವೇದ್‌ ಅಖ್ತರ್‌ ಹೂಡಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ ಮುಂಬೈನ ನ್ಯಾಯಾಲಯವೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಜುಹು ಪೊಲೀಸರಿಗೆ ಆದೇಶಿಸಿದೆ. ರಿಪಬ್ಲಿಕ್‌ ಟಿವಿಯ ಅರ್ನಾಬ್‌ ಗೋಸ್ವಾಮಿ ಅವರಿಗೆ ನೀಡಿದ ಸಂದರ್ಶನದಲ್ಲಿ ಕಂಗನಾ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅವರು ಅರ್ಜಿ ಸಲ್ಲಿಸಿದ್ದರು.

Kangana Ranaut and Javed Akthar

ಜನವರಿ 16ರೊಳಗೆ ತನಿಖೆಯ ವರದಿ ಸಲ್ಲಿಸುವಂತೆ ಅಂಧೇರಿ ಮೆಟ್ರೊಪಾಲಿಟನ್‌ ನ್ಯಾಯಾಧೀಶ ಆರ್‌ ಆರ್‌ ಖಾನ್‌ ಅವರು ಪೊಲೀಸರಿಗೆ ಸೂಚಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 499 ಮತ್ತು 500ರ ಅಡಿಯಲ್ಲಿ ನಟಿ ವಿರುದ್ಧ ಪ್ರಕರಣ ದಾಖಲಿಸುವಂತೆ ಅಖ್ತರ್‌ ನ್ಯಾಯಾಲಯದ ಮೊರೆ ಹೋಗಿದ್ದರು. ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿಗೆ ಸಂಬಂಧಿಸಿದಂತೆ ತಮ್ಮ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದರು. ಅಖ್ತರ್‌ ಪರವಾಗಿ ನ್ಯಾಯವಾದಿ ನಿರಂಜನ್‌ ಮುಂಡರಗಿ ವಾದ ಮಂಡಿಸುತ್ತಿದ್ದಾರೆ.

ಯಾವ ವಿಧಾನಸಭಾ ಕ್ಷೇತ್ರದಲ್ಲಿ ಬಗರ್‌ ಹುಕುಂ ಸಮಿತಿ ರಚಿಸಲಾಗಿಲ್ಲ ಎಂದು ಪರಿಶೀಲಿಸಲು ಅರ್ಜಿದಾರರಿಗೆ ಸೂಚಿಸಿದ ಕರ್ನಾಟಕ ಹೈಕೋರ್ಟ್‌

ಬಗರ್‌ ಹುಕುಂ ರೈತರಿಗೆ ಸಾಗುವಳಿ ಪತ್ರಗಳನ್ನು ವಿತರಿಸುವ ಸಂಬಂಧ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಬಗರ್‌ ಹುಕುಂ ಸಮಿತಿ ರಚಿಸಲಾಗಿಲ್ಲ ಎಂಬ ಕುರಿತು ನಿರ್ದಿಷ್ಟ ಮಾಹಿತಿ ಪಡೆಯುವಂತೆ ಅರ್ಜಿದಾರರೊಬ್ಬರಿಗೆ ಕರ್ನಾಟಕ ಹೈಕೋರ್ಟ್‌ ಸೂಚಿಸಿದೆ. ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಗರ್‌ಹುಕುಂ ಸಮಿತಿಯನ್ನು ರಚಿಸಲು ಸರ್ಕಾರ ವಿಫಲವಾಗಿದೆ ಎಂದು ವಕೀಲ ಎಲ್‌ ರಮೇಶ್‌ ನಾಯಕ್‌ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

Crop

ಶನಿವಾರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌ ಓಕಾ ಅವರು 1964ರ ಕರ್ನಾಟಕ ಭೂ ಕಂದಾಯ ಕಾಯಿದೆಯ ಸೆಕ್ಷನ್ 94ಎ ಅಡಿಯ (ಐ) ಉಪ ಸೆಕ್ಷನ್‌ ಅನ್ವಯ ಯಾವ ನಿರ್ದಿಷ್ಟ ಕ್ಷೇತ್ರದಲ್ಲಿ ಸಮಿತಿ ರಚಿಸಿಲ್ಲ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದು ರಾಜ್ಯ ಸರ್ಕಾರಕ್ಕೆ ಖಚಿತ ಮನವಿ ಸಲ್ಲಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿ ಅರ್ಜಿ ವಿಲೇವಾರಿಗೊಳಿಸಿದರು.

ವಿವೇಕ್‌ ದೋವಲ್‌ ಕ್ಷಮೆ ಕೋರಿದ ಜೈರಾಂ ರಮೇಶ್‌: ಮಾನನಷ್ಟ ಮೊಕದ್ದಮೆ ಇತ್ಯರ್ಥ

2019ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಪುತ್ರ ವಿವೇಕ್‌ ದೋವಲ್‌ ವಿರುದ್ಧ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಿದ್ದಾರೆ. ಆ ಮೂಲಕ ಜೈರಾಂ ರಮೇಶ್‌ ವಿರುದ್ಧ ದೆಹಲಿಯ ರೌಸ್‌ ಅವೆನ್ಯೂ ಮೆಟ್ರೊಪಾಲಿಟನ್‌ ನ್ಯಾಯಾಲಯದಲ್ಲಿ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆ ಇತ್ಯರ್ಥಗೊಂಡಿದೆ.

Vivek Doval, Jairam Ramesh

ʼದ ಕಾರವಾನ್ʼ‌ ನಿಯತಕಾಲಿಕದಲ್ಲಿ ʼದ ಡಿ ಕಂಪೆನೀಸ್‌ʼ ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ಲೇಖನವನ್ನು ಆಧರಿಸಿ ಜೈರಾಂ ರಮೇಶ್‌ ಅವರು ಪತ್ರಿಕಾಗೋಷ್ಠಿಯಲ್ಲಿ ದೋವಲ್‌ ವಿರುದ್ಧ ಕೆಲ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್‌, ಪತ್ರಿಕೆ ಹಾಗೂ ಸುದ್ದಿ ಬರೆದ ಕೌಶಲ್‌ ಶ್ರಾಫ್‌ ಅವರ ವಿರುದ್ಧ ದೋವಲ್‌ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಜೈರಾಂ ವಿರುದ್ಧದ ಪ್ರಕರಣ ತಾತ್ವಿಕ ಅಂತ್ಯ ಕಂಡಿದ್ದರೂ ನಿಯತಕಾಲಿಕ ಹಾಗೂ ಪತ್ರಕರ್ತ ಶ್ರಾಫ್‌ ವಿರುದ್ಧದ ಮೊಕದ್ದಮೆ ಮುಂದುವರೆಯಲಿದೆ. ದೋವಲ್‌ ಪರವಾಗಿ ನ್ಯಾಯವಾದಿ ಡಿ ಪಿ ಸಿಂಗ್‌ ವಾದ ಮಂಡಿಸುತ್ತಿದ್ದಾರೆ.