ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೋಟರಿ, ಇನ್ನರ್‌ವೀಲ್ ಕ್ಲಬ್ ಹಾಗೂ ಚೈಲ್ಡ್‌ಲೈನ್ 1098 ಸಂಸ್ಥೆಗಳ ವತಿಯಿಂದ ಜ. 24ರಂದು ಭಾನುವಾರ ರಾಷ್ಟ್ರೀಯ ಹೆಣ್ಣುಮಗು ದಿನ ಆಚರಿಸಲಾಗುತ್ತಿದೆ. ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಕಾವೇರಿ ಅವರು ಉದ್ಘಾಟಿಸಲಿದ್ದಾರೆ. ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ಮಹಿಳಾ ಠಾಣೆ ಸಬ್ ಇನ್ಸ್‌ಪೆಕ್ಟರ್ ವಯೋಲೆಟ್ ಫೆಮಿನಾ, ನಗರಸಭೆ ಕೌನ್ಸಿಲರ್ ರಜನಿ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉಡುಪಿ ಜಿಲ್ಲೆ ಬೀಡಿನಗುಡ್ಡೆಯ ಲೇಬರ್ ಕಾಲೋನಿಯಲಲ್ಲಿ ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ರೋಟರಿ ಮತ್ತು ಇನ್ನರ್‌ವೀಲ್ ಸಂಸ್ಥೆಗಳ ಪದಾಧಿಕಾರಿಗಳಾದ ರಾಧಿಕಾ ಲಕ್ಷ್ಮೀನಾರಯಣ್, ಮಾಲತಿ ತಂತ್ರಿ, ರಾಮಚಂದ್ರ ಉಪಾಧ್ಯಾಯ, ದೀಪಾ ಭಂಡಾರಿ, ಸತ್ಯವತಿ ಹೆಬ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
1987ರ ಕೊಲೆ ಪ್ರಕರಣದ ನಾಯ್ಯಾಂಗ ದಾಖಲೆಗಳು ಎರಡು ದಶಕಗಳ ಹಿಂದೆ ಅಂದರೆ 1999ರಲ್ಲಿ ನಾಪತ್ತೆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಾರ್ಖಂಡ್ ಹೈಕೋರ್ಟ್ ಈ ಸಂಬಂಧ ಸತ್ಯಶೋಧನಾ ಸಮಿತಿಯೊಂದನ್ನು ರಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ನ್ಯಾಯಮೂರ್ತಿ ಆನಂದ ಸೇನ್ ಅವರಿದ್ದ ಏಕ ಸದಸ್ಯ ಪೀಠ ಕಿಡಿಕಾರಿದೆ. "ನ್ಯಾಯಾಂಗ ದಾಖಲೆ ಕಳೆದುಹೋಗಿರುವುದು ಅತ್ಯಂತ ಗಂಭೀರ ವಿಚಾರವಾಗಿದ್ದು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆರೋಪಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು, ಅಲ್ಲದೆ ಆತ ಇನ್ನೂ ಹಲವು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ಜಾಮೀನು ನೀಡಲಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಂಗ ದಾಖಲೆ ಕಳೆದುಹೋಗಿದ್ದರೂ ಗಂಭೀರವಾದ ಕ್ರಮ ಕೈಗೊಂಡಿಲ್ಲ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ. ಏಕಸದಸ್ಯ ಸಮಿತಿಗೆ ಎಲ್ಲ ಬಗೆಯ ಸಹಕಾರ ನೀಡುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿಂದೂ ಮಹಾಸಭಾದ ವಕ್ತಾರ ಅಶೋಕ್ ಕುಮಾರ್ ಪಾಂಡೆ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್ ರದ್ದುಪಡಿಸಲು ಅಲಹಾಬಾದ್ ಹೈಕೋರ್ಟ್ ಅಸಮ್ಮತಿ ಸೂಚಿಸಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಎಂದೂ, ವಿಶ್ವವಿದ್ಯಾಲಯವನ್ನು ಉಗ್ರಗಾಮಿಗಳ ಆಶ್ರಯ ತಾಣ ಎಂದೂ ಪಾಂಡೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ್ದರು.
ನ್ಯಾಯಮೂರ್ತಿಗಳಾದ ಮನೋಜ್ ಕುಮಾರ್ ಗುಪ್ತ ಮತ್ತು ರಾಜೇಂದ್ರ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಪಾಂಡೆ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಅಪರಾಧ ನಡೆದಿರುವುದನ್ನು ತಿಳಿಸುತ್ತವೆ. ಈ ಹಿನ್ನೆಲೆಯಲ್ಲಿ ತನಿಖೆಯ ಅಗತ್ಯವಿದ್ದು ಈ ಹಂತದಲ್ಲಿ ಎಫ್‌ಐಆರ್ ರದ್ದುಪಡಿಸಲಾಗದು ಎಂದು ಸ್ಪಷ್ಟಪಡಿಸಿತು. ಎಫ್‌ಐಆರ್ ರದ್ದುಡಿಸಲು ಸಾಧ್ಯ ಇಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದ ಹಿನ್ನಲೆಯಲ್ಲಿ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪರಿಗಣಿಸಿ ಪಾಂಡೆ ಬಂಧನ ತಡೆಯುವ ಎರಡನೇ ಅರ್ಜಿಯನ್ನು ಕೂಡ ತಿರಸ್ಕರಿಸಲಾಯಿತು. ಆದರೆ ಆರೋಪಿತ ವ್ಯಕ್ತಿ ಇದರಿಂದ ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಪಡೆಯುವುದರ ಮೇಲೆ ಈ ಆದೇಶ ಯಾವುದೇ ಪರಿಣಾಮ ಬೀರದು ಎಂದು ನ್ಯಾಯಾಲಯ ಹೇಳಿದೆ.
ಕಳೆದ ಹತ್ತು ತಿಂಗಳ ಹಿಂದೆ ಅಂದರೆ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ ರಾಷ್ಟ್ರೀಯ ಕಂಪೆನಿ ಮೇಲ್ಮನವಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಚೆನ್ನೈ ಪೀಠ ಬರುವ ಸೋಮವಾರ (ಜ 25ರ) ಕಾರ್ಯಾರಂಭ ಮಾಡಲಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ತೆಲಂಗಾಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ಹಾಗೂ ಪುದುಚೆರಿಗಳಲ್ಲಿ ನ್ಯಾಯವ್ಯಾಪ್ತಿಯನ್ನು ಪೀಠ ಹೊಂದಿದೆ. ಅಲ್ಲದೆ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗಳ (ಎನ್‌ಸಿಎಲ್‌ಟಿ) ಆದೇಶಗಳ ವಿರುದ್ಧವಾಗಿ ಹೊಸದಾಗಿ ಮೇಲ್ಮನವಿ ಸಲ್ಲಿಸುವವರು ಎನ್‌ಸಿಎಲ್‌ಎಟಿ ಚೆನ್ನೈನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ಸೂಚಿಸಲಾಗಿದೆ. ಪೀಠ ಕಾರ್ಯರಂಭ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪೀಠ ವರ್ಚುವಲ್ ಕಲಾಪದ ಮೂಲಕ ಕಾರ್ಯಾರಂಭ ಮಾಡಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಹಾಗೂ ಎನ್‌ಸಿಎಲ್‌ಎಟಿ ಕಾರ್ಯಾಧ್ಯಕ್ಷ ಬನ್ಸಿ ಲಾಲ್ ಭಟ್ ಸೋಮವಾರ ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನೆಯ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.