ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು ಬಳಸುವ ಮೊದಲೇ ದೋಷಯುಕ್ತವಾಗಿರುವ ಪಿಎಂ ಕೇರ್ಸ್ ನಿಧಿ ಮೂಲಕ ಖರೀದಿಸಿದ ವೆಂಟಿಲೇಟರ್‌ಗಳನ್ನು ದುರಸ್ತಿ ಮಾಡಿಕೊಡುವ ಬದಲು ಹೊಸತನ್ನು ಒದಗಿಸುವಂತೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ದುರಸ್ತಿ ಎಂಬ ಪದವನ್ನು ತಾನು ಒಪ್ಪುವುದಿಲ್ಲ ಏಕೆಂದರೆ ಹಾಗೆ ದುರಸ್ತಿ ಮಾಡುವುದು ರೋಗಿಗಳ ಪ್ರಾಣಕ್ಕೆ ಅಪಾಯ ಉಂಟು ಮಾಡುತ್ತದೆ ಎಂದು ನ್ಯಾಯಮೂರ್ತಿಗಳಾದ ಆರ್ ವಿ ಘುಗೆ ಮತ್ತು ಬಿ ಯು ದೇಬದ್ವಾರ್ ಅವರಿದ್ದ ಪೀಠ ತಿಳಿಸಿತು.
ದೋಷಯುಕ್ತ ವೆಂಟಿಲೇಟರ್‌ಗಳನ್ನು ಪೂರೈಸುವ ತಯಾರಕರ ಬಗ್ಗೆ ಕಠಿಣ ನಿಲುವು ತಳೆಯಬೇಕು ಎಂದು ನ್ಯಾಯಾಲಯ ತಿಳಿಸಿದೆ. ವೆಂಟಿಲೇಟರ್‌ಗಳ ಪರಿಶೀಲನೆಗಾಗಿ ಔರಂಗಾಬಾದ್ ಆರೋಗ್ಯ ಕೇಂದ್ರಗಳಿಗೆ ಇಬ್ಬರು ಹಿರಿಯ ವೈದ್ಯರು ಭೇಟಿ ನೀಡುತ್ತಿದ್ದು ಈ ಕುರಿತ ವರದಿಯನ್ನು ತನಗೆ ಜೂನ್ 7 ವಿಚಾರಣೆಯ ಹೊತ್ತಿಗೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಜನನ ಮತ್ತು ಮರಣ ಕುರಿತ ದಾಖಲೆ ಸಂಗ್ರಹಿಸುವ ರೀತಿಯಲ್ಲಿಯೇ ಕೋವಿಡ್‌ನಿಂದ ಒಬ್ಬರು ಅಥವಾ ಇಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಸಂಗ್ರಹಿಸುವ ಅಗತ್ಯವಿದೆ ಎಂದು ದೆಹಲಿ ಹೈಕೋರ್ಟ್ ಗುರುವಾರ ತಿಳಿಸಿದೆ. ಪ್ರಸ್ತುತ ಅನಾಥವಾಗಿರುವ ಮಕ್ಕಳ ಬಗ್ಗೆ ಮಾಹಿತಿ ಕೊರತೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಂತಹ ಮಾಹಿತಿಯನ್ನು ಗೌಪ್ಯವಾಗಿಡಬೇಕೆಂದು ಕೂಡ ತಿಳಿಸಿರುವ ಪೀಠ ಈಗಾಗಲೇ ಲಭ್ಯವಿರುವ ಮಾಹಿತಿಯನ್ನು ಒದಗಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದೆ. ಇದೇ ವೇಳೆ ಅಂತಹ ಮಕ್ಕಳ ಮಾಹಿತಿ ಸಂಗ್ರಹಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಗತ್ಯ ಸಲಹೆ ನೀಡಿರುವುದಾಗಿ ಕೇಂದ್ರ ಸರ್ಕಾರದ ಪರ ವಕೀಲರು ತಿಳಿಸಿದರು. ಈ ಸಂಬಂಧ ಕ್ರಮ ಕೈಗೊಳ್ಳಲು ಮಕ್ಕಳ ಕಲ್ಯಾಣ ಸಮಿತಿಗಳಿಗೆ ನಿರ್ದೇಶನ ನೀಡಬೇಕು ಎಂದು ದೆಹಲಿ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತು.
ನೂತನ ಗೌಪ್ಯತಾ ನೀತಿಗಾಗಿ ವಾಟ್ಸಾಪ್ ಕುಯುಕ್ತಿಯಿಂದ ಬಳಕೆದಾರರ ಒಪ್ಪಿಗೆ ಪಡೆಯಲು ಮುಂದಾಗಿದೆ. ಆ ಮೂಲಕ ಬಳಕೆದಾರ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಗೌಪ್ಯತಾ ನೀತಿಯನ್ನು ಒಪ್ಪದ ಬಳಕೆದಾರರಿಗೆ ಮೇಲಿಂದ ಮೇಲೆ ಪುಶ್ ನೋಟಿಫಿಕೇಷನ್‌ಗಳನ್ನು ಕಳಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಹೆಚ್ಚುವರಿ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಸ್ಪರ್ಧಾ ಕಾಯಿದೆ 2002ರ ಸೆಕ್ಷನ್ 4 ರ ನಿಬಂಧನೆಗಳನ್ನು ವಾಟ್ಸಾಪ್ ಉಲ್ಲಂಘಿಸಿದೆ ಎಂದು ಭಾರತ ಸ್ಪರ್ಧಾ ಆಯೋಗ ಅಭಿಪ್ರಾಯಪಟ್ಟಿದೆ ಎಂಬ ಅಂಶವನ್ನೂ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ್ದು ಈ ಕುರಿತಂತೆ ಸಂಪೂರ್ಣ ತನಿಖೆ ಅಗತ್ಯವಿದೆ ಎಂಬುದಾಗಿ ವಿವರಿಸಿದೆ. ವಾಟ್ಸಾಪ್ ತನ್ನ ಹೊಸ ನೀತಿಯನ್ನು ಹಿಂಪಡೆಯುವಂತೆ ಇಲ್ಲವೇ ಅದರಿಂದ ಹೊರಗುಳಿಯಲು ಬಳಕೆದಾರರಿಗೆ ಅವಕಾಶ ನೀಡುವಂತೆ ಕೇಂದ್ರಕ್ಕೆ ನ್ಯಾಯಾಲಯ ನಿರ್ದೇಶಿಸಬೇಕು ಎಂದು ಕೋರಿ ಡಾ. ಸೀಮಾ ಸಿಂಗ್, ಮೇಘನ್ ಮತ್ತು ವಿಕ್ರಮ್ ಸಿಂಗ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಿದ್ದರು. ಹೊಸ ಗೌಪ್ಯತಾ ನೀತಿಯು 2011ರ ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳ ಉಲ್ಲಂಘನೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಆಕ್ಷೇಪಿಸಿತ್ತು.
ನ್ಯಾಯಾಲಯ ವಿಚಾರಣೆಯ ನೇರ ಪ್ರಸಾರ ಮತ್ತು ನೇರ ವರದಿಗಾರಿಕೆಗೆ ಸಂಬಂಧಿಸಿದಂತೆ ಅವಕಾಶ ಕಲ್ಪಿಸುವಂತೆ ಕೋರಿದ್ದ ಪ್ರಕರಣದಲ್ಲಿ ನ್ಯಾಯಾಲಯದ ಆಡಳಿತಾಂಗ ಈಗಾಗಲೇ ಈ ದಿಕ್ಕಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಅಲಾಹಾಬಾದ್ ಹೈಕೋರ್ಟ್ ಪರ ವಕೀಲರು ತಿಳಿಸಿದ್ದಾರೆ. ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇ ಸಮಿತಿ ಅಧ್ಯಕ್ಷರಾದ ನ್ಯಾ. ಡಿ ವೈ ಚಂದ್ರಚೂಡ್ ಅವರಿಂದ ಮಾರ್ಗಸೂಚಿಯನ್ನು ಪಡೆಯಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಇದೇ ವೇಳೆ ʼವರದಿ ಮಾಡದಂತೆ ನಿಮ್ಮನ್ನು ತಡೆಯುತ್ತಿರುವವರು ಯಾರು? ಎಂದು ನ್ಯಾಯಾಲಯ ಪತ್ರಕರ್ತರನ್ನು ಕೇಳಿತು. ವಿಚಾರಣೆಗಳ ನೇರ ಪ್ರಸಾರ, ಭೌತಿಕ ಮತ್ತು ವರ್ಚುವಲ್ ವಿಧಾನಗಳೆರಡರ ಮೂಲಕವೂ ನ್ಯಾಯಾಲಯ ಕಲಾಪಗಳ ವರದಿಗಾರಿಕೆಗೆ ಅವಕಾಶ ಕಲ್ಪಿಸಲು ನಿರ್ದೇಶಿಸುವಂತೆ ಕೋರಿ ಈ ಹಿಂದೆ ʼಬಾರ್ ಅಂಡ್ ಬೆಂಚ್ʼ ಜಾಲತಾಣದ ವರದಿಗಾರ ಅರೀಬ್ ಉದ್ದೀನ್ ಮತ್ತು ʼಲೈವ್ ಲಾʼ ವರದಿಗಾರ ಸ್ಪರ್ಶ್ ಉಪಾಧ್ಯಾಯ್ ನ್ಯಾಯಾಲಯದ ಮೊರೆ ಹೋಗಿದ್ದರು. ಆರು ವಾರಗಳ ನಂತರ ಪುನಃ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ಪೀಠ ನಿರ್ಧರಿಸಿದೆ.