ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 29-5-2021

Bar & Bench

ಎಸ್‌ಸಿ, ಎಸ್‌ಟಿ ಕಾಯಿದೆ ಕುರಿತ ತರಬೇತಿಗೆ ಕೋವಿಡ್‌ ಅಡ್ಡಿಯಾಗಬಾರದು ಎಂದ ಕರ್ನಾಟಕ ಹೈಕೋರ್ಟ್‌

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) 1989ರ ಕಾಯಿದೆಯಡಿ ದಾಖಲಾಗುವ ಪ್ರಕರಣಗಳನ್ನು ನಿರ್ವಹಿಸುವ ಪ್ರಾಸಿಕ್ಯೂಟರ್‌ಗಳಿಗೆ ತರಬೇತಿ ನೀಡುವ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸುವಂತೆ ಕರ್ನಾಟಕ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್‌ ಸೂಚಿಸಿದೆ. ಎಸ್‌ಸಿ, ಎಸ್‌ಟಿ ಕಾಯಿದೆ ಕುರಿತಂತೆ ಪ್ರಾಸಿಕ್ಯೂಟರ್‌ಗಳಿಗೆ ತರಬೇತಿ ನೀಡಲು ಕೋವಿಡ್‌ ಎರಡನೇ ಅಲೆ ಅಡ್ಡಿಯಾಗಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Karnataka HC

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠ ಪ್ರಾಸಿಕ್ಯೂಟರ್‌ಗಳಿಗೆ ಆನ್‌ಲೈನ್ ತರಬೇತಿ ನೀಡಲು ರಾಜ್ಯ ಸರ್ಕಾರ ಯಾವುದೇ ಸಮಯದಲ್ಲಿ ಬೇಕಾದರೂ ಕರ್ನಾಟಕ ನ್ಯಾಯಾಂಗ ಅಕಾಡೆಮಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜೂನ್‌ 10ಕ್ಕೆ ನಿಗದಿಯಾಗಿದೆ. ಎಸ್‌ಸಿ, ಎಸ್‌ಟಿ ಕಾಯಿದೆ ಮತ್ತು ಅದರ ನಿಯಮಗಳನ್ನು ಸೂಕ್ತವಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಉನ್ನತ ಅಧಿಕಾರಿ ನಾಪತ್ತೆ ಗಂಭೀರ ವಿಚಾರ ಎಂದ ಅಲಾಹಾಬಾದ್‌ ಹೈಕೋರ್ಟ್; ಪ್ರತಿಕ್ರಿಯಿಸಲು ಸರ್ಕಾರಕ್ಕೆ ಸೂಚನೆ

ಉತ್ತರಪ್ರದೇಶಕ್ಕೆ ಸೇರಿದ ಐಪಿಎಸ್‌ ಅಧಿಕಾರಿ ಮಣಿ ಲಾಲ್ ಪಾಟಿದಾರ್ ಅವರು ಕಳೆದ ಹಲವು ತಿಂಗಳುಗಳಿಂದ ನಾಪತ್ತೆಯಾಗಿದ್ದಾರೆ. ಅವರು ನಾಪತ್ತೆಯಾಗಿರುವುದು ಗಂಭೀರ ವಿಚಾರವಾಗಿದ್ದು ಅಧಿಕಾರಿಯ ಪತ್ತೆಗಾಗಿ ಕೈಗೊಂಡ ಕ್ರಮಗಳ ಕುರಿತು ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಗುರುವಾರ ಸೂಚಿಸಿದೆ. ತಮ್ಮ ಕಕ್ಷೀದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರಿ ವಕೀಲ ಡಾ ಮುಕುಟನಾಥ್‌ ವರ್ಮ ಅವರು ಸಲ್ಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Allahabad High Court

ಪಾಟಿದಾರ್‌ ಗಣಿಗಾರಿಕೆ ಮಾಫಿಯಾ ವಿರುದ್ಧ ಕ್ರಮ ಕೈಗೊಂಡಿದ್ದರು. ಇದರಿಂದಾಗಿ ಆಡಳಿತದ ಕೆಲ ವಿಭಾಗಗಳಲ್ಲಿ ಅವರ ಸಂಬಂಧ ಹಳಸಿತ್ತು. ಕೆಲ ಪ್ರಕರಣಗಳಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಲಾಯಿತು. 2020ರ ನವೆಂಬರ್ 27ರಿಂದ ಪಾಟಿದಾರ್‌ ನಾಪತ್ತೆಯಾಗಿದ್ದು ಅವರ ಪ್ರಾಣಕ್ಕೆ ಅಪಾಯವಿದೆ ಎಂದು ಅನುಮಾನ ವ್ಯಕ್ತಪಡಿಸಿ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಪಾಟಿದಾರ್‌ ತಮ್ಮ ಬಂಧನ ತಪ್ಪಿಸಲು ಯತ್ನಿಸುತ್ತಿದ್ದು ದುರುದ್ದೇಶದಿಂದ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಲಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಾದಿಸಿದರು. ಆದರೆ ಅಧಿಕಾರಿ ಪತ್ತೆಗೆ ಹಲವು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ ನ್ಯಾಯಾಲಯ ಪ್ರಕರಣವನ್ನು ಜೂನ್‌ 14ಕ್ಕೆ ಮುಂದೂಡಿತು.

ಕೊಲೆ ಪ್ರಕರಣ: ಒಲಿಂಪಿಕ್‌ ಕುಸ್ತಿಪಟು ಸುಶೀಲ್‌ ಕುಮಾರ್‌ ಇನ್ನೂ ನಾಲ್ಕು ದಿನಗಳ ಕಾಲ ಪೊಲೀಸ್‌ ವಶಕ್ಕೆ

ಕ್ರೀಡಾಪಟುವಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಕ್‌ ಕುಸ್ತಿಪಟು ಸುಶೀಲ್‌ ಕುಮಾರ್‌ ಅವರನ್ನು ಇನ್ನೂ ನಾಲ್ಕು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಶನಿವಾರ ಆದೇಶಿಸಿದೆ. ಆರು ದಿನಗಳ ಪೊಲೀಸ್‌ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೆಟ್ರೊಪಾಲಿಟನ್‌ ನ್ಯಾಯಾಧೀಶ ಮಯಾಂಕ್‌ ಗೋಯೆಲ್‌ ಅವರ ಮುಂದೆ ಆರೋಪಿ ಸುಶೀಲ್‌ ಕುಮಾರ್‌ ಅವರನ್ನು ಹಾಜರುಪಡಿಸಲಾಗಿತ್ತು. ಸುಶೀಲ್‌ ಕುಮಾರ್‌ ಮಾತ್ರವಲ್ಲದೆ ಸಹ ಆರೋಪಿ ಅಜಯ್‌ ಕುಮಾರ್‌ ಶೆರಾವತ್‌ನನ್ನು ಕೂಡ ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

Sushil Kumar and Delhi police

ತನಿಖೆ ಆರಂಭಿಕ ಹಂತದಲ್ಲಿದ್ದು ಸತ್ಯ ಇನ್ನಷ್ಟೇ ಬಯಲಾಗಬೇಕಿದೆ. ಆರೋಪ ಗಂಭೀರ ಸ್ವರೂಪದ್ದಾಗಿದ್ದು ಕುಖ್ಯಾತ ಗ್ಯಾಂಗ್‌ ಸದಸ್ಯರು ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿದ್ದು ಅವರನ್ನು ಇನ್ನಷ್ಟೇ ಬಂಧಿಸಬೇಕಿದೆ. ಘಟನೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ವಶಕ್ಕೆ ಪಡೆಯಬೇಕಿದೆ ಎಂದು ನ್ಯಾಯಾಲಯ ತಿಳಿಸಿದೆ. ದೆಹಲಿ ಪೊಲೀಸರು ಆರೋಪಿಗಳನ್ನು ಇನ್ನೂ ಏಳು ದಿನಗಳ ಕಾಲ ತಮ್ಮ ವಶಕ್ಕೆ ಒಪ್ಪಿಸುವಂತೆ ಮನವಿ ಮಾಡಿದ್ದರು.

ಲಾ ವಿಂಗ್ಸ್‌ ಶಿಕ್ಷಣ ಟ್ರಸ್ಟ್‌ ಹಾಗೂ ಬೆಂಗಳೂರು ಕಾನೂನು ಕಾಲೇಜಿನಿಂದ ಜಂಟಿಯಾಗಿ ಐದು ದಿನಗಳ ರಾಷ್ಟ್ರೀಯ ವೆಬಿನಾರ್‌ ಸರಣಿ

ಬೆಂಗಳೂರಿನ ಲಾ ವಿಂಗ್ಸ್‌ ಶಿಕ್ಷಣ ಟ್ರಸ್ಟ್‌ ಹಾಗೂ ಬೆಂಗಳೂರು ಕಾನೂನು ಕಾಲೇಜು ಜಂಟಿಯಾಗಿ ಮೇ 31ರಿಂದ ಐದು ದಿನಗಳ ಕಾಲ ರಾಷ್ಟ್ರೀಯ ವೆಬಿನಾರ್‌ ಸರಣಿ ಆಯೋಜಿಸಿವೆ. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಪಿ ಈಶ್ವರ ಭಟ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. Distinction between constitutional interpretation and statutory interpretation ಎಂಬ ವಿಷಯವಾಗಿ ಅವರು ಮಾತನಾಡಲಿದ್ದಾರೆ.

Invitation

ವಿವಿಧ ಕಾನೂನುಗಳು, ಕಾನೂನು ಶಿಕ್ಷಣ, ಕಾನೂನು ವೃತ್ತಿ, ಕೈಗಾರಿಕಾ ವ್ಯಾಜ್ಯ, ಮಾನವ ಹಕ್ಕು ಇತ್ಯಾದಿ ವಿಚಾರಗಳ ಕುರಿತು ಕಾನೂನು ಕ್ಷೇತ್ರದ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಜೂನ್‌ 4ಕ್ಕೆ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ. ಆಸಕ್ತರು ಈ ಕೆಳಗಿನ ಲಿಂಕ್‌ ಬಳಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು: https://teams.microsoft.com/l/meetupjoin/19%3ameeting_MzA0ODg4ZjktZTI0Mi00ZGU3LWIwNmYtOTFlYTRjNGJlYTg1%40thre ad.v2/0?context=%7b%22Tid%22%3a%222d7e27a4-f278-419d-b168- a82cf1247027%22%2c%22Oid%22%3a%220d7ffe43-f39b-43a7-b1d6- f42ba7b1e934%22%7d
ಆನ್‌ಲೈನ್‌ ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಇಲ್ಲಿ ಓದಿ:

Program Schedule Webseries 31stmay-4June 2021copy (1).pdf
Preview

ಆಮ್ಲಜನಕ ಸಾಂದ್ರಕ ಅಕ್ರಮ ಮಾರಾಟ: ಉದ್ಯಮಿ ನವನೀತ್‌ ಕಲ್ರಾಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯ

ಕಾಳಸಂತೆಯಲ್ಲಿ ಆಮ್ಲಜನಕ ಸಾಂದ್ರಕ ಮಾರಾಟ ಪ್ರಕರಣದಲ್ಲಿ ಉದ್ಯಮಿ ನವನೀತ್‌ ಕಲ್ರಾಗೆ ದೆಹಲಿಯ ಸಾಕೇತ್‌ ನ್ಯಾಯಾಲಯದ ಮುಖ್ಯ ಮೆಟ್ರೊಪಾಲೀಟಿನ್‌ ನ್ಯಾಯಾಧೀಶರು ಶನಿವಾರ ಜಾಮೀನು ನೀಡಿದ್ದಾರೆ.

Navneet Kalra and Oxygen concentrator

ಕಲ್ರಾ ಮತ್ತು ಪ್ರಾಸಿಕ್ಯೂಷನ್‌ ಪರ ವಕೀಲರ ವಾದಗಳನ್ನು ಆಲಿಸಿದ ಬಳಿಕ ನ್ಯಾ. ಅರುಣ್‌ ಕುಮಾರ್‌ ಗಾರ್ಗ್‌ ಅವರು ನವನೀತ್‌ ಅವರನ್ನು ವಶದಲ್ಲಿ ಇರಿಸಿಕೊಳ್ಳುವುದರಿಂದ ಯಾವುದೇ ಉದ್ದೇಶ ಈಡೇರಿಸಿದಂತಾಗದು ಎಂದು ಅಭಿಪ್ರಾಯಪಟ್ಟರು. ಪ್ರಕರಣ ಮುಖ್ಯವಾಗಿ ದಾಸ್ತಾವೇಜು ಸಾಕ್ಷ್ಯವನ್ನು ಆಧರಿಸಿದ್ದು ಅದನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ತಿಳಿಸಿತು. ಸಾಕ್ಷ್ಯ ತಿರುಚುವ ಮತ್ತು ಸಾಕ್ಷಿಗಳು ಪ್ರಭಾವಿಗಳಾಗಿರುವ ಬಗ್ಗೆ ವ್ಯಕ್ತಪಡಿಸಲಾದ ಕಳವಳವನ್ನು ನ್ಯಾಯಾಲಯ ತಿರಸ್ಕರಿಸಿತು.