ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ (ಕೆಎಟಿ) ಹೈಕೋರ್ಟ್‌ಗೆ ಅಧೀನವಾಗಿಲ್ಲದ ಕಾರಣ ಅದು ಜಾರಿ ಮಾಡಿದ ಆದೇಶ ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗದು ಎಂದು ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಲಾಲ್‌ಸಾಬ್ ನಡಾಫ್ ಅವರು ಸಲ್ಲಿಸಿದ ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠ, "1976ರಲ್ಲಿ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ ಕಾಯಿದೆಯಡಿ ಕೆಎಟಿ ಸ್ಥಾಪನೆಯಾಗಿದ್ದು ಕೆಎಟಿ ಆದೇಶ ತಿರಸ್ಕರಿಸಿದ್ದಕ್ಕೆ ನ್ಯಾಯಾಂಗ ನಿಂದನೆ ವ್ಯಾಪ್ತಿ ಚಲಾಯಿಸಲಾಗದು" ಎಂದು ಹೇಳಿದೆ.
"ಹೀಗಾಗಿ 1976 ರ ಕಾಯಿದೆಯಡಿ ರೂಪುಗೊಂಡ ಕೆಎಟಿಯನ್ನು 1971ರ ಕಾಯಿದೆಯ ಸೆಕ್ಷನ್ 10ರ ಅರ್ಥದಲ್ಲಿ ಹೈಕೋರ್ಟ್‌ಗೆ ಅಧೀನವಾಗಿದೆ ಎಂಬ ವಾದ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ, ನ್ಯಾಯಾಧಿಕರಣದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ ಆರೋಪದ ಆಧಾರದ ಮೇಲೆ 1971ರ ನ್ಯಾಯಾಂಗ ನಿಂದನೆ ಕಾಯಿದೆಯಡಿ ಕ್ರಮ ಕೈಗೊಳ್ಳಲು ಬರುವುದಿಲ್ಲ” ಎಂದು ನ್ಯಾಯಾಲಯತಿಳಿಸಿದೆ. ಅರ್ಜಿದಾರರು ಸಂವಿಧಾನದ 215ನೇ ವಿಧಿಯೊಂದಿಗೆ ಇರಿಸಿದ ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್ 10 ಮತ್ತು 12ರ ಅಡಿಯಲ್ಲಿ ಹೈಕೋರ್ಟ್‌ನಿಂದ ಪರಿಹಾರ ಬಯಸಿದ್ದರು. ಕೆಎಟಿ ಅಂಗೀಕರಿಸಿದ ಆದೇಶವೊಂದನ್ನು ಉಲ್ಲಂಘಿಸಿದ್ದಕ್ಕಾಗಿ ಆರೋಪಿಯಾದ ಸಹಕಾರಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರೊಬ್ಬರಿಗೆ ನೋಟಿಸ್ ನೀಡಿ ಗರಿಷ್ಠ ಶಿಕ್ಷೆ ವಿಧಿಸುವಂತೆ ಹೈಕೋರ್ಟನ್ನು ಪ್ರಾರ್ಥಿಸಲಾಗಿತ್ತು.
ರೈತ ವಿರೋಧಿ ಜನ ವಿರೋಧಿ ಕಾಯಿದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂಪಡೆಯಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಸಮಾನ ಮನಸ್ಕ ವಕೀಲರ ವೇದಿಕೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ʼವಕೀಲರ ನಡಿಗೆ ರೈತರ ಕಡೆಗೆʼ ಹೆಸರಿನ ಮೆರವಣಿಗೆ ನಾಳೆ, (ಫೆ. 12ರ ಶುಕ್ರವಾರ) ಮಧ್ಯಾಹ್ನ 3.30 ಗಂಟೆಗೆ ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಿಂದ ಹೈಕೋರ್ಟ್‌ವರೆಗೆ ನಡೆಯಲಿದ್ದು ಬಳಿಕ ಮಾನವ ಸರಪಳಿ ರಚಿಸಲು ನಿರ್ಧರಿಸಲಾಗಿದೆ.
"ಕೋವಿಡ್‌ನಿಂದ ಜನ ಪರದಾಡುತ್ತಿರುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಚರ್ಚೆ ವಿಮರ್ಶೆಗೆ ಅವಕಾಶ ನೀಡದೇ ಜನ ಸಮುದಾಯದ ವಿರೋಧವನ್ನೂ ಲೆಕ್ಕಿಸದೆ, ಕಾರ್ಪೊರೆಟ್ ಕಂಪೆನಿಗಳ ಪರವಾದ, ರೈತ- ಕಾರ್ಮಿಕ- ಜನ ವಿರೋಧಿ ಕಾಯಿದೆಗಳನ್ನು ಜಾರಿಗೆ ತಂದಿವೆ" ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಭಾಗಿಯಾಗಿ ಹೋರಾಟವನ್ನು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
ಬರವಣಿಗೆ ಮಾಡಲಾಗದ ಸಮಸ್ಯೆಯಿಂದ (ರೈಟರ್ಸ್ ಕ್ರಾಂಪ್) ಬಳಲುತ್ತಿರುವ ನರರೋಗಿ ಅಭ್ಯರ್ಥಿಯೊಬ್ಬರಿಗೆ ನಾಗರಿಕ ಸೇವಾ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಸೂಕ್ತ ಲಿಪಿಕಾರ ಸಹಾಯಕನನ್ನು ಒದಗಿಸಬೇಕೆಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ಗುರುವಾರ ನಿರ್ದೇಶನ ನೀಡಿದೆ. (ವಿಕಾಶ್ ಕುಮಾರ್ ಮತ್ತು ಕೇಂದ್ರ ಲೋಕಸೇವಾ ಆಯೋಗ ನಡುವಣ ಪ್ರಕರಣ).
2016ರ ವಿಕಲಚೇತನ ಅಭ್ಯರ್ಥಿಗಳ ಹಕ್ಕು ಕಾಯಿದೆಯ ಸೆಕ್ಷನ್ 2 (ಎಸ್) ಅಡಿಯಲ್ಲಿ ಈ ಸಂಬಂಧ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ಸೂಚಿಸಿರುವ ನ್ಯಾಯಾಲಯ ಇದಕ್ಕಾಗಿ ಮೂರು ತಿಂಗಳ ಗಡವು ವಿಧಿಸಿದೆ. ʼತೀವ್ರ ಅಂಗವಿವೈಕಲ್ಯʼದಿಂದ ಬಳಲುತ್ತಿರುವವರು ಲಿಪಿಕಾರ ಸಹಾಯಕನನ್ನು ಪಡೆಯಬಹುದು ಎಂಬ ಕಾಯಿದೆಯ ಉಲ್ಲೇಖ ಪೂರ್ವನಿಬಂಧನೆಯೇನೂ ಅಲ್ಲ. ತೀವ್ರ ಅಂಗವೈಕಲ್ಯ ಇಲ್ಲದ ಅಭ್ಯರ್ಥಿಗಳಿಗೆ ಕೂಡ ಈ ಸೌಲಭ್ಯ ವಿಸ್ತರಿಸಬಹುದು ಎಂದು ಪ್ರಸ್ತುತ ತೀರ್ಪಿನಲ್ಲಿ ಅದು ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಇಂದಿರಾ ಬ್ಯಾನರ್ಜಿ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠವು ವಿಕಲಾಂಗ ವ್ಯಕ್ತಿಗಳು ಸಾಮಾಜಿಕ, ಆರ್ಥಿಕ ಅಸಮಾನತೆಗಳಿಗೆ ಸಿಲುಕಿದ್ದು ಪೂರ್ವಾಗ್ರಹ ಮತ್ತು ತರತಮಕ್ಕೆ ತುತ್ತಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿದೆ.
ಕೇರಳದಲ್ಲಿ ಕಾಲೇಜು ಆವರಣದಲ್ಲಿ ಮಾದಕ ವಸ್ತು ಸೇವನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದನ್ನು ತಡೆಯಲು ಶಿಕ್ಷಣ ಸಂಸ್ಥೆಗಳಲ್ಲಿ ಕ್ಯಾಂಪಸ್ ಪೊಲೀಸ್ ಘಟಕಗಳನ್ನು ತೆರೆಯುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಇದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ನಿಯಮಿತ ತಪಾಸಣೆ ಮತ್ತು ವಿದ್ಯಾರ್ಥಿಗಳ ವೈಯಕ್ತಿಕ ತಪಾಸಣೆಗೆ ಅನುಕೂಲವಾಗಲಿದೆ. ನ್ಯಾಯಮೂರ್ತಿಗಳಾದ ಎಸ್ ಮಣಿಕುಮಾರ್ ಮತ್ತು ಎ ಎಂ ಶಫೀಕ್ ಅವರಿದ್ದ ಪೀಠ “ಶಿಕ್ಷಣ ಸಂಸ್ಥೆಗಳಲ್ಲಿ 1985ರ ಎನ್‌ಡಿಪಿಎಸ್ ಕಾಯಿದೆಯನ್ನು ಜಾರಿಗೆ ತರಲು ಪೊಲೀಸ್ ಮತ್ತು ಅಬಕಾರಿ ಸಿಬ್ಬಂದಿಗೆ ಸುಲಭವಾಗುವಂತೆ ಕ್ರಮ ಕೈಗೊಳ್ಳಬೇಕು” ಎಂದು ಹೈಕೋರ್ಟ್ ಇದೇ ಸಂದರ್ಭದಲ್ಲಿ ತಿಳಿಸಿದೆ.
ಕೇರಳದಲ್ಲಿ ಮಾದಕ ವಸ್ತು ದೌರ್ಜನ್ಯ ಕುರಿತಂತೆ ಕೊಟ್ಟಾಯಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎನ್ ರಾಮಚಂದ್ರನ್ ಅವರು ಬರೆದಿದ್ದ ಪತ್ರವನ್ನು ಆಧರಿಸಿ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣದಡಿ ಕೇರಳದ ಮಾದಕ ವ್ಯಸನದ ಪಿಡುಗಿನ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ವರದಿ ಕೇಳಿದೆ. ವಿಚಾರಣೆಯಲ್ಲಿ, ರಾಜ್ಯದ ಸುಮಾರು 400 ಸಂಸ್ಥೆಗಳು ಮಾದಕ ವಸ್ತು ಸಮಸ್ಯೆಗೆ ತುತ್ತಾಗಿವೆ ಎಂದು ತಿಳಿದು ಬಂದಿದೆ. 74.12% ಶಾಲೆಗಳು, 20.89% ಕಾಲೇಜುಗಳು ಮತ್ತು 4.97%ನಷ್ಟು ಐಟಿಐ, ಪಾಲಿಟೆಕ್ನಿಕ್ ರೀತಿಯ ವೃತ್ತಿಪರ ಸಂಸ್ಥೆಗಳು ಇದರಲ್ಲಿ ಸೇರಿವೆ ಎಂದು ತಿಳಿದುಬಂದಿದೆ.