ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 16-1-2021

>> ಪರಿಷ್ಕರಿಸಿದ ಗೌಪ್ಯತಾ ನೀತಿ ಹಿಂಪಡೆಯಲು ವಾಟ್ಸಾಪ್‌ಗೆ ನಿರ್ದೇಶಿಸುವಂತೆ ಕೋರಿ ಮನವಿ ಸಲ್ಲಿಕೆ >> ಸಲೂನ್‌ಗಳನ್ನು ತೆರೆಯಲು ಕೋರಿದ್ದ ಅರ್ಜಿಗಳು >> ʼಸರ್ಕಾರಿ ಕಟ್ಟಡಗಳು ವಿಶೇಷ ಚೇತನಸ್ನೇಹಿಯಾಗಿವೆಯೇ?ʼ

Bar & Bench

ಪರಿಷ್ಕರಿಸಿದ ಗೌಪ್ಯತೆ ನೀತಿ ಹಿಂಪಡೆಯಲು ವಾಟ್ಸಾಪ್‌ಗೆ ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ

ವಾಟ್ಸಪ್‌ ಜಾರಿಗೊಳಿಸಿರುವ ಖಾಸಗಿ ಗೋಪ್ಯತಾ ನೀತಿಯನ್ನು ಹಿಂಪಡೆಯುವಂತೆ ಮತ್ತು ಫೇಸ್‌ಬುಕ್‌ ಮತ್ತು ವಾಟ್ಸಪ್‌ ಜಾರಿಗೊಳಿಸಿರುವ ದತ್ತಾಂಶ ಹಂಚಿಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರೂಪಿಸುವಂತೆ ಸಂವಿಧಾನದ 32ನೇ ವಿಧಿಯಡಿ ಅಖಿಲ ಭಾರತ ವರ್ತಕರ ಒಕ್ಕೂಟವು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ.

Facebook, WhatsApp

ಜನರ ಖಾಸಗಿ ಹಕ್ಕನ್ನು ರಕ್ಷಿಸುವ ತನ್ನ ಸಾಂವಿಧಾನಿಕ ಹಕ್ಕು ಮತ್ತು ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿರುವುದರಿಂದ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವಂತಾಗಿದೆ ಎಂದು ವರ್ತಕರ ಒಕ್ಕೂಟ ಪ್ರತಿನಿಧಿಸುತ್ತಿರುವ ವಕೀಲ ವಿವೇಕ್‌ ನಾರಾಯಣ್‌ ಶರ್ಮಾ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ. “ಸದರಿ ಪ್ರಕರಣದಲ್ಲಿ ಅಗತ್ಯ ಮತ್ತು ನಿರ್ಬಂಧಿತ ಷರತ್ತುಗಳನ್ನು ವಿಧಿಸುವಲ್ಲಿ ಕೇಂದ್ರ ವಿಫಲವಾಗಿದೆ. ವಾಟ್ಸಪ್‌ ಪ್ರಸ್ತಾವಿತ ನೀತಿಯ ಬಗ್ಗೆ ಯುರೋಪಿಯನ್ ಒಕ್ಕೂಟದ ಅಪನಂಬಿಕೆ ಕುರಿತಾದ ಕಾನೂನುಗಳ ಪ್ರಾಧಿಕಾರವು 2017ರಲ್ಲಿ ಗಂಭೀರ ನಿರ್ಬಂಧ ಮತ್ತು 110 ಮಿಲಿಯನ್ ಯುರೋ ದಂಡ ವಿಧಿಸಿತ್ತು,” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ನಿರ್ಬಂಧ ಮುಂದುವರಿಸುವುದು ನ್ಯಾಯಸಮ್ಮತವಲ್ಲ: ಸ್ಪಾಗಳು, ಕ್ಷೇಮ ಚಿಕಿತ್ಸಾಲಯ ತೆರೆಯಲು ದೆಹಲಿ ಹೈಕೋರ್ಟ್ ಅನುಮತಿ

ಕೋವಿಡ್‌ ಮುನ್ನೆಚ್ಚರಿಕೆಗಳ ವೀಕ್ಷಣೆಗೆ ಒಳಪಟ್ಟು ರಾಷ್ಟ್ರ ರಾಜಧಾನಿಯಲ್ಲಿ ಸ್ಪಾಗಳು, ಸ್ವಾಸ್ಥ್ಯ ಚಿಕಿತ್ಸಾಲಯಗಳು ಮತ್ತು ಇದೇ ರೀತಿಯ ಸಂಸ್ಥೆಗಳನ್ನು ಮರಳಿ ತೆರೆಯಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಸಲೂನ್‌ಗಳ ಕಾರ್ಯಾಚಾರಣೆಗೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರವು ಸ್ಪಾಗಳ ಮೇಲಿನ ನಿರ್ಬಂಧವನ್ನು ಸಡಿಲಗೊಳಿಸಿಲ್ಲ. ವಾಸ್ತವದಲ್ಲಿ ಸಲೂನ್‌ ಮತ್ತು ಸ್ಪಾಗಳ ನಡುವಿನ ವ್ಯತ್ಯಾಸ ಅತ್ಯಂತ ಕಡಿಮೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ.

Delhi High Court

“ಸಲೂನ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟು ಸ್ಪಾಗಳ ಮೇಲೆ ನಿರ್ಬಂಧ ವಿಧಿಸುವುದು ಸಂಸ್ಥೆಗಳು ಮತ್ತು ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಹಕ್ಕುಗಳ ಉಲ್ಲಂಘನೆಯಾಗಿದೆ. ಸ್ಪಾ ಸೇವೆ ಒದಗಿಸುವ ಸಂಸ್ಥೆಗಳು ಮತ್ತು ಈ ಸಂಸ್ಥೆಗಳಿಗೆ ಭೇಟಿ ನೀಡುವ ಗ್ರಾಹಕರು ತೆಗೆದುಕೊಳ್ಳಬೇಕಾದ ಕಟ್ಟುನಿಟ್ಟಾದ ಸುರಕ್ಷತೆಗಳನ್ನು ಸೂಚಿಸುವ ಪ್ರಾಮುಖ್ಯತೆಯನ್ನು ಈ ನ್ಯಾಯಾಲಯವು ಅರಿತುಕೊಂಡಿದ್ದರೂ, ಸ್ಪಾಗಳನ್ನು ಮತ್ತೆ ತೆರೆಯುವ ನಿರ್ಬಂಧವನ್ನು ಮುಂದುವರೆಸುವುದು ನ್ಯಾಯಸಮ್ಮತವಲ್ಲ,” ಎಂದು ನ್ಯಾಯಾಲಯ ಹೇಳಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಎಲ್ಲಾ ಸ್ಪಾಗಳು ಮತ್ತು ಆ ರೀತಿಯ ಸಂಸ್ಥೆಗಳನ್ನು ಪಾಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ವಿಶೇಷ ಚೇತನ ವ್ಯಕ್ತಿಗಳು ಪ್ರಯಾಗ್‌ರಾಜ್‌ನ ಸರ್ಕಾರಿ ಕಟ್ಟಡ ಪ್ರವೇಶಿಸಲು ಅಗತ್ಯ ಸೌಲಭ್ಯಗಳಿವೆಯೇ ಎಂದು ಪರಿಶೀಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದ ಅಲಾಹಾಬಾದ್‌ ಹೈಕೋರ್ಟ್‌

ಪ್ರಯಾಗ್‌ರಾಜ್‌ನ ಎಲ್ಲಾ ಸರ್ಕಾರಿ ಕಟ್ಟಡಗಳು ವಿಶೇಷ ಚೇತನ ವ್ಯಕ್ತಿಗಳು ಪ್ರವೇಶಿಸಲು ಅನುಕೂಲವಾಗುವಂತೆ ಇವೆಯೇ ಎಂದು ಪರಿಶೀಲಿಸಲು ಉತ್ತರಪ್ರದೇಶ ಸರ್ಕಾರಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಸೂಚಿಸಿದೆ. 2016ರ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ಅನುಷ್ಠಾನಕ್ಕೆ ಒತ್ತಾಯಿಸಿ 16 ವಿದ್ಯಾರ್ಥಿಗಳು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥೂರ್ ನ್ಯಾ. ಸೌರಭ್ ಶ್ಯಾಮ್ ಶಂಶೇರಿ ಅವರಿದ್ದ ಪೀಠ ಈ ಆದೇಶ ನೀಡಿದೆ. ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಪ್ರತಿವಾದಿಗಳಿಗೆ ಅವಕಾಶ ನೀಡಿರುವ ಪೀಠ ಮತ್ತೊಂದೆಡೆ ಕಟ್ಟಡಗಳ ಪರಿಶೀಲನೆಗೆ ಸಂಬಂಧಿಸಿದ ವಿವರವಾದ ವರದಿಯನ್ನು ಫೆ. 1ರ ಒಳಗೆ ಸಲ್ಲಿಸುವಂತೆ ಸೂಚಿಸಿದೆ. ಆನಂತರ ಮತ್ತೆ ವಿಚಾರಣೆ ಮುಂದುವರೆಯಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸುಪ್ರೀಂಕೋರ್ಟ್‌ ಮಾರ್ಗಸೂಚಿ ಕಾರ್ಯಗತಗೊಳಿಸದೇ ಇರುವುದು ವಿಶೇಷ ಚೇತನ ವ್ಯಕ್ತಿಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗುತ್ತದೆ. ವಿವಿಧ ಸರ್ಕಾರಿ ಇಲಾಖೆಗಳಿರುವ ಎಂಟು ಕಟ್ಟಡಗಳನ್ನು ಪರಿಶೀಲಿಸಿದಾಗ ಕಟ್ಟಡಗಳಲ್ಲಿ ವಿಶೇಷ ಚೇತನ ವ್ಯಕ್ತಿಗಳಿಗೆ ಸಾಕಷ್ಟು ಸೌಲಭ್ಯ ಇಲ್ಲದಿರುವುದು ಕಂಡುಬಂದಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.