ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ವಿವಿಧ ರಾಜ್ಯಗಳ ಹೈಕೋರ್ಟ್‌ಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ ಎಂದು ಆತಂಕ ವ್ಯಕ್ತಪಡಿಸಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ನ್ಯಾಯವಾದಿ ಪಿ ವಿಲ್ಸನ್ ಅವರು ಅಧ್ಯಕ್ಷ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ. ಪ್ರಸಿದ್ದ ಇತಿಹಾಸ ಹೊಂದಿರುವ ಮದ್ರಾಸ್ ಹೈಕೋರ್ಟ್ ಸಂಗತಿಯನ್ನೇ ಪರಿಗಣಿಸುವುದಾದರೆ ಅಲ್ಲಿನ ಒಬ್ಬ ನ್ಯಾಯಮೂರ್ತಿಗಳು ಮಾತ್ರ ಈಗ ಸುಪ್ರೀಂಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಜೂನ್ 19ರ ಪತ್ರದಲ್ಲಿ, ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕಾತಿಗಳ ವಿಚಾರಕ್ಕೆ ಬಂದಾಗ ಹೆಚ್ಚಿನ ಸಾಮಾಜಿಕ ವೈವಿಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು. ಎಂದು ವಿಲ್ಸನ್ ಹೇಳಿದ್ದಾರೆ. ದೇಶದ ನ್ಯಾಯಾಂಗದ ಅತ್ಯುನ್ನತ ಅಂಗವಾಗಿರುವ ಸುಪ್ರೀಂಕೋರ್ಟ್ ಇತರ ಅಂಗಗಳಂತೆಯೇ ಎಲ್ಲಾ ರಾಜ್ಯಗಳಿಗೆ ಸಮಾನವಾಗಿದೆ ಎಂಬರ್ಥದಲ್ಲಿ ಅದು ಸಂಯೋಜಿತವೂ ಆಗಿದೆ” ಎಂದು ಅವರು ಹೇಳಿದ್ದಾರೆ.
ಪ್ರಸ್ತುತ 12ನೇ ತರಗತಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಹಿಂದಿನ ವಿದ್ಯಾರ್ಥಿಗಳ ಸಾಧನೆಯೊಂದಿಗೆ ಬೆಸೆಯುವ ಸಿಬಿಎಸ್‌ಇ ಮೌಲ್ಯಮಾಪನ ನೀತಿ ಸಂಪೂರ್ಣ ಸ್ವೇಚ್ಛೆಯಿಂದ ಕೂಡಿದ್ದು ಕಾನೂನುಬದ್ಧವಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ಲಖನೌನ ಉತ್ತರಪ್ರದೇಶ ಪೋಷಕರ ಸಂಘ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಆದ್ದರಿಂದ ಸಿಬಿಎಸ್‌ಇ ಪ್ರಸ್ತಾಪಿಸಿದ ಮೌಲ್ಯಮಾಪನ ಪರಿಷ್ಕರಣಾ ಯೋಜನೆಯ ಹತ್ತನೇ ಪ್ಯಾರಾವನ್ನು ರದ್ದುಗೊಳಿಸಬೇಕು ಎಂದು ಅದು ನ್ಯಾಯಾಲಯವನ್ನು ಕೋರಿದೆ. ಹಳೆಯ ವಿದ್ಯಾರ್ಥಿಗಳ ಹಿಂದಿನ ಸಾಧನೆಯನ್ನು ಪ್ರಸ್ತುತ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಅನ್ವಯಿಸಿ ಶಿಕ್ಷಿಸಬಾರದು ಎಂದು ಅದು ಮನವಿಯಲ್ಲಿ ತಿಳಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ 12 ನೇ ತರಗತಿ ಪರೀಕ್ಷೆಗಳನ್ನು ಸಿಬಿಎಸ್‌ಇ ರದ್ದುಗೊಳಿಸಿ ಮೌಲ್ಯಮಾಪನ ಪರಿಷ್ಕರಣಾ ನೀತಿ ಅಳವಡಿಸಿಕೊಂಡಿತ್ತು. ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿರುವ ಪೀಠ ನಾಳೆ ಅಫಿಡವಿಟ್ ಪರಿಗಣಿಸಲಿದೆ.
ಪಿಡಿಲೈಟ್ ಇಂಡಸ್ಟ್ರೀಸ್‌ನ ಟ್ರೇಡ್‌ಮಾರ್ಕ್ ಮತ್ತು ಲೇಬಲ್‌ಗಳ ಪರವಾಗಿ ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಾತ್ಕಾಲಿಕ ಪರಿಹಾರ ನೀಡಿತು. ಡಾ ಫಿಕ್ಸಿಟ್ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಪಿಡಿಲೈಟ್ ಇಂಡಸ್ಟ್ರೀಸ್ ನೋಂದಾಯಿಸಿದ ಚಿಹ್ನೆ, ಲೇಬಲ್ ಹಾಗೂ ಕಂಟೇನರ್ ಆಕಾರವನ್ನು ಅಳವಡಿಸಿಕೊಳ್ಳದಂತೆ ಒ-ಕೆಮ್ ಸೀಲರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನ್ಯಾಯಮೂರ್ತಿ ಜಿ ಎಸ್ ಪಟೇಲ್ ತಡೆ ನೀಡಿದರು. ಇವುಗಳನ್ನು ಅಳವಡಿಸಿಕೊಂಡಿರುವುದಕ್ಕೆ ಒ-ಕೆಮ್ ಯಾವುದೇ ಸಮರ್ಥನೆಯನ್ನು ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಒ ಕೆಮ್ ಎಲ್‌ಡಬ್ಲ್ಯೂ ಲೇಬಲ್‌ಗಳು ಹಾಗೂ ಯುಆರ್‌ಪಿ ಚಿಹ್ನೆಗಳನ್ನು ತಪ್ಪಾಗಿ ಬಳಸಿದ್ದು ಮಾತ್ರವಲ್ಲದೆ ಡಾ. ಫಿಕ್ಸಿಟ್ ಕಂಟೇನರ್‌ನ ವಿನ್ಯಾಸವನ್ನು ಕದಿಯಲು ಯತ್ನಿಸಿತ್ತು ಇತ್ಯಾದಿ ಅಹವಾಲುಗಳನ್ನು ಪಿಡಿಲೈಟ್ ವ್ಯಕ್ತಪಡಿಸಿತ್ತು.