ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 01-3-2021

Bar & Bench

ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ ಆರೋಪ: ಕಾನೂನು ಸಲಹೆ ಪಡೆಯಿರಿ ಎಂದು ಆರೋಪಿಗೆ ಎಚ್ಚರಿಸಿದ ಕರ್ನಾಟಕ ಹೈಕೋರ್ಟ್‌

ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದ್ದ 72 ವರ್ಷ ವಯಸ್ಸಿನ ಶ್ರೀನಿವಾಸ್‌ ರಾವ್‌ ಎಂಬುವವರಿಗೆ ಕಾನೂನು ಸಲಹೆ ಪಡೆಯುವಂತೆ ಕರ್ನಾಟಕ ಹೈಕೋರ್ಟ್‌ ಕಿವಿಮಾತು ಹೇಳಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರು ಮತ್ತು ಇಬ್ಬರು ವಕೀಲರನ್ನು ಕೊಲ್ಲುವುದಾಗಿ ರಾವ್‌ ಈ ಹಿಂದೆ ಬೆದರಿಕೆಯೊಡ್ಡಿದ್ದರು. ಇತ್ತೀಚೆಗೆ ನ್ಯಾಯಾಲಯ ರಾವ್‌ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಂಡಿತ್ತು.

Karnataka High Court

“ಬೇಷರತ್‌ ಕ್ಷಮೆ ಯಾಚನೆ ಬಳಿಕವೂ ನೀವು ಅಂಥದ್ದೇ ಆರೋಪಗಳನ್ನು ಮಾಡುತ್ತಿದ್ದೀರಿ. ಈ ನ್ಯಾಯಾಲಯದ 28 ನ್ಯಾಯಾಧೀಶರನ್ನು ನೀವು ಅಪರಾಧಿಗಳು ಎನ್ನುತ್ತಿದ್ದೀರಿ” ಎಂದು ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ ಎಚ್ಚರಿಕೆ ನೀಡಿತು. ಆದರೆ ರಾವ್‌ ಪ್ರಕರಣದಿಂದ ಹಿಂದೆ ಸರಿಯಲು ನಿರಾಕರಿಸಿದರು. “ಆಹಾರ, ವಸತಿ, ವೈದ್ಯಕೀಯ ನೆರವು ಇಲ್ಲದೆ ನಾನು 14 ವರ್ಷ ಸೆರೆವಾಸ ಅನುಭವಿಸಿದ್ದೇನೆ. ನಾನು ಮಾಡಿರುವ ಆರೋಪ ಸಾಬೀತುಪಡಿಸಲು ಸಿದ್ಧನಿದ್ದೇನೆ. ತಪ್ಪಿದಲ್ಲಿ ಯಾವುದೇ ಶಿಕ್ಷೆ ಸ್ವೀಕರಿಸಲು ಸಿದ್ಧ” ಎಂದು ಅವರು ಸವಾಲು ಹಾಕಿದರು. ಇದನ್ನು ಒಪ್ಪದ ನ್ಯಾಯಾಲಯ ರಾವ್‌ ಅವರ ವಯಸ್ಸನ್ನು ಪರಿಗಣಿಸಿ ಕಡೆಯ ಅವಕಾಶ ನೀಡುವುದಾಗಿ ಹೇಳಿತು. “ದಯವಿಟ್ಟು ಒಂದು ವಿಷಯ ನೆನಪಿಡಿ. ನಿಮ್ಮ ವಾದದಿಂದ ವಿಚಲಿತನಾಗುವುದಿಲ್ಲ. ನಿಮ್ಮ ವಯಸ್ಸು ಪರಿಗಣಿಸಿ ನಿಮಗೆ ಕಾನೂನು ಸಲಹೆ ಪಡೆಯಲು ಕೊನೆಯ ಅವಕಾಶ ನೀಡಲಾಗುತ್ತದೆ," ಎಂದು ಪೀಠ ತಿಳಿಸಿತು. ರಾವ್‌ ತಮ್ಮ ನಿಲುವಿಗೆ ಅಂಟಿ ಕುಳಿತರೆ ಆರೋಪ ಸಾಬೀತುಪಡಿಸುವಂತೆ ಸೂಚಿಸಬೇಕಾಗುತ್ತದೆ” ಎಂದು ವಿಚಾರಣೆಯ ಕೊನೆಯಲ್ಲಿ ಎಚ್ಚರಿಸಿತು. ಮಾರ್ಚ್‌ 22ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಡಿಫಾಲ್ಟ್‌ ಜಾಮೀನು ನೀಡಲು ಬಾಂಬೆ ಹೈಕೋರ್ಟ್‌ ನಕಾರ: 'ಸುಪ್ರೀಂ' ಮೊರೆ ಹೋದ ಸಾಮಾಜಿಕ ಹೋರಾಟಗಾರ ಗೌತಮ್‌ ನವಲಾಖಾ

ಡಿಫಾಲ್ಟ್‌ ಜಾಮೀನು ನೀಡಲು ಬಾಂಬೆ ಹೈಕೋರ್ಟ್‌ ನಿರಾಕರಿಸಿರುವುದನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ, 2018ರ ಭೀಮಾ ಕೋರೆಗಾಂವ್ ಹಿಂಸಾಚಾರದ ಆರೋಪಿ ಗೌತಮ್‌ ನವಲಾಖಾ ಅವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ಮಾರ್ಚ್ 3ರಂದು ನವಲಾಖಾ ಅವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಯು ಯು ಲಲಿತ್, ಇಂದಿರಾ ಬ್ಯಾನರ್ಜಿ ಮತ್ತು ಕೆ ಎಂ ಜೋಸೆಫ್ ಅವರಿರುವ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.

Supreme Court and Navalkha

ಗೃಹಬಂಧನದಲ್ಲಿದ್ದ ಅವಧಿಯನ್ನು ನ್ಯಾಯಾಂಗ ಬಂಧನದ ಭಾಗವಾಗಿ ಲೆಕ್ಕಹಾಕಬೇಕಿದ್ದು ಸಿಆರ್‌ಪಿಸಿ ಸೆಕ್ಷನ್‌ 167 (2) ರ ಅಡಿಯಲ್ಲಿ ಬಂಧನದ ಅವಧಿಯನ್ನು ನಿರ್ಧರಿಸುವಾಗ ಇದನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನವಲಾಖಾ ಬಾಂಬೆ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಆದರೆ ಫೆಬ್ರವರಿ 8 ರಂದು ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎಂ.ಎಸ್. ಕಾರ್ಣಿಕ್ ಅವರಿದ್ದ ಪೀಠ ಅರ್ಜಿಯನ್ನು ತಿರಸ್ಕರಿಸುತ್ತಾ “90 ದಿನಗಳ ಸೆರೆವಾಸದ ಅವಧಿಯನ್ನು ಲೆಕ್ಕಹಾಕುವಾಗ ಆರೋಪಿ ಅಕ್ರಮ ಬಂಧನದಲ್ಲಿದ್ದ ಅವಧಿಯನ್ನು ಗಣನೆಗೆ ತೆಗೆದುಕೊಳ್ಳಲಾಗದು” ಎಂದು ಹೇಳಿತ್ತು.

ಜಾವೇದ್‌ ಅಖ್ತರ್‌ ಮಾನನಷ್ಟ ಪ್ರಕರಣ: ನಟಿ ಕಂಗನಾಗೆ ಜಾಮೀನು ಸಹಿತ ವಾರೆಂಟ್‌ ಹೊರಡಿಸಿದ ಮುಂಬೈ ನ್ಯಾಯಾಲಯ

ಖ್ಯಾತ ಚಿತ್ರಸಾಹಿತಿ ಜಾವೇದ್‌ ಅಖ್ತರ್‌ ಅವರು ಬಾಲಿವುಡ್‌ ನಟಿ ಕಂಗನಾ ರನೌತ್‌ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮುಂಬೈನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಜಾಮೀನು ಸಹಿತ ವಾರೆಂಟ್‌ ಹೊರಡಿಸಿದೆ. ವಿಚಾರಣೆಗೆ ಹಾಜರಾಗಲು ನಟಿ ವಿಫಲರಾದ ಹಿನ್ನೆಲೆಯಲ್ಲಿ ಈ ವಾರೆಂಟ್‌ ಹೊರಡಿಸಲಾಗಿದೆ.

Kangana Ranaut, Javed Akhtar

ರಿಪಬ್ಲಿಕ್‌ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಕಂಗನಾ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆಕ್ಷೇಪಿಸಿ ಹಿರಿಯ ಚಿತ್ರಕರ್ಮಿ ಜಾವೇದ್‌ ಅಖ್ತರ್‌ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನ್ಯಾಯಾಧೀಶರು ರನೌತ್‌ ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದರು. ಆದರೆ ಅವರು ಸೋಮವಾರವೂ ನ್ಯಾಯಾಲಯಕ್ಕೆ ಬಾರದ ಕಾರಣ ಅವರ ವಿರುದ್ಧ ಜಾಮೀನು ಸಹಿತ ವಾರೆಂಟ್‌ ಹೊರಡಿಸಲಾಗಿದೆ.

ಸರಳ ಭಾಷೆ ಯಾವುದೇ ಲೇಖಕರ ಶಕ್ತಿ: ನ್ಯಾಯಾಧೀಶರು ಸರಳ ಭಾಷೆ ಬಳಸುವುದನ್ನು ಮೆಚ್ಚಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ನ್ಯಾಯಾಧೀಶರು ಹೊರಡಿಸುವ ತೀರ್ಪು ಮತ್ತು ಆದೇಶಗಳು ಸರಳ ಭಾಷೆಯಲ್ಲಿರಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ತಿಳಿಸಿದ್ದು ಸರಳ ಭಾಷೆ ಯಾವುದೇ ಲೇಖಕನ ಶಕ್ತಿ ಎಂಬುದಾಗಿ ಅದು ಅಭಿಪ್ರಾಯಪಟ್ಟಿದೆ.

Punjab & Haryana High Court

“ಸರಳ ಅಭಿವ್ಯಕ್ತಿ ಯಾವುದೇ ಭಾಷೆಯ ಆಭರಣ ಎಂದು ನಾವು ಭಾವಿಸುತ್ತೇವೆ. ಇದು ಸಾಮಾನ್ಯ ಜನರಿಗೆ ಅರ್ಥವಾಗುತ್ತದೆ. ಸಂಕೀರ್ಣ ವಾಕ್ಯ ಬರೆಯುವಾಗ ಕೆಲವೊಮ್ಮೆ ವಿಚಾರದ ಸಾರ ಕಳೆದುಹೋಗುತ್ತದೆ” ಎಂದು ನ್ಯಾಯಾಲಯ ಹೇಳಿದೆ. ಕೆಳಹಂತದ ನ್ಯಾಯಾಲಯದ ಯುವ ನ್ಯಾಯಾಧೀಶೆಯೊಬ್ಬರು ನೀಡಿದ ತೀರ್ಪೊಂದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಯುವ ನ್ಯಾಯಾಧೀಶೆಯ ಪರ ನಿಂತಿರುವ ನ್ಯಾಯಾಲಯ ಹಾಗೆ ಸರಳ ಭಾಷೆ ಬಳಸುವುದು ದೋಷವಲ್ಲ ಬದಲಿಗೆ ಸಾಮರ್ಥ್ಯ ಎಂದು ಪ್ರೋತ್ಸಾಹಿಸಿದೆ.

ಟೂಲ್‌ಕಿಟ್‌ ಪ್ರಕರಣ: ನಿರೀಕ್ಷಣಾ ಜಾಮೀನಿಗಾಗಿ ದೆಹಲಿ ನ್ಯಾಯಾಲಯದ ಮೊರೆ ಹೋದ ನಿಕಿತಾ ಜೇಕಬ್‌

ರೈತರ ಪ್ರತಿಭಟನೆಯ ಟೂಲ್‌ಕಿಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವೃತ್ತಿಯಿಂದ ವಕೀಲೆಯಾಗಿರುವ ಆರೋಪಿ ನಿಕಿತಾ ಜೇಕಬ್‌ ಅವರು ನಿರೀಕ್ಷಣಾ ಜಾಮೀನು ಕೋರಿ ದೆಹಲಿಯ ನ್ಯಾಯಾಲಯವೊಂದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಾಳೆ (ಮಂಗಳವಾರ) ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಅವರು ಧರ್ಮೇಂದರ್‌ ರಾಣಾ ಅವರು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

Nikita Jacob

ನಿಕಿತಾ ಅವರ ಮನೆ ಮೇಲೆ ಫೆ. 11ರಂದು ಪೊಲೀಸರು ದಾಳಿ ನಡೆಸಿ ಆಕೆಗೆ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದ್ದರು. ಕೆಲ ದಿನಗಳ ಹಿಂದೆ ಪ್ರಕರಣದ ಮತ್ತೊಬ್ಬ ಆರೋಪಿ ಶಂತನು ಮುಲುಕ್‌ ಅವರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಲಾಗಿತ್ತು. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ದಿಶಾ ರವಿ ಅವರಿಗೆ ಈಗಾಗಲೇ ಜಾಮೀನು ದೊರೆತಿದೆ.