ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು|09-5-2021

>> ನ್ಯಾ. ಮಿತ್ತಲ್‌ಗೆ ಐಎಡಬ್ಲ್ಯೂಜೆ ಪ್ರಶಸ್ತಿ ಪ್ರದಾನ >> ಬೆಂಗಳೂರಿನ ವಕೀಲರಿಗೆ ಉಚಿತ ಆಹಾರ ವಿತರಣೆ >> ಷಣ್ಮುಗಸುಂದರಂ ತಮಿಳುನಾಡಿನ ನೂತನ ಅಡ್ವೊಕೇಟ್ ಜನರಲ್ >> ಆಮ್ಲಜನಕ ಸಾಂದ್ರಕ ಬಿಡುಗಡೆ ಆದೇಶ ರದ್ದು

Bar & Bench

ಅಧೀನತೆ, ತಾರತಮ್ಯ, ಹಿಂಸಾಚಾರದೊಂದಿಗೆ ರಾಜಿಯಾಗದಿರಿ: ಮಹಿಳಾ ನ್ಯಾಯಧೀಶರಿಗೆ ನ್ಯಾ. ಗೀತಾ ಮಿತ್ತಲ್‌ ಕರೆ

ಮಹಿಳಾ ನ್ಯಾಯಾಧೀಶರು ಯಾವುದೇ ರೂಪದ ತಾರತಮ್ಯ ಅಥವಾ ಹಿಂಸಾಚಾರದೊಂದಿಗೆ ರಾಜಿ ಮಾಡಿಕೊಳ್ಳಬಾರದು ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌ ಕರೆ ನೀಡಿದರು. "ನಿಮ್ಮ ಲೇಖನಿಗಳು ನಿಮ್ಮ ಹಕ್ಕುಗಳ ಬಗ್ಗೆ ಮಾತನಾಡಲಿ. ನಿಮ್ಮ ನಿಸ್ಪಕ್ಷಪಾತ ಧೋರಣೆ, ಬದ್ಧತೆ, ಪ್ರಾಮಾಣಿಕತೆ, ನಮ್ರತೆ, ಕಠಿಣ ಪರಿಶ್ರಮ ಹಾಗೂ ನ್ಯಾಯಸಮ್ಮತತೆಯನ್ನು ಪ್ರತಿಯೊಬ್ಬರೂ ಸಂಭ್ರಮಿಸಲಿ" ಎಂದು ಅವರು ಹೇಳಿದರು.

Justice Gita Mittal

ಮಹಿಳಾ ನ್ಯಾಯಾಧೀಶರ ಅಂತರರಾಷ್ಟ್ರೀಯ ಸಂಘಟನೆ ಐ ಎ ಡಬ್ಯೂ ಜೆ ಏರ್ಪಡಿಸಿದ್ದ ದ್ವೈವಾರ್ಷಿಕ ಸಮ್ಮೇಳನದಲ್ಲಿ 2021ನೇ ಸಾಲಿನ ಅರ್ಲಿನ್‌ ಪಚ್ತ್‌ ಗ್ಲೋಬಲ್‌ ವಿಷನ್‌ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಈ ಪ್ರಶಸ್ತಿ ಪಡೆಯುತ್ತಿರುವ ಭಾರತದ ಮೊದಲ ಮಹಿಳಾ ನ್ಯಾಯಾಧೀಶೆ ಇವರು.

ಕೋವಿಡ್‌ನಿಂದ ತೊಂದರೆಗೊಳಗಾದ ಬೆಂಗಳೂರಿನ ವಕೀಲರಿಗೆ ಉಚಿತ ಆಹಾರ ವಿತರಣೆ

ʼಎ ಸ್ಮಾಲ್‌ ಹೆಲ್ಪಿಂಗ್‌ ಹ್ಯಾಂಡ್‌ʼ ಎಂಬ ಸ್ವಯಂ ಸೇವಾ ಸಂಘಟನೆಯ ಸಹಯೋಗದಲ್ಲಿ ದಕ್ಷಾ ಲೀಗಲ್‌ ಚಾರಿಟಬಲ್‌ ಟ್ರಸ್ಟ್‌ ಬೆಂಗಳೂರಿನ ಕೋವಿಡ್‌ನಿಂದ ತೊಂದರೆಗೊಳಗಾದ ವಕೀಲರಿಗೆ ಉಚಿತ ಆಹಾರ ವಿತರಣೆ ಮಾಡಲಿದೆ. ರಾಜರಾಜೇಶ್ವರಿನಗರ, ವಿಜಯನಗರ, ಆರ್‌ಟಿ ನಗರ, ಜಯನಗರ, ಜೆಪಿ ನಗರ, ಬನಶಂಕರಿ, ಶೇಷಾದ್ರಿಪುರ, ಫ್ರೇಜರ್‌ ಟೌನ್‌, ಬಾಗಲೂರು ಮುಖ್ಯರಸ್ತೆ, ಕೋರಮಂಗಲ ಹಾಗೂ ರಾಜಾಜಿನಗರಗಳ ಸ್ವಯಂಸೇವಕರಿಂದ ಆಹಾರ ಪಡೆಯಬಹುದಾಗಿದೆ.

Daksha Legal Invitation

ಕಾರ್ಯಕ್ರಮ ಇದೇ ಮೇ 11ರ ಮಂಗಳವಾರ ವರ್ಚುವಲ್‌ ವಿಧಾನದಲ್ಲಿ ಉದ್ಘಾಟನೆಯಾಗಲಿದೆ. ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಎನ್‌ ವೇಣುಗೋಪಾಲ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಲ್‌ ಶ್ರೀನಿವಾಸ ಬಾಬು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಟ್ರಸ್ಟ್‌ನ ವ್ಯವಸ್ಥಾಪಕ ಧರ್ಮದರ್ಶಿ ಎಸ್‌ ಬಸವರಾಜು, ಸ್ವಯಂಸೇವಾ ಸಂಘಟನೆಯ ಉಷಾ ಪ್ರವೀಣ್‌ ಮತ್ತಿತರರು ಉಪಸ್ಥಿತರಿರಲಿದ್ದಾರೆ. ಸ್ವಯಂಸೇವಕರ ವಿವರಗಳನ್ನು ಇಲ್ಲಿ ನೀಡಲಾಗಿದೆ:

Daksha Legal & A Small Helping Hand - Invitation (1).pdf
Preview

ಹಿರಿಯ ವಕೀಲ ಆರ್‌ ಷಣ್ಮುಗಸುಂದರಂ ತಮಿಳುನಾಡಿನ ನೂತನ ಅಡ್ವೊಕೇಟ್‌ ಜನರಲ್‌

ತಮಿಳುನಾಡು ಸರ್ಕಾರದ ನೂತನ ಅಡ್ವೊಕೇಟ್‌ ಜನರಲ್‌ ಆಗಿ ಹಿರಿಯ ವಕೀಲ ಆರ್‌ ಷಣ್ಮುಗಸುಂದರಂ ಅವರನ್ನು ನೇಮಿಸಲಾಗಿದೆ. ತಮಿಳುನಾಡಿನಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಈ ನೇಮಕ ನಡೆದಿದೆ. ಚುನಾವಣಾ ಫಲಿತಾಂಶ ಘೋಷಣೆಗೆ ಒಂದು ದಿನ ಮೊದಲು ಅಡ್ವೊಕೇಟ್‌ ಜನರಲ್‌ ಹುದ್ದೆಗೆ ವಿಜಯ್‌ ನಾರಾಯಣ್‌ ರಾಜೀನಾಮೆ ನೀಡಿದ್ದರು.

Senior Advocate R Shanmugasundaram

ಷಣ್ಮುಗಸುಂದರಂ ಡಿಎಂಕೆ ಪಕ್ಷದ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಅವರು ರಾಜ್ಯ ಸಾರ್ವಜನಿಕ ಅಭಿಯೋಜಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕೋವಿಡ್‌ ನಿರ್ವಹಣೆ ಕುರಿತು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ಸೋಮವಾರ ಮದ್ರಾಸ್‌ ಹೈಕೋರ್ಟ್‌ನಲ್ಲಿ ನಡೆಯಲಿದ್ದು ಅವರು ಸರ್ಕಾರದ ಪರವಾಗಿ ಹಾಜರಾಗಲಿದ್ದಾರೆ. ಇದು ಅಡ್ವೊಕೇಟ್‌ ಜನರಲ್‌ ಅಗಿ ಅವರು ನಿರ್ವಹಿಸುತ್ತಿರುವ ಪ್ರಥಮ ಪ್ರಕರಣವಾಗಲಿದೆ.

ನ್ಯಾಯಾಂಗ ಅಧಿಕಾರಿಗಳು, ಪೊಲೀಸರಿಗಾಗಿ 12 ಆಮ್ಲಜನಕ ಸಾಂದ್ರಕಗಳ ಬಿಡುಗಡೆಗೊಳಿಸಲು ನೀಡಿದ್ದ ಆದೇಶ ರದ್ದುಪಡಿಸಿದ ದೆಹಲಿ ನ್ಯಾಯಾಲಯ

ನ್ಯಾಯಾಂಗ ಅಧಿಕಾರಿಗಳು, ಪೊಲೀಸರು ಹಾಗೂ ಅವರ ಕುಟುಂಬಗಳಿಗಾಗಿ 12 ಆಮ್ಲಜನಕ ಸಾಂದ್ರಕಗಳ ಬಿಡುಗಡೆ ಮಾಡುವಂತೆ ದೆಹಲಿಯ ಮೆಟ್ರೊಪಾಲಿಟನ್‌ ನ್ಯಾಯಾಧೀಶರೊಬ್ಬರು ನೀಡಿದ್ದ ಆದೇಶವನ್ನು ದ್ವಾರಕಾದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ರದ್ದುಪಡಿಸಿದೆ.

Oxygen Concentrators

ಇಬ್ಬರು ನ್ಯಾಯಾಂಗ ಅಧಿಕಾರಿಗಳು ಮೃತಪಟ್ಟಿದ್ದರಿಂದಾಗಿ ಆಮ್ಲಜನಕ ಸಾಧನಗಳನ್ನು ಒದಗಿಸುವ ಉಮೇದಿನಲ್ಲಿ ನ್ಯಾಯಾಧೀಶರು ತಾವು ಹೇಗೆ ವರ್ತಿಸಬೇಕು ಎಂಬುದನ್ನು ಮರೆತಿದ್ದಾರೆ. ನ್ಯಾಯಾಧೀಶ ಹುದ್ದೆಗೆ ಏರಿದ ವ್ಯಕ್ತಿಗಳು ನಿಸ್ವಾರ್ಥ ಹಾಗೂ ಮಮಕಾರಗಳಿಲ್ಲದ ಸಂತನಂತೆ ವರ್ತಿಸಬೇಕು. ಅಂತಹ ವ್ಯಕ್ತಿ ಸ್ವಹಿತಾಸಕ್ತಿಗಳಿಗಿಂತ ಮೇಲಿರಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ ಅಗತ್ಯ ವಸ್ತು ಎಂದು ಕಾಯಿದೆಗಳ ಅಡಿ ಆಮ್ಲಜನಕ ಸಾಂದ್ರಕಗಳನ್ನು ಪರಿಗಣಿಸದೇ ಇರುವುದರಿಂದ ಮೆಟ್ರೊಪಾಲಿಟನ್‌ ನ್ಯಾಯಾಧೀಶರು ತಪ್ಪು ಎಸಗಿದ್ದಾರೆ ಎನ್ನಲಾಗದು ಎಂದು ತಿಳಿಸಿದೆ.