ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 15-2-2021

>> ಕೇಂದ್ರದ ಪ್ರತಿಕ್ರಿಯೆ ಬಯಸಿದ ʼಸುಪ್ರೀಂʼ >> ತಾಯಿ ಭೇಟಿಗೆ ಕಪ್ಪನ್‌ಗೆ ಅವಕಾಶ‌ >> ಅಲ್ಪಸಂಖ್ಯಾತರ ಆಯೋಗದ ಹುದ್ದೆ ಖಾಲಿ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ನೋಟಿಸ್‌ >> ʼಅಪಘಾತಕ್ಕೆ ದೊಡ್ಡ ವಾಹನಗಳಷ್ಟೇ ಕಾರಣವಲ್ಲʼ

Bar & Bench

ಇ ಡಿ ನಿರ್ದೇಶಕ ಮಿಶ್ರಾ ಅಧಿಕಾರಾವಧಿ ವಿಸ್ತರಣೆ: ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌

ಜಾರಿ ನಿರ್ದೇಶನಾಲಯದ (ಇ ಡಿ) ನಿರ್ದೇಶಕ ಸಂಜಯ್‌ ಕುಮಾರ್‌ ಮಿಶ್ರಾ ಅವರ ಅಧಿಕಾರಾವಧಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಸೋಮವಾರ ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಜಾರಿ ನಿರ್ದೇಶನಾಲಯ ಹಾಗೂ ಕೇಂದ್ರ ವಿಚಕ್ಷಣಾ ದಳಕ್ಕೆ ನೋಟಿಸ್‌ ನೀಡಿದೆ. ಮಿಶ್ರಾ ಅವರ ಅಧಿಕಾರಾವಧಿಯನ್ನು ತಿದ್ದುಪಡಿ ಮಾಡಿದ ಆದೇಶವನ್ನು ರದ್ದುಪಡಿಸುವಂತೆ ಕೋರಿ ʼಕಾಮನ್ ಕಾಸ್ʼ ಎಂಬ ಸರ್ಕಾರೇತರ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಎರಡು ವರ್ಷಗಳಿದ್ದ ಅಧಿಕಾರಾವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಿರುವುದು ಕೇಂದ್ರ ವಿಚಕ್ಷಣಾ ದಳ ಕಾಯಿದೆಯ ಉಲ್ಲಂಘನೆ ಎಂದು ಸಂಸ್ಥೆ ವಾದಿಸಿತ್ತು. ಎರಡು ವರ್ಷಗಳ ಅಧಿಕಾರಾವಧಿ ಕಳೆದ ನವೆಂಬರ್‌ನಲ್ಲಿ ಕೊನೆಗೊಂಡಿದ್ದು ಅವರಿಗೆ 2020ರ ಮೇ ತಿಂಗಳಿಗೆ ಅರವತ್ತು ವರ್ಷಗಳಾಗಿವೆ. ಆದರೂ ಕಳೆದ ನವೆಂಬರ್‌ನಲ್ಲಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ ರಾಷ್ಟ್ರಪತಿಗಳು ಅವರ ಸೇವಾವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಿರುವುದಾಗಿ ತಿಳಿಸಿತ್ತು.

Enforcement Directorate

ನಿರ್ದೇಶಕರ ಅವಧಿಯನ್ನು ಎರಡು ವರ್ಷಗಳಿಗೆ ಸೀಮಿತಗೊಳಿಸಿರುವುದು ಅವರು ಎಲ್ಲಾ ಬಗೆಯ ಪ್ರಭಾವ ಮತ್ತು ಒತ್ತಡಗಳಿಂದ ಮುಕ್ತವಾಗಿರಲಿ ಎಂಬ ಕಾರಣಕ್ಕೆ. ನೇಮಕಾತಿಯಲ್ಲಿನ ಇಂತಹ ಅಕ್ರಮದಿಂದಾಗಿ ಜಾರಿ ನಿರ್ದೇಶನಾಲಯದಲ್ಲಿ ಜನತೆ ಇಟ್ಟಿರುವ ವಿಶ್ವಾಸ ಕುಂದುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರರ ಪರವಾಗಿ ನ್ಯಾಯವಾದಿ ಪ್ರಶಾಂತ್‌ ಭೂಷಣ್‌ ವಾದ ಮಂಡಿಸಿದರು.

ಅನಾರೋಗ್ಯ ಪೀಡಿತ ತಾಯಿಯನ್ನು ಭೇಟಿಯಾಗಲು ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರಿಗೆ ಐದು ದಿನಗಳ ಕಾಲ ಅವಕಾಶ

ಹತ್ರಾಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲು ತೆರಳಿ ಮಾರ್ಗ ಮಧ್ಯೆ ಉತ್ತರಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೇರಳ ಪತ್ರಕರ್ತ ಸಿದ್ದಿಕಿ‌ ಕಪ್ಪನ್‌ ತಮ್ಮ ಅನಾರೋಗ್ಯ ಪೀಡಿತ ತಾಯಿಯನ್ನು ಭೇಟಿಯಾಗಲು ಸುಪ್ರೀಂಕೋರ್ಟ್‌ ಐದು ದಿನಗಳ ಕಾಲ ಅವಕಾಶ ನೀಡಿದೆ. ಸಾಮಾಜಿಕ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮಗಳಿಗೆ ಎಂತಹ ಸಂದರ್ಶನಗಳನ್ನು ಕೂಡ ನೀಡಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಸಂಬಂಧಿಕರನ್ನು ಹೊರತುಪಡಿಸಿ ಸಾರ್ವಜನಿಕರನ್ನು ಭೇಟಿ ಮಾಡದಂತೆಯೂ ಅದು ತಿಳಿಸಿದೆ.

Siddique Kappan

ಉತ್ತರಪ್ರದೇಶ ಸರ್ಕಾರದ ತೀವ್ರ ಆಕ್ಷೇಪಣೆಗಳ ಹೊರತಾಗಿಯೂ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಆದೇಶವನ್ನು ಮಾಡಿತು. ಮುಂದಿನ ಎರಡು ಮೂರು ದಿನಗಳವರೆಗೆ ತನ್ನ ತಾಯಿ ಜೀವಂತ ಇರುವುದಾಗಿ ಕಪ್ಪನ್‌ ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ ತಾಯಿಯನ್ನು ಭೇಟಿಯಾಗಲು ಕಪ್ಪನ್‌ ಅವರಿಗೆ ಅವಕಾಶ ನೀಡಿತು.

ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಏಳು ಹುದ್ದೆಗಳಲ್ಲಿ ಆರು ಖಾಲಿ ಇವೆ: ಕೇಂದ್ರದಿಂದ ವರದಿ ಬಯಸಿದ ದೆಹಲಿ ಹೈಕೋರ್ಟ್‌

ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರದ ವರದಿ ಕೋರಿದೆ. ಆಯೋಗದ ಏಳು ಹುದ್ದೆಗಳಲ್ಲಿ ಆರು ಖಾಲಿ ಇವೆ ಎಂಬ ಅರ್ಜಿದಾರರ ವಾದ ಆಲಿಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಅವರಿದ್ದ ಏಕಸದಸ್ಯ ಪೀಠ ಸೋಮವಾರ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಚೇತನ್‌ ಶರ್ಮಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದಾಗಿ ನ್ಯಾಯಾಲಯ ಪ್ರತಿಕ್ರಿಯೆ ನೀಡುವವರ ಪಟ್ಟಿಯಿಂದ ಪ್ರಧಾನಮಂತ್ರಿ ಕಚೇರಿಯನ್ನು ಕೈಬಿಟ್ಟಿತು.

ಅಪಘಾತಗಳಿಗೆ ಸದಾ ದೊಡ್ಡ ವಾಹನಗಳೇ ಕಾರಣ ಎಂಬುದನ್ನು ಮರುಚಿಂತಿಸಲು ಇದು ಸೂಕ್ತ ಸಮಯ: ಮದ್ರಾಸ್‌ ಹೈಕೋರ್ಟ್‌

ಮೋಟಾರು ವಾಹನ ಅಪಘಾತಗಳಲ್ಲಿ ದೊಡ್ಡ ವಾಹನ ಚಾಲಕರೇ ಅಪಘಾತಕ್ಕೆ ಮುಖ್ಯ ಕಾರಣ ಎಂಬ ಊಹೆಯನ್ನು ಮರುಪರಿಶೀಲಿಸುವ ಸಮಯ ಇದು ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ. (ತಮಿಳುನಾಡು ರಾಜ್ಯ ಸಾರಿಗೆ ನಿಗಮದ ಶಾಖಾ ವ್ಯವಸ್ಥಾಪಕ ಮತ್ತು ವಿ. ಮಾರಿಮುತ್ತು ನಡುವಿನ ಪ್ರಕರಣ.) ರಾಜ್ಯ ರಸ್ತೆ ಸಾರಿಗೆ ಬಸ್‌ ಒಂದಕ್ಕೆ ಡಿಕ್ಕಿ ಹೊಡೆದ ಘಟನೆಯಲ್ಲಿ ದ್ವಿಚಕ್ರ ವಾಹನದ ಚಾಲಕ ಮತ್ತು ಹಿಂಬದಿ ಕುಳಿತಿದ್ದವರು ಕೂಡ ಕಾರಣ ಎಂದು ವಾದಿಸಲಾದ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಕೆ ಮುರಳಿ ಶಂಕರ್‌ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ.

Bicycle

“ಬಹುತೇಕ ಪ್ರಕರಣಗಳಲ್ಲಿ ದೊಡ್ಡ ವಾಹನಗಳ ಚಾಲಕರ ವಿರುದ್ಧವೇ ಪ್ರಕರಣ ದಾಖಲಾಗಿದ್ದು ಅಪಘಾತಕ್ಕೆ ಆ ಚಾಲಕನೇ ಕಾರಣ ಎಂಬ ನಿಟ್ಟಿನಲ್ಲಿ ತನಿಖೆಗಳು ನಡೆದಿರುತ್ತವೆ” ಎಂದಿರುವ ನ್ಯಾಯಾಲಯ “ಘಟನೆಯಲ್ಲಿ ಗಾಯಗೊಂಡವರಿಗೆ ಅಥವಾ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವಾಗಲೂ ಕೂಡ ನಮ್ಮ ಮನಸ್ಥಿತಿಯನ್ನು ವಿಶ್ಲೇಷಿಸಬೇಕಾದ ಅಗತ್ಯವಿದೆ” ಎಂಬುದಾಗಿ ತಿಳಿಸಿದೆ. 2015ರಲ್ಲಿ ಬಸ್‌- ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಗೋವಿಂದರಾಜು ಎಂಬುವವರು ಮೃತಪಟ್ಟಿದ್ದರು. ಆಗ 6.62 ಲಕ್ಷ ರೂಪಾಯಿ ಪರಿಹಾರವನ್ನು ಶೇ 7.5%ರಷ್ಟು ಬಡ್ಡಿಯೊಂದಿಗೆ ನೀಡಬೇಕು ಎಂದು ನ್ಯಾಯಮಂಡಳಿಯೊಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ರಾಜ್ಯ ಸಾರಿಗೆ ನಿಗಮ ಮೇಲ್ಮನವಿ ಸಲ್ಲಿಸಿತ್ತು. ಮೂರು ಜನರೊಂದಿಗೆ ದ್ವಿಚಕ್ರ ವಾಹನ ಸವಾರಿ ಮಾಡಿದ್ದು ಮತ್ತು ಲಾರಿಯೊಂದನ್ನು ಹಿಂದಿಕ್ಕಿ ನಿಷಿದ್ಧ ಬದಿಯಲ್ಲಿ ಸಾಗಿದ್ದು ಅಪಘಾತಕ್ಕೆ ಕಾರಣ ಎಂದು ವಿಚಾರಣೆ ವೇಳೆ ವಿವರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಚಾಲಕ ಮತ್ತು ಹಿಂಬದಿಯಲ್ಲಿದ್ದ ಮೂವರು ವಯಸ್ಕ ವಿದ್ಯಾರ್ಥಿಗಳು ನಿರ್ಲಕ್ಷ್ಯದಿಂದ ತಪ್ಪೆಸಗಿದ್ದಾರೆ ಎಂದು ತೀರ್ಪು ನೀಡಿರುವ ನ್ಯಾಯಾಲಯ ನ್ಯಾಯಮಂಡಳಿ ಸೂಚಿಸಿರುವ ಪರಿಹಾರ ಮೊತ್ತದಲ್ಲಿ ಶೇ 50ರಷ್ಟನ್ನು ಪರಿಹಾರ ಕೋರಿದವರೇ ಭರಿಸಿಕೊಳ್ಳಬೇಕು ಎಂದು ತಿಳಿಸಿತು.