ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |6-1-2021

>> ವಕೀಲ ಪ್ರಾಚಾ ಮನವಿ ತಿರಸ್ಕೃತ >> ಅನಿಲ್ ಅಂಬಾನಿ ಬ್ಯಾಂಕ್ ಖಾತೆ ಕುರಿತು ಯಥಾಸ್ಥಿತಿಗೆ ಆದೇಶ >> ʼಮೊದಲ ಬಾರಿ ಅಪರಾಧ ಎಸಗಿದವರ ಬಗ್ಗೆ ಇರಲಿ ಸಹಾನುಭೂತಿʼ >> ಒಂದು ವರ್ಷದ ಎಲ್‌ಎಲ್‌ಎಂ ರದ್ದು

Bar & Bench

ದಾಳಿಯ ವೀಡಿಯೊ ಕೂಡಲೇ ಒದಗಿಸುವಂತೆ ಕೋರಿ ಸಲ್ಲಿಸಿದ್ದ ವಕೀಲ ಪ್ರಾಚಾ ಅರ್ಜಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ತಮ್ಮ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ವೇಳೆ ಚಿತ್ರೀಕರಿಸಲಾಗಿದ್ದ ವೀಡಿಯೊವನ್ನು ಕೂಡಲೇ ತಮಗೆ ಒಪ್ಪಿಸುವಂತೆ ಹಿರಿಯ ವಕೀಲ ಮೆಹ್ಮೂದ್‌ ಪ್ರಾಚಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ನ್ಯಾಯಾಲಯವೊಂದು ತಿರಸ್ಕರಿಸಿದೆ. ಪಟಿಯಾಲ ಹೌಸ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಈ ಆದೇಶ ನೀಡಿದ್ದಾರೆ,

Mehmood Pracha

ಡಿಸೆಂಬರ್‌ನಲ್ಲಿ ಪಟಿಯಾಲಾ ಹೌಸ್‌ ನ್ಯಾಯಾಲಯದ ಡ್ಯೂಟಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರು ದಾಳಿಯ ವೀಡಿಯೊವನ್ನು ಸಂರಕ್ಷಿಸಿಡುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದರು. ಆದರೆ ವೀಡಿಯೊ ತುಣುಕನ್ನು ಪ್ರಾಚಾ ಅವರಿಗೆ ಒದಗಿಸುವ ಕುರಿತಂತೆ ಸಂಬಂಧಪಟ್ಟ ನ್ಯಾಯಾಲಯ ನಿರ್ಧರಿಸುತ್ತದೆ ಎಂದು ಹೇಳಿದ್ದರು. ಈ ಆದೇಶ ಪ್ರಶ್ನಿಸಿದ್ದ ಪ್ರಾಚಾ ತಮ್ಮ ಕಾನೂನೂಬಾಹಿರ ಮತ್ತು ಕ್ರಿಮಿನಲ್‌ ಕೃತ್ಯಗಳನ್ನು ಮುಚ್ಚಿಹಾಕುವ ಸಲುವಾಗಿ ಪೊಲೀಸರು ವೀಡಿಯೊ ತುಣಕನ್ನು ತಿರುಚುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ವೀಡಿಯೊ ತುಣುಕನ್ನು ತಕ್ಷಣ ಒದಗಿಸಬೇಕೆಂದು ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪೊಲೀಸರು ಪರಿಷ್ಕರಣೆ ಅರ್ಜಿ ಸಮರ್ಥನೀಯವಲ್ಲ ಎಂದು ವಾದಿಸಿದರು. ಆದರೆ ನ್ಯಾಯಾಲಯ ವೀಡಿಯೊವನ್ನು ಕೂಡಲೇ ನೀಡುವ ಅಗತ್ಯವಿಲ್ಲ ಎಂದಷ್ಟೇ ತಿಳಿಸಿದ್ದು ಮನವಿಯನ್ನು ನಿರಾಕರಿಸಿಲ್ಲ ಅಥವಾ ನಿರ್ಣಾಯಕವಾಗಿ ನಿರ್ಧರಿಸಿಲ್ಲ ಎಂದು ಹೇಳಿದೆ.

ಅನಿಲ್ ಅಂಬಾನಿ ಆರ್‌ಕಾಮ್ ಖಾತೆ: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎಸ್‌ಬಿಐಗೆ ದೆಹಲಿ ಹೈಕೋರ್ಟ್‌ ನಿರ್ದೇಶನ

ಅನಿಲ್ ಅಂಬಾನಿಯ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಮತ್ತು ಅದರ ಘಟಕಗಳಾದ ರಿಲಯನ್ಸ್ ಟೆಲಿಕಾಂ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಖಾತೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಬುಧವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗೆ ನಿರ್ದೇಶನ ನೀಡಿದೆ. (ಪುನೀತ್ ಗಾರ್ಗ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಡುವಣ ಪ್ರಕರಣ). ಇದೇ ವೇಳೆ, ನ್ಯಾಯಮೂರ್ತಿ ಪ್ರತೀಕ್ ಜಲನ್ ಅವರಿದ್ದ ಏಕಸದಸ್ಯ ಪೀಠವು ಖಾತೆಗಳನ್ನು "ವಂಚನೆ ಖಾತೆ" ಎಂದು ಘೋಷಣೆಯಾದ ನಂತರ ಕೈಗೊಳ್ಳಬೇಕಾದ ಅಗತ್ಯ ತನಿಖೆಯನ್ನು ಕೈಗೊಳ್ಳಲು ಎಸ್‌ಬಿಐ ಸ್ವತಂತ್ರ ಎಂದು ಹೇಳಿದೆ.

Reliance Communications and Anil Ambani

ವಿಚಾರಣೆ ನಡೆಸುವ ಸಲುವಾಗಿ ಎಸ್‌ಬಿಐ ಆರ್‌ಕಾಮ್, ಅದರ ಘಟಕಗಳು ಮತ್ತು ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್ ನೀಡಲು ಮುಕ್ತವಾಗಿದೆ. ಅದರ ನಂತರ ಕಾನೂನಿನ ಪ್ರಕಾರ ತಾರ್ಕಿಕ ಆದೇಶವನ್ನು ರವಾನಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಆರ್‌ಕಾಂನ ಹಿಂದಿನ ನಿರ್ದೇಶಕ ಪುನೀತ್ ಗಾರ್ಗ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಆರ್‌ಕಾಂ ಪರ ಹಿರಿಯ ವಕೀಲ ಜೆ ಜೆ ಭಟ್, “ಪಕ್ಷಗಳಿಗೆ ಆಲಿಸುವ ಅವಕಾಶವನ್ನು ಒದಗಿಸದ ಕಾರಣ ಸುತ್ತೋಲೆ ಸಹಜ ನ್ಯಾಯದ ತತ್ವಗಳನ್ನು ಉಲ್ಲಂಘಿಸುತ್ತದೆ. ತೆಲಂಗಾಣ ಹೈಕೋರ್ಟ್‌ ಸಹಜ ನ್ಯಾಯದ ತತ್ವಗಳನ್ನು ಸೇರಿಸಲು ಸೂಚಿಸಿದೆ” ಎಂದು ವಾದಿಸಿದರು. ಅರ್ಜಿಗೆ ಪ್ರತಿಕ್ರಿಯೆಯಾಗಿ, ಎಸ್‌ಬಿಐ ಪರ ವಕೀಲ ಅಕ್ಷಿತ್ ಕಪೂರ್, ಆರ್‌ಕಾಮ್ ಖಾತೆಗಳನ್ನು ಈಗಾಗಲೇ ವಂಚನೆ ಖಾತೆಗಳಾಗಿ ಘೋಷಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ರೀತಿಯ ಇತರ ಪ್ರಕರಣಗಳಲ್ಲಿ ಜಾರಿಗೊಳಿಸಲಾದ ಯಥಾಸ್ಥಿತಿ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು, ಈ ಪ್ರಕರಣದಲ್ಲಿಯೂ ಸಹ ಅದನ್ನೇ ಅನುಸರಿಸುವಂತೆ ನ್ಯಾಯಾಲಯ ನಿರ್ದೇಶಿಸಿತು. ಆರ್‌ಬಿಐ ಸುತ್ತೋಲೆಗೆ ಸಂಬಂಧಿಸಿದ ಇತರ ಅರ್ಜಿಗಳೊಂದಿಗೆ ಈ ಪ್ರಕರಣವನ್ನು ಕೂಡ ಜನವರಿ 13 ರಂದು ನ್ಯಾಯಾಲಯ ವಿಚಾರಣೆ ನಡೆಸಲಿದೆ.

ಕವಿಯ ಮಾತು ಉದ್ದರಿಸುತ್ತಾ, ಅಪರಾಧಿಗಳ ಕುರಿತು ಸಮಾಜದ ವರ್ತನೆ ಹೇಗಿರಬೇಕೆಂದು ಪಾಠ ಹೇಳಿದ  ಕೇರಳ ಹೈಕೋರ್ಟ್‌

ಮೊದಲ ಬಾರಿಗೆ ಅಪರಾಧ ಎಸಗಿದವರನ್ನು ಸಮಾಜ ಹೇಗೆ ನಡೆಸಿಕೊಳ್ಳಬೇಕು ಎಂಬ ಕುರಿತು ಕೇರಳ ಹೈಕೋರ್ಟ್‌ ಇತ್ತೀಚೆಗೆ ಸಹಾನುಭೂತಿಯ ಟಿಪ್ಪಣಿಯೊಂದನ್ನು ನೀಡಿದೆ. ಇದರಿಂದ ಅಪರಾಧ ನ್ಯಾಯ ವಿತರಣಾ ವ್ಯವಸ್ಥೆಯು ಅದರ ಸುಧಾರಣೆಯ ಅಂತಿಮ ಗುರಿಯನ್ನು ಸಾಧಿಸಬಹುದು ಎಂದು ಅದು ಹೇಳಿದೆ. ʼನಾನು ಕೆಲ ವಸ್ತುಗಳನ್ನು ಕದ್ದ ಮಾತ್ರಕ್ಕೆ ನನ್ನನ್ನೇಕೆ ಕಳ್ಳನೆಂದು ಕರೆಯುವಿರಿ?ʼ ಎಂಬ ಕವಿ ಅಯ್ಯಪ್ಪ ಪಣಿಕರ್ ಅವರ ಕವಿತೆಯೊಂದನ್ನು ಉದ್ಧರಿಸಿ ನ್ಯಾ. ಪಿ ವಿ ಕುನ್ನಿಕೃಷ್ಣನ್‌ ಈ ಸಂದೇಶ ರವಾನಿಸಿದ್ದಾರೆ.

ಪ್ರಕರಣದಲ್ಲಿ ತನ್ನನ್ನು ರೂಢಿಗತವಾಗಿ ಕಳ್ಳ ಎಂದು ಕರೆದಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಇಬ್ಬರನ್ನು ಇರಿದಿದ್ದ ಎಂದು ಪ್ರಾಸಿಕ್ಯೂಷನ್‌ ಆರೋಪಿಸಿತ್ತು. ವಿಚಾರಣಾ ನ್ಯಾಯಾಲಯ ಆತನಿಗೆ ಮೂರು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ವಿಚಾರಣೆ ವೇಳೆ ಹೈಕೋರ್ಟ್‌ "... ಕಾನೂನು ಇದೆ, ಆದರೆ ಮೊದಲ ಬಾರಿಗೆ ಅಪರಾಧ ಎಸಗಿದವರನ್ನು ಸುಧಾರಣೆ ಮಾಡುವ ಮೂಲಕ ಸಮಾಜವೂ ಬದಲಾಗಬೇಕು. ಅಪರಾಧ ನ್ಯಾಯ ವಿತರಣಾ ವ್ಯವಸ್ಥೆಯು ತನ್ನ ಅಂತಿಮ ಗುರಿಯನ್ನು ಸಮಾಜದ ನೆರವಿನಿಂದ ಮಾತ್ರ ಸಾಧಿಸಬಹುದು. ತಪ್ಪೆಸಗುವುದು ಮನುಷ್ಯ ಸಹಜಗುಣ. ವ್ಯಕ್ತಿ ಕೆಲ ಸಣ್ಣ ತಪ್ಪುಗಳನ್ನು ಮಾಡಿದರೆ, ಸಿಆರ್‌ಪಿಸಿಯ ಸೆಕ್ಷನ್‌ 360 ಮತ್ತು ಅಪರಾಧಿಗಳ ವಿಚಾರಣಾ ಕಾಯಿದೆಯ ಸೆಕ್ಷನ್ 3ರ ಅಡಿ ವ್ಯಕ್ತಿಯನ್ನು ರಕ್ಷಿಸಲಾಗುತ್ತದೆ. ಆದರೆ ಸಮಾಜ ಆತನನ್ನು ಕ್ರಿಮಿನಲ್ ಅಥವಾ ಕಳ್ಳ ಎಂದು ಪರಿಗಣಿಸದೆ ರಕ್ಷಿಸಬೇಕು ”ಎಂದು ಹೇಳಿದೆ.

ಒಂದು ವರ್ಷದ ಎಲ್‌ಎಲ್‌ಎಂ ರದ್ದುಗೊಳಸಿದ ಬಿಸಿಐ: ಸ್ನಾತಕೋತ್ತರ ಕಾನೂನು ಪದವಿ ಪಡೆಯಲು ಎಲ್‌ಎಲ್‌ಬಿ ಕಡ್ಡಾಯ

2013ರಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ರೂಪಿಸಿದ್ದ ಒಂದು ವರ್ಷದ ಕಾನೂನು ಸ್ನಾತಕೋತ್ತರ ಪದವಿ- ಎಲ್‌ಎಲ್‌ಎಂ ರದ್ದುಪಡಿಸಲು ಭಾರತೀಯ ವಕೀಲರ ಪರಿಷತ್ತು ನಿರ್ಧರಿಸಿದೆ. ನಾಲ್ಕು ಸೆಮಿಸ್ಟರ್‌ನ ಎರಡು ವರ್ಷಗಳ ಅವಧಿಗೆ ಕೋರ್ಸ್‌ ವಿಸ್ತರಿಸಲಾಗಿದೆ ಎಂದು ಬಿಸಿಐನ 2020ರ ಕಾನೂನು ಶಿಕ್ಷಣ (ಸ್ನಾತಕೋತ್ತರ, ಡಾಕ್ಟೋರಲ್‌, ಎಕ್ಸಿಕ್ಯುಟೀವ್‌, ವೊಕೇಷನಲ್‌, ಕ್ಲಿನಿಕಲ್‌ ಮತ್ತಿತರ ನಿರಂತರ ಶಿಕ್ಷಣ) ನಿಯಮಾವಳಿಗಳಲ್ಲಿ ತಿಳಿಸಲಾಗಿದೆ. ಅಲ್ಲದೆ ಎಲ್‌ಎಲ್‌ಎಂಗೆ ಪ್ರವೇಶ ಪಡೆಯಲು ಮೂರು ವರ್ಷ ಮತ್ತು ಐದು ವರ್ಷದ ಎಲ್‌ಎಲ್‌ಬಿ ಪದವಿ ಪಡೆದಿರುವುದು ಕಡ್ಡಾಯ ಎಂದು ಕೂಡ ಅದು ತಿಳಿಸಿದೆ.

Bar Council Of India

ನಿಯಮಗಳ ಪ್ರಕಾರ, ಮುಕ್ತ ವ್ಯವಸ್ಥೆಯಲ್ಲಿ ಯಾವುದೇ ಪದವೀಧರರಿಗೆ ಕಾನೂನಿನ ವಿಶೇಷ ಬ್ರಾಂಚ್‌ಗಳಾದ ವಾಣಿಜ್ಯ ಕಾನೂನು, ಮಾನವ ಹಕ್ಕು ಅಥವಾ ಅಂತರರಾಷ್ಟ್ರೀಯ ವ್ಯಾಪಾರ ಕಾನೂನು ರೀತಿಯ ವಿಷಯಗಳಲ್ಲಿ ಪದವಿ ಪಡೆದವರು ಎಲ್‌ಎಲ್‌ಬಿ ಅಥವಾ ಬಿಎ ಎಲ್‌ಎಲ್‌ಬಿ ಪಡೆಯದಿದ್ದರೆ ಆ ಪದವಿಯನ್ನು ಎಲ್‌ಎಲ್‌ಎಂ ಎಂದು ಪರಿಗಣಿಸಲಾಗದು ಎಂದು ತಿಳಿಸಲಾಗಿದೆ. ಅಂತಹ ಪದವಿ ಹೊಂದಿರುವವರು ಕಾನೂನು ಪದವೀಧರರಲ್ಲ. ವಿದೇಶದಲ್ಲಿ ಕೂಡ ಎಲ್‌ಎಲ್‌ಬಿ ಪದವಿ ಪಡೆದೇ ಕಾನೂನು ಪದವಿ ಪಡೆದಿರಬೇಕು. ಆಗ ಮಾತ್ರ ಅದು ಭಾರತದ ಎಲ್‌ಎಲ್‌ಎಂಗೆ ಸಮ ಎಂದು ನಿಯಮಗಳು ಸ್ಪಷ್ಟಪಡಿಸಿವೆ. ಮುಂದೆ ಬಿಸಿಐ ನಡೆಸುವ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿಸಿಇಟಿಎಲ್) ಮೂಲಕವೇ ಎಲ್‌ಎಲ್‌ಎಂಗೆ ಪ್ರವೇಶಾವಕಾಶ ಕಲ್ಪಿಸಬೇಕು. ಅಲ್ಲಿಯವರೆಗೆ ವಿಶ್ವವಿದ್ಯಾಲಯಗಳು ರೂಪಿಸಿರುವ ವ್ಯವಸ್ಥೆ ಮೂಲಕ ಪ್ರವೇಶಾವಕಾಶ ದೊರೆಯುತ್ತದೆ. ಆ ನಂತರ ಬಿಸಿಐ ಪ್ರವೇಶ ಪರೀಕ್ಷೆ ಮೂಲಕವೇ ಎಲ್‌ಎಲ್‌ಎಂ ಸೀಟುಗಳನ್ನು ಪಡೆಯಬೇಕು ಎಂದು ಕಡ್ಡಾಯಗೊಳಿಸಲಾಗಿದೆ.