ಭಾರತ ಮೂಲದ ಕೊಲ್ಲಿರಾಷ್ಟ್ರಗಳ ಉದ್ಯಮಿ ಬಿ ಆರ್ ಶೆಟ್ಟಿ ಅವರು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಪಾವತಿಸಬೇಕಾದ ಸಾಲದ ಮೊತ್ತ, ಸಿಕ್ಕಿಂ ರಾಜ್ಯ ಬಜೆಟ್‌ನ 1/3ನೇ ಭಾಗಕ್ಕೂ ಅಧಿಕ ಎಂದಿರುವ ಕರ್ನಾಟಕ ಹೈಕೋರ್ಟ್, ವಿದೇಶಕ್ಕೆ ಶೆಟ್ಟಿ ಅವರು ತೆರಳದಂತೆ ಕೇಂದ್ರ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಎತ್ತಿ ಹಿಡಿದಿದೆ. ಪಾವತಿಸಬೇಕಾದ ಮೊತ್ತ ʼಬಾನೆತ್ತರದಷ್ಟು ಇದ್ದುʼ, ಇದು ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ ಎಂದು ನ್ಯಾಯಮೂರ್ತಿ ಎಸ್ ದಿನೇಶ್ ಕುಮಾರ್ ಅವರಿದ್ದ ಪೀಠ ಹೇಳಿದೆ.
ಶೆಟ್ಟಿ ಅವರು 2,800 ಕೋಟಿ ರೂಪಾಯಿ ಸಾಲದ ಮೊತ್ತ ಪಾವತಿಸಬೇಕಿದ್ದುಈ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ಭಾರತದಿಂದ ಅಬುಧಾಬಿಗೆ ತೆರಳಲು ಅನುಮತಿ ನಿರಾಕರಿಸಲಾಗಿತ್ತು. ಕೋಲ್ಕತ್ತಾ ಪ್ರಕರಣಕ್ಕೆ ಹೋಲಿಸಿದರೆ ಈ ಪ್ರಕರಣದ್ದು ಭಾರಿ ಮೊತ್ತ ಎಂದು ಹೇಳಿರುವ ನ್ಯಾಯಾಲಯ “ನಿಸ್ಸಂದೇಹವಾಗಿ ಈ ಹಣ ಒಟ್ಟಾರೆ ದೇಶಕ್ಕೆ ಹಾಗೂ ನಿರ್ದಿಷ್ಟವಾಗಿ ಠೇವಣಿದಾರರಿಗೆ ಸೇರಿದ್ದಾಗಿದೆ. ರಾಷ್ಟ್ರಕ್ಕೆ ಸೇರಿದ ಈ ಹಣವನ್ನು ಅರ್ಜಿದಾರರು ವಿದೇಶದಲ್ಲಿ ತಮ್ಮ ವ್ಯವಹಾರ ನಡೆಸಲು ಬಳಸಿಕೊಂಡಿದ್ದಾರೆ ಎಂಬ ಅಂಶವನ್ನು ಕೋರ್ಟ್ ನಿರ್ಲಕ್ಷಿಸಲು ಸಾಧ್ಯವಿಲ್ಲ. ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಬ್ಯಾಂಕ್‌ಗಳು ನೀಡಿರುವ ಸಾಲದ ಹಣ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ತೋರಿಸುವ ಯಾವುದೇ ಅಂಶಗಳು ಕಾಣುತ್ತಿಲ್ಲ,” ಎಂಬುದಾಗಿ ಕುಟುಕಿದೆ. ಅಂತೆಯೇ ಎರಡೂ ಬ್ಯಾಂಕ್‌ಗಳು ತಮ್ಮ ವಿರುದ್ಧ ಹೊರಡಿಸಿದ್ದ ಲುಕ್ಔಟ್ ಸುತ್ತೋಲೆಗಳನ್ನು ರದ್ದುಪಡಿಸುವಂತೆ ಕೋರಿ ಶೆಟ್ಟಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ವಿವಿಧ ರಾಜ್ಯಗಳಲ್ಲಿ ಜಾರಿಗೆ ತರುತ್ತಿರುವ ಮತಾಂತರ ವಿರೋಧಿ ಕಾನೂನುಗಳನ್ನು ನಿಯಂತ್ರಿಸಲು ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಮುಸ್ಲಿಂ ಹಕ್ಕುಗಳ ಸಂಘಟನೆ ಜಾಮಿಯಾತ್ ಉಲಾಮಾ- ಇ- ಹಿಂದ್ ಕೋರಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಅರ್ಜಿಯ ವಿಚಾರಣೆಗೆ ಮುಂದಾಗುವುದಾಗಿ ತಿಳಿಸಿದೆ.
ಅಲ್ಲದೆ ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಹಾಗೂ ಉತ್ತರಪ್ರದೇಶಗಳ ಮತಾಂತರ ವಿರೋಧಿ ಕಾಯಿದೆಗಳನ್ನು ತನ್ನ ಅರ್ಜಿಯಲ್ಲಿ ಸೇರಿಸಲು ತಿದ್ದುಪಡಿಗೆ ಅವಕಾಶ ನೀಡಬೇಕೆಂದು ʼಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ʼ ಸಂಸ್ಥೆ ಮಾಡಿದ್ದ ಮನವಿಗೂ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಜಾಮಿಯಾತ್ ಪರ ಹಾಜರಾದ ವಕೀಲ ಎಜಾಜ್ ಮಕ್ಬೂಲ್ ಅವರು "ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿದೆ" ಎಂದು ಹೇಳಿದ್ದಾರೆ. ಎರಡು ವಾರಗಳ ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.
ಕೇರಳದ ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯಿದೆಯ ಅಡಿ (ಕೆಎಎಪಿಎ- ಕಾಪಾ) ವ್ಯಕ್ತಿಗಳನ್ನು ಬಂಧಿಸುವುದು ಸಂವಿಧಾನದ 22ನೇ ವಿಧಿಯ ಉಲ್ಲಂಘನೆ ಎಂದು ಸಲ್ಲಿಸಲಾದ ಅರ್ಜಿಯ ಸಂಬಂಧ ಸುಪ್ರೀಂಕೋರ್ಟ್ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದೆ. ಕಾಯಿದೆಯಡಿ ಬಂಧಿಸಲಾಗಿರುವ ತಮ್ಮ ಪತಿ ಅನ್ಸಾರ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ರಾಮ್‌ಸೀನಾ ಅನಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಈ ನಿರ್ಧಾರ ಕೈಗೊಂಡಿದೆ.
ಅರ್ಜಿದಾರರು ಈ ಹಿಂದೆ ತಮ್ಮ ಪತಿಯನ್ನು ಬಿಡುಗಡೆ ಮಾಡುವಂತೆ ಕೋರಿದ್ದ ರಿಟ್ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತ್ತು. ಪರಿಣಾಮ ರಾಮ್‌ಸೀನಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಅನ್ಸಾರ್ ಅವರನ್ನು ʼಉಲ್ಲೇಖಿತ ರೌಡಿʼ ಎಂದು ಹೇಳಿ ಮುಂಜಾಗ್ರತಾ ಕ್ರಮವಾಗಿ ಕೇರಳ ಪೊಲೀಸರು ಬಂಧಿಸಿದ್ದರು. ಆದರೆ ಪ್ರತಿಕೂಲ ಪ್ರಭಾವ ಬೀರುತ್ತದೆ ಎಂದು ಹೇಳಲಾದ ದಿನಾಂಕದಿಂದ ಏಳು ತಿಂಗಳಷ್ಟು ತಡವಾಗಿ ಬಂಧನ ಆದೇಶ ಜಾರಿಗೊಳಿಸಲಾಗಿದ್ದು, ಆದೇಶ ಜಾರಿಗೊಳಿಸುವ ಮುನ್ನ ಇತರೆ ಅಂಶಗಳನ್ನು ಕೂಡ ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.