ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 27-1-2021

Bar & Bench

ಉಜಿರೆ ಬಾಲಕನ ಅಪಹರಣ ಪ್ರಕರಣದ ಆರೋಪಿಗಳಿಗೆ ಜಾಮೀನು ನಿರಾಕರಿಸಿದ ದಕ್ಷಿಣ ಕನ್ನಡ ನ್ಯಾಯಾಲಯ

ಬೆಳ್ತಂಗಡಿ ತಾಲ್ಲೂಕು ಉಜಿರೆಯ ಬಾಲಕ ಅನುಭವ್‌ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ಇಬ್ಬರು ಆರೋಪಿಗಳ ಜಾಮೀನು ನಿರಾಕರಿಸಿದೆ. ಆರೋಪಿಗಳಾದ ಕೋಲಾರ ಜಿಲ್ಲೆ ಹುಲದೇನಹಳ್ಳಿಯ ಕೆ ಎನ್‌ ಮಂಜುನಾಥ್‌ ಮತ್ತು ಮಹೇಶ್‌ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು ಆರೋಪಿಗಳ ವಾದದಲ್ಲಿ ಹುರುಳಿಲ್ಲ ಎಂಬ ಕಾರಣಕ್ಕೆ ನ್ಯಾಯಾಧೀಶ ಮುರಳೀಧರ್‌ ಪೈ ಅವರು ಜಾಮೀನು ನಿರಾಕರಿಸಿದರು.

Kidnapped boy Anubhav

ಡಿಸೆಂಬರ್‌ 17ರಂದು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಉಜಿರೆಯ ಉದ್ಯಮಿ ರಥಬೀದಿ ನಿವಾಸಿ ಬಿಜೋಯ್‌ ಅವರ ಮಗ ಎಂಟು ವರ್ಷದ ಅನುಭವ್‌ನನ್ನು ಅಪಹರಿಸಿದ್ದರು. ಬಳಿಕ ಬಾಲಕನ ಪೋಷಕರಿಗೆ ಕರೆ ಮಾಡಿ ಬಿಟ್‌ ಕಾಯಿನ್‌ ರೂಪದಲ್ಲಿ ರೂ 17 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದರು. ಬಾಲಕನ ಅಜ್ಜ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದಾದ ಒಂದು ದಿನದ ಬಳಿಕ ಪೊಲೀಸರು ಕೋಲಾರದಲ್ಲಿದ್ದ ಆರೋಪಿಗಳನ್ನು ಬಂಧಿಸಿದ ಅನುಭವ್‌ನನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದರು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ ಶೇಖರ್‌ ಶೆಟ್ಟಿ, ಮತ್ತು ಆರೋಪಿಗಳ ಪರವಾಗಿ ಅತುಲ್‌ ಅಡ್ಯಂತಾಯ ಅವರು ವಾದ ಮಂಡಿಸಿದ್ದರು.

ಸಿ ಎಸ್‌ ಕರ್ಣನ್‌ ಪ್ರಕರಣದಲ್ಲಿ ವರ್ಚುವಲ್‌ ನ್ಯಾಯಾಲಯ ಸ್ಥಗಿತಗೊಂಡ ಅನುಭವ: ಭೌತಿಕ ವಿಚಾರಣೆಗೆ ಮುಂದಾದ ಮದ್ರಾಸ್‌ ಹೈಕೋರ್ಟ್‌

ನ್ಯಾಯಾಧೀಶರು ಮತ್ತು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ಕಾರಣಕ್ಕೆ ಬಂಧಿತರಾಗಿರುವ ನಿವೃತ್ತ ನ್ಯಾಯಮೂರ್ತಿ ಸಿ ಎಸ್‌ ಕರ್ಣನ್‌ ಅವರ ಪ್ರಕರಣವನ್ನು ವರ್ಚುವಲ್‌ ಕಲಾಪದ ಬದಲು ಭೌತಿಕ ವಿಚಾರಣೆ ನಡೆಸಲು ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿ ವಿ ಭಾರತಿದಾಸನ್‌ ಬುಧವಾರ ತೀರ್ಮಾನಿಸಿದ್ದಾರೆ. ನೂರಾರು ಮಂದಿ ಲಾಗಿನ್‌ ಆಗಿ ವರ್ಚುವಲ್‌ ನ್ಯಾಯಾಲಯವನ್ನು ಸ್ತಬ್ಧಗೊಳಿಸುತ್ತಿರುವ ಅನುಭವವಾಗಿದ್ದು ಈ ಹಿನ್ನಲೆಯಲ್ಲಿ ಭೌತಿಕ ಕಲಾಪಕ್ಕೆ ಮುಂದಾಗಿರುವುದಾಗಿ ಪೀಠ ತಿಳಿಸಿದೆ.

Madras High Court, Virtual Court

ನ್ಯಾಯಾಲಯದ ವರ್ಚುವಲ್‌ ವಿಚಾರಣೆಯನ್ನು ರೆಕಾರ್ಡ್‌ ಮಾಡಲಾಗುತ್ತಿದೆ ಎಂದು ಇತರ ನ್ಯಾಯಪೀಠಗಳಿಂದ ದೂರು ಬಂದಿರುವುದನ್ನು ನ್ಯಾಯಮೂರ್ತಿ ಭಾರತಿದಾಸನ್ ತಿಳಿಸಿದರು. ಕರ್ಣನ್‌ ಅವರ ಜಾಮೀನಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿ ಇದಾಗಿದ್ದು ಮೊದಲ ಅರ್ಜಿ ತಿರಸ್ಕೃತವಾಗಿತ್ತು. ಆರು ತಿಂಗಳಿನಿಂದ ಜೈಲಿನಲ್ಲಿದ್ದು ಕರ್ಣನ್‌ ಬಳಲಿದ್ದಾರೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಜೊತೆಗೆ ಅವರ ಸಹೋದರ ತೀರಿಕೊಂಡದ್ದು ಅವರ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ತಾಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಗ: ತನಿಖೆಯಲ್ಲಿ ಲೋಪವಿದೆ ಎಂದು ಜಾಮೀನು ನೀಡಿದ ಕೇರಳ ಹೈಕೋರ್ಟ್‌

ಮಗನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಮಹಿಳೆಗೆ ಕೇರಳ ಹೈಕೋರ್ಟ್‌ ಇತ್ತೀಚೆಗೆ ಜಾಮೀನು ನೀಡಿದೆ. ಪೊಲೀಸರ ಇದುವರೆಗಿನ ತನಿಖೆಯಲ್ಲಿ ಹಲವು ಲೋಪಗಳಿವೆ ಎಂದಿರುವ ನ್ಯಾಯಾಲಯ ʼಮಹಿಳೆಯ ವಿರುದ್ಧದ ಆರೋಪ ಆಘಾತಕಾರಿ, ಅಸಹಜವಾದದ್ದು ಹಾಗೂ ನಂಬಲರ್ಹವಲ್ಲ ಎಂದು ತಿಳಿಸಿದೆ. ಅಲ್ಲದೆ ದೂರಿನ ನೈಜತೆ ಪತ್ತೆ ಹಚ್ಚಲು ಪ್ರಾಥಮಿಕ ತನಿಖೆ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.

Justice Shircy V, Kerala High Court

ತನ್ನ ಹದಿಮೂರು ವರ್ಷದ ಮಗನಿಗೆ ಕಳೆದ ಒಂದು ದಶಕದಿಂದ ಆತನ ತಾಯಿ ಲೈಂಗಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯ ಪರಿತ್ಯಕ್ತ ಗಂಡ ದೂರು ನೀಡಿದ್ದರು. ಘಟನೆ ಶಾರ್ಜಾದಲ್ಲಿ ನಡೆದಿದ್ದು ಈ ಸಂಬಂಧ ದೂರು ನೀಡಲು ಮಗ ಮತ್ತು ತಂದೆ ಕೇರಳಕ್ಕೆ ವಾಪಸ್ಸಾಗಿದ್ದರು. ಜೊತೆಗೆ ತಾಯಿಯ ವಾದವನ್ನೂ ಆಲಿಸಿದ ನ್ಯಾಯಾಲಯ “ಮಗು ಆತನ ತಾಯಿಯ ವಿರುದ್ಧ ಇಷ್ಟು ಕಠೋರ ಆರೋಪ ಮಾಡಲು ಆತನಿಗೆ ಯಾರಾದರೂ ತಿಳಿಸಿದ್ದರೆ ಅಥವಾ ಅವನಿಗೆ ಹಿಂಸೆ ನೀಡಿದ್ದರೆ ಅವರನ್ನು ಕೂಡ ಪ್ರಕರಣದಲ್ಲಿ ಭಾಗೀದಾರರನ್ನಾಗಿ ಮಾಡಿ ಕಾನೂನಿನ ಪ್ರಕಾರ ಮುಂದುವರೆಯಬೇಕು” ಎಂದು ನ್ಯಾಯಮೂರ್ತಿ ವಿ ಶಿರ್ಸೀ ಅವರಿದ್ದ ಪೀಠ ತಿಳಿಸಿದೆ.