ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-1-2021

Bar & Bench

ಪೋಕ್ಸೊ ಕಾಯಿದೆಯ ಅನ್ವಯ ಸಂತ್ರಸ್ತೆಯ ಕೈಹಿಡಿಯುವುದು ಅಥವಾ ಆರೋಪಿಯ ಪ್ಯಾಂಟ್‌ ಜಿಪ್‌ ತೆರೆದಿರುವುದು ಲೈಂಗಿಕ ಕಿರುಕುಳವಲ್ಲ: ಬಾಂಬೆ ಹೈಕೋರ್ಟ್‌

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್‌ 7ರಲ್ಲಿ ಉಲ್ಲೇಖಿಸಿರುವಂತೆ ಅಪ್ರಾಪ್ತರ ಕೈಹಿಡಿದುಕೊಳ್ಳುವುದು ಅಥವಾ ನಿರ್ದಿಷ್ಟ ಸಮಯದಲ್ಲಿ ಆರೋಪಿಯ ಪ್ಯಾಂಟಿನ ಜಿಪ್‌ ತೆರೆದಿರುವುದು ಲೈಂಗಿಕ ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಹೇಳಿದೆ.

Bombay High Court Nagpur bench, Justice Pushpa Ganediwala

ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದಿರದ ಕಾರಣ ಪೊಕ್ಸೊ ಕಾಯಿದೆಯಡಿ ಲೈಂಗಿಕ ಉದ್ದೇಶ ಹೊಂದಿಲ್ಲ ಎಂದು ಪೊಕ್ಸೊ ಕಾಯಿದೆಯ ಸೆಕ್ಷನ್‌ 8ರ ಅಡಿಯಲ್ಲಿ (ಲೈಂಗಿಕ ದೌರ್ಜನ್ಯದ ಶಿಕ್ಷೆ) ಆರೋಪಿತನಾದ ವ್ಯಕ್ತಿಯನ್ನು ಬಾಂಬೆ ಹೈಕೋರ್ಟ್‌ ಖುಲಾಸೆಗೊಳಿಸಿದ ವಿವಾದಾತ್ಮಕ ಪ್ರಕರಣ ವರದಿಯಾಗುವುದಕ್ಕೂ ನಾಲ್ಕು ದಿನಗಳ ಮುಂಚೆ ಅಂದರೆ ಜನವರಿ 15ರಂದು ನ್ಯಾಯಮೂರ್ತಿ ಪುಷ್ಪಾ ಗನೇದಿವಾಲಾ ಅವರ ನೇತೃತ್ವದ ಪೀಠ ಮೇಲಿನ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 354ಎ ಮತ್ತು 448 ಹಾಗೂ ಪೋಕ್ಸೊ ಕಾಯಿದೆಯ ಸೆಕ್ಷನ್‌ಗಳಾದ 8, 10 ಮತ್ತು 12ರ ಅಡಿ ಅಪರಾಧಿ ಎಂದು ಘೋಷಿತನಾದ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಜನವರಿ 15ರಂದು ಪೀಠವು ಆದೇಶ ಹೊರಡಿಸಿದೆ. ಪ್ಯಾಂಟಿನ ಜಿಪ್‌ ತೆರೆದುಕೊಂಡು ಪುತ್ರಿಯ ಕೈಹಿಡಿದು ಕೊಠಡಿಗೆ ತೆರಳುತ್ತಿದ್ದನ್ನು ಕಂಡ ಸಂತ್ರಸ್ತೆಯ ತಾಯಿ ಈ ಕುರಿತು ದೂರು ದಾಖಲಿಸಿದ್ದರು.

ದೆಹಲಿ ಹೈಕೋರ್ಟ್‌ನಲ್ಲಿ ನಾವಿಕಾ ಕುಮಾರ್‌ ವಿರುದ್ಧ ಮಾನಹಾನಿ ದಾವೆ ಹೂಡಿದ ರಿಪಬ್ಲಿಕ್‌ ಟಿವಿ

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದ ವಾಟ್ಸಾಪ್‌ ಚಾಟ್‌ ಕುರಿತು ರಿಪಬ್ಲಿಕ್‌ ಟಿವಿ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡಿದ ಆರೋಪದಲ್ಲಿ ಟೈಮ್ಸ್‌ ನೌ ನಿರೂಪಕಿ ನಾವಿಕಾ ಕುಮಾರ್‌ ವಿರುದ್ಧ ದೆಹಲಿಯ ಪಟಿಯಾಲ ಹೌಸ್‌ ಕೋರ್ಟ್‌ಗಳ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ‌ಲ್ಲಿ ರಿಪಬ್ಲಿಕ್‌ ಟಿವಿಯ ಮಾತೃಸಂಸ್ಥೆ ಎಆರ್‌ಜಿ ಔಟ್ಲಯರ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಮಾನಹಾನಿ ಪ್ರಕರಣ ಹೂಡಿದೆ.

Arnab Goswami and Navika Kumar

ಜನವರಿ 18ರಂದು ಟೈಮ್ಸ್‌ ನೌನಲ್ಲಿ ಪ್ರಸಾರವಾದ ನ್ಯೂಸ್‌ ಅವರ್‌ ಕಾರ್ಯಕ್ರಮದಲ್ಲಿ ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಅವರ ವಾಟ್ಸಾಪ್‌ ಚಾಟ್‌ ಕುರಿತಾಗಿ ನಾವಿಕಾ ಕುಮಾರ್‌ ನೀಡಿದ ಹೇಳಿಕೆಗಳಿಗೆ ರಿಪಬ್ಲಿಕ್‌ ಟಿವಿಯು ಆಕ್ಷೇಪ ವ್ಯಕ್ತಪಡಿಸಿದೆ. ರಿಪಬ್ಲಿಕ್‌ ಟಿವಿಯ ವಿರುದ್ಧ ಮಾನಹಾನಿ ವಿಚಾರಗಳನ್ನು ಟಿವಿ ಮತ್ತು ಇಂಟರ್ನೆಟ್‌ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ರಿಪಬ್ಲಿಕ್‌ ಟಿವಿಯು ಟಿಆರ್‌ಪಿ ತಿರುಚುವ ಮೂಲಕ ಯಶಸ್ಸು ಸಾಧಿಸಿದೆ ಎಂದು ದೂರಲಾಗಿದೆ. ಆ ಮೂಲಕ ಜನರ ಭಾವನೆಯನ್ನು ಪ್ರಭಾವಿಸುವ ಕೃತ್ಯ ಮಾಡಲಾಗಿದೆ. ಇವೆಲ್ಲವೂ ಆಧಾರರಹಿತ ವಿಚಾರಗಳಾಗಿವೆ ಎಂದು ರಿಪಬ್ಲಿಕ್‌ ಟಿವಿ ದೂರಿದೆ.

“ನಾವು ಸಂಕಷ್ಟಕ್ಕೆ ಸಿಲುಕಿರುವ ಸುದ್ದಿ ವಾಹಿನಿ” ಎಂದು ಸುಪ್ರೀಂಗೆ ತಿಳಿಸಿದ ಎನ್‌ಡಿಟಿವಿ; ಭದ್ರತೆಗೆ ಷೇರುಗಳನ್ನು ನೀಡಲು ಒಪ್ಪಿಗೆ

ಷೇರುದಾರರಿಗೆ ದರ ಸಂವೇದಿ ಮಾಹಿತಿ ನೀಡಲು ವಿಫಲವಾಗಿರುವುದಕ್ಕೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತೆಗಾಗಿ ಷೇರುಗಳನ್ನು ನೀಡಲು ಬದ್ಧ ಎಂದು ಗುರುವಾರ ನ್ಯೂಡೆಲ್ಲಿ ಟೆಲಿವಿಷನ್‌ (ಎನ್‌ಡಿಟಿವಿ) ಪ್ರವರ್ತಕರಾದ ಪ್ರಣಯ್‌ ರಾಯ್‌ ಮತ್ತು ರಾಧಿಕಾ ರಾಯ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ಯಾವುದೇ ಆದಾಯ ಮೂಲವಿಲ್ಲದ ಎನ್‌ಡಿಟಿವಿಯು ಸಾಕಷ್ಟು ಪ್ರಯಾಸಪಡುತ್ತಿದ್ದು, ಚಾನೆಲ್‌ನ ಷೇರುಗಳನ್ನು ಖಾತರಿಯಾಗಿ ನೀಡಲು ಮಾತ್ರ ಸಾಧ್ಯವಿದೆ ಎಂಧು ರಾಯ್‌ ದಂಪತಿಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಹೇಳಿದ್ದಾರೆ. ಪ್ರವರ್ತಕರು ಖಾತರಿಯಾಗಿ ನೀಡಲು ಸಿದ್ಧವಿರುವ ಹಣದ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ಪ್ರಶ್ನಿಸಿದಾಗ ಮೇಲಿನ ಪ್ರತಿಕ್ರಿಯೆ ವ್ಯಕ್ತವಾಗಿದೆ.

Prannoy Roy, Radhika Roy, NDTV, Supreme Court

“ನಮ್ಮ ಬಳಿ ಯಾವುದೇ ಭದ್ರತೆ ಅಥವಾ ಹಣವಿಲ್ಲ. ಸೆಕ್ಯುರಿಟೀಸ್ ಮೇಲ್ಮನವಿ ನ್ಯಾಯಾಧಿಕರಣದ ಒಪ್ಪಿಗೆಯಿಲ್ಲದೆ ನಾವು ಷೇರುಗಳನ್ನು ನೀಡಲಾಗದು. ಮೇಲ್ಮನವಿಯ ವಿರುದ್ಧ ವಾದಿಸಿಲಿದ್ದೇವೆ, ಇದು ಕೇವಲ ಹತ್ತು ದಿನಗಳ ವಿಚಾರವಾಗಿದೆ” ಎಂದು ರೋಹಟ್ಗಿ ಹೇಳಿದ್ದಾರೆ. “ನೀವು ಭದ್ರತೆ ಒದಗಿಸದೇ ಇದ್ದರೆ ನ್ಯಾಯಾಧಿಕರಣವು ನಿಮ್ಮ ವಾದವನ್ನು 10 ದಿನಗಳ ಬಳಿಕ ಆಲಿಸುವ ಸಾಧ್ಯತೆ ಇಲ್ಲ. ನೀವು ಸ್ವಲ್ಪ ಭದ್ರತೆ ಒದಗಿಸಿ. ನೀವು ಖಾತರಿ ನೀಡುವಿರೇ” ಎಂದು ಸಿಜೆಐ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೋಹಟ್ಗಿ ಅವರು “ನಾನು ಷೇರುಗಳ ಖಾತರಿ ನೀಡುವೆ. ನಾವು ಇನ್ನೂ ಒಂದು ಪ್ರಯಾಸಪಡುತ್ತಿರುವ ಸುದ್ದಿ ವಾಹಿನಿಯಾಗಿದ್ದೇವೆ. ನಮಗೆ ಬೇರಾವುದೇ ಆದಾಯದ ಮೂಲವಿಲ್ಲ” ಎಂದು ಪ್ರತಿಕ್ರಿಯಿಸಿದರು. ನಮಗೆ ನಿಮ್ಮ ಸಂಕಟ ಅರ್ಥವಾಗುತ್ತದೆ ಎಂದು ಸಿಜೆಐ ಬೊಬ್ಡೆ ಹೇಳಿದರು. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಶೇ. 50ರಷ್ಟು ದಂಡ ವಿಧಿಸಿದ್ದನ್ನು ಪಾವತಿಸುವಂತೆ ಸೂಚಿಸಿ ಜನವರಿ 4ರಂದು ಷೇರು ನಿಯಂತ್ರಣ ಮೇಲ್ಮನವಿ ನ್ಯಾಯಾಧಿಕರಣ ಹೊರಡಿಸಿದ್ದ ಮಧ್ಯಂತರ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.

ಕುಂದುಕೊರತೆ ಪರಿಹಾರ ವ್ಯವಸ್ಥೆ ಸಮಸ್ಯೆ: ಬಾಂಬೆ ಹೈಕೋರ್ಟ್‌ನಲ್ಲಿ ಉಬರ್‌ ಇಂಡಿಯಾ ವಿರುದ್ಧ ಮನವಿ ಸಲ್ಲಿಕೆ

ಗ್ರಾಹಕರು ಎತ್ತಿದ ದೂರುಗಳನ್ನು ಪರಿಹರಿಸುವ ಸಂಬಂಧ ಉಬರ್‌ ಇಂಡಿಯಾದಲ್ಲಿ ಗ್ರಾಹಕರ ಕುಂದುಕೊರತೆ ಪರಿಹಾರ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಉಬರ್‌ ವಿರುದ್ಧ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ದಾಖಲಿಸಲಾಗಿದೆ. ಉಬರ್‌ನಲ್ಲಿ ಓಡಾಲು ಕ್ಯಾಬ್‌ ಕಾಯ್ದಿರಿಸುವುದಕ್ಕೆ ಸಂಬಂಧಿಸಿದಂತೆ ಹಾಗೂ ಓಡಾಟದ ಅನುಭವ ಮತ್ತು ಹಣ ಪಾವತಿಗೆ ಸಂಬಂಧಿಸಿದಂತೆ ತಾನು ಸಾಕಷ್ಟು ಸಮಸ್ಯೆ ಎದುರಿಸಿರುವುದಾಗಿ ಅರ್ಜಿದಾರರಾದ ಸವಿನಾ ಕ್ರಾಸ್ಟೊ ವಿವರಿಸಿದ್ದಾರೆ.

Uber

ಓಡಾಟದ ಅನುಭವ ಮತ್ತು ಕೆಟ್ಟ ಅನುಭವಗಳನ್ನು ದಾಖಲಿಸಲು ಉಬರ್‌ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಯಾವುದೇ ಅವಕಾಶವಿಲ್ಲ ಎಂಬುದನ್ನು ಆನಂತರ ಅವರು ಪತ್ತೆಹಚ್ಚಿದ್ದಾರೆ. ಅದರ ವಿವರವೂ ಸಲುಭವಾಗಿ ಪತ್ತೆಯಾಗುವುದಿಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಇದಕ್ಕಾಗಿ ಹಲವಾರು ಕ್ರಮ ಜರುಗಿಸುವ ಮೂಲಕ ಪರಿಹಾರ ಸೂಚಿಸುವಂತೆ ಅವರು ಮನವಿಯಲ್ಲಿ ಕೋರಿದ್ದಾರೆ. 2020ರ ಮಾರ್ಗಸೂಚಿಯ ಅನ್ವಯ ಕುಂದುಕೊರತೆ ಪರಿಹಾರ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಯಾವೆಲ್ಲಾ ಕ್ರಮಕೈಗೊಳ್ಳುತ್ತೀರಿ ಎಂಬುದನ್ನು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಾಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ಅವರಿದ್ದ ಪೀಠವು ಆದೇಶಿಸಿದೆ.