ಗೋವಾದ ಮಾಂಡೋವಿ ನದಿ ದಡದ ಪೊರ್ವೊರಿಮ್ ಪ್ರದೇಶದಲ್ಲಿ ರಾಜ್ಯದ ಬಾಂಬೆ ಹೈಕೋರ್ಟ್ ನೂತನ ಕಟ್ಟಡ ಉದ್ಘಾಟನೆಯಾಗಿದೆ. 31861 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಕಟ್ಟಡವನ್ನು ಶನಿವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಉದ್ಘಾಟಿಸಿದರು. ಏಳು ನ್ಯಾಯಾಲಯ ಅಂಗಳಗಳು, ಧ್ವನಿವರ್ಧಕ ವ್ಯವಸ್ಥೆ, ಧ್ವನಿ ಮುದ್ರಣ ಸೌಕರ್ಯ, ವಿಡಿಯೊ ಕಾನ್ಫರೆನ್ಸ್ ಕೊಠಡಿಗಳು ಸೌರ ವಿದ್ಯುತ್ ಸೌಕರ್ಯ, ಮಳೆ ನೀರು ಸಂಗ್ರಹ, ಹಸಿರು ಛಾವಣಿ ಮತ್ತು ಗುಡುಗು ಸಿಡಿಲಿನಿಂದ ರಕ್ಷಣಾ ವ್ಯವಸ್ಥೆಯಂತಹ ಆಧುನಿಕ ಸೌಲಭ್ಯಗಳು ಕಟ್ಟಡಕ್ಕೆ ಇವೆ. ಗೋವಾ ಪೀಠದಲ್ಲಿ ನಾಲ್ವರು ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದು ಹಳೆಯ ಕಟ್ಟಡ ಪಣಜಿಯಲ್ಲಿತ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಬಿ ಆರ್ ಗವಾಯಿ, ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಬಾಂಬೆ ಹೈಕೋರ್ಟ್‌ನ್ಯಾಯಮೂರ್ತಿ ಎಸ್ ಎಸ್ ಶಿಂಧೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತಿತರರು ಭಾಗವಹಿಸಿದ್ದರು.
ನ್ಯಾಯಾಂಗ ಮೂಲಸೌಕರ್ಯ ಅಗತ್ಯಗಳನ್ನು ಪೂರೈಸುವ ಸಲುವಾಗಿ ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ನಿಗಮ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರಮಿಸಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್ ವಿ ರಮಣ ಶನಿವಾರ ಹೇಳಿದರು. ಗೋವಾದ ಬಾಂಬೆ ಹೈಕೋರ್ಟ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಇಂತಹ ಸಂಸ್ಥೆ ನ್ಯಾಯಾಂಗ ಮೂಲಸೌಕರ್ಯದಲ್ಲಿ ಏಕರೂಪತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ ಎಂದರು. ಏಪ್ರಿಲ್ 24 ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ರಮಣ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನ್ಯಾಯಾಂಗ ಮೂಲಸೌಕರ್ಯ ಎಂದರೆ ಬಾಕಿ ಉಳಿದ ಪ್ರಕರಣಗಳು, ಖಾಲಿ ಇರುವ ಹುದ್ದೆಗಳು ಅಥವಾ ನ್ಯಾಯಾಲಯ ಕೊಠಡಿ ಸಂಖ್ಯೆಗಳಾಗಿರದೆ ಅದರಾಚೆಗೆ ಆಧುನೀಕೃತ, ನವೀಕೃತ ಹಾಗೂ ಅಡೆತಡೆ ರಹಿತ ನಾಗರಿಕ ಸ್ನೇಹಿ ವಾತಾವರಣ ನಿರ್ಮಿಸುವುದು ಎಂದು ಅರ್ಥಮಾಡಿಕೊಳ್ಳಬೇಕಿದೆ. ನ್ಯಾಯದ ಲಭ್ಯತೆ ಮತ್ತು ಶೀಘ್ರ ನ್ಯಾಯದಾನಕ್ಕೆ ಉತ್ತಮ ನ್ಯಾಯಾಂಗ ಸೌಕರ್ಯ ಇರುವುದು ಅವಶ್ಯಕ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.