ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 26-1-2021

>> ವಕೀಲರ ಭದ್ರತೆಗೆ ಸೂಚಿಸಿದ ಮದ್ರಾಸ್ ಹೈಕೋರ್ಟ್ >>ಪ್ರವಾಸ ತೆರಳಿದ್ದ ನ್ಯಾಯವಾದಿಗಳಿಗೆ ದಂಡ >> ಕಿಶೋರ್ ಬಿಯಾನಿ ಬಂಧಿಸುವಂತೆ ಮನವಿ

Bar & Bench

ಸಿ ಎಸ್‌ ಕರ್ಣನ್‌ ವಿರುದ್ಧ ವಾದ ಮಂಡಿಸುತ್ತಿದ್ದ ಹಿರಿಯ ವಕೀಲರಿಗೆ ಬೆದರಿಕೆ: ಭದ್ರತೆ ಒದಗಿಸುವಂತೆ ಸೂಚಿಸಿದ ಮದ್ರಾಸ್‌ ಹೈಕೋರ್ಟ್‌

ಮಹಿಳೆಯರು ಮತ್ತು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ನಿವೃತ್ತ ನ್ಯಾಯಮೂರ್ತಿ ಸಿ ಎಸ್‌ ಕರ್ಣನ್‌ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ ಎಸ್‌ ಪ್ರಭಾಕರನ್‌ ಹಾಗೂ ತಮಿಳುನಾಡು ಮತ್ತು ಪುದುಚೆರಿ ವಕೀಲರ ಪರಿಷತ್‌ ಅಧ್ಯಕ್ಷ ಪಿ ಎಸ್‌ ಅಮಲ್‌ರಾಜ್‌ ಅವರಿಗೆ ಭದ್ರತೆ ಒದಗಿಸುವಂತೆ ಮದ್ರಾಸ್‌ ಹೈಕೋರ್ಟ್‌ ಅಧಿಕಾರಿಗಳಿಗೆ ಸೂಚಿಸಿದೆ. ಕರ್ಣನ್‌ ಅವರ ಮನೆ ಅಂಗಳದಲ್ಲಿ ಅವರ ಕೈಬರಹದ ಪತ್ರಗಳನ್ನು ವಶುಪಪಡಿಸಿಕೊಳ್ಳಲಾಗಿದ್ದು ಇದರಲ್ಲಿ ಸುಪ್ರೀಂಕೋರ್ಟ್‌ ಮತ್ತಿತ್ತರ ನ್ಯಾಯಮೂರ್ತಿಗಳ ವಿರುದ್ಧ ನಿಂದನಾತ್ಮಕ, ಅಸಭ್ಯ ಹಾಗೂ ಪ್ರಚೋದನಕಾರಿ ಟೀಕೆಗಳನ್ನು ಮಾಡಲಾಗಿದೆ ಎಂದು ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ ಪ್ರಭಾಕರ್‌ ಅವರು ನ್ಯಾಯಮೂರ್ತಿಗಳಾದ ಎಂ ಸತ್ಯನಾರಾಯಣನ್‌ ಮತ್ತು ಎ ನಕ್ಕೀರನ್‌ ಅವರಿದ್ದ ಪೀಠಕ್ಕೆ ತಿಳಿಸಿದರು.

Justice CS Karnan

ಇದೇ ವೇಳೆ ವಕೀಲರ ಸಂಘದ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಭಾಕರನ್‌ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಬೆದರಿಕೆ ಕರೆಗಳು ಬಂದಿವೆ ಎಂದರು. ಅಲ್ಲದೆ ಅಮಲ್‌ರಾಜ್‌ ಅವರಿಗೆ ಕೂಡ ಬೆದರಿಕೆಯೊಡ್ಡಲಾಗಿದೆ ಎಂದು ಕೂಡ ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ಭದ್ರತೆ ಒದಗಿಸುವಂತೆ ಮತ್ತು ನೀಡಲಾಗಿರುವ ಭದ್ರತೆಯನ್ನು ಹೆಚ್ಚಿಸುವಂತೆ ನ್ಯಾಯಾಲಯ ಸೂಚಿಸಿತು. ಪ್ರಕರಣವನ್ನು ಮಾರ್ಚ್‌ 12ಕ್ಕೆ ಮುಂದೂಡಲಾಗಿದೆ.

ವಾದ ಮಂಡಿಸಬೇಕಿದ್ದ ವಕೀಲರು ಶಿರಡಿ ಯಾತ್ರೆಗೆ: ರೂ 3000 ದಂಡ ವಿಧಿಸಿ ಪ್ರಕರಣ ಮುಂದೂಡಿದ ಅಲಾಹಾಬಾದ್‌ ಹೈಕೋರ್ಟ್‌

ಕಕ್ಷೀದಾರರ ಪರ ವಾದ ಮಂಡಿಸಬೇಕಿದ್ದ ಎಲ್ಲಾ ವಕೀಲರು ಶಿರಡಿ ಯಾತ್ರೆ ಕೈಗೊಂಡಿದ್ದಾರೆ ಎಂಬ ಕಾರಣಕ್ಕೆ ಅಲಾಹಾಬಾದ್‌ ಹೈಕೋರ್ಟ್‌ ಸೋಮವಾರ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ. “ತೀರ್ಥಯಾತ್ರೆಗೆ ಹೋಗುವ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ವಿನಂತಿಯನ್ನು ಪರಿಗಣಿಸಿ ಒಂದಷ್ಟು ದಂಡ ವಿಧಿಸುವ ಮೂಲಕ ಪ್ರಕರಣವನ್ಜು ಜ. 28ಕ್ಕೆ ಮುಂದೂಡುವುದು ಸೂಕ್ತ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

Allahabad High Court

ಪ್ರಕರಣ ಮುಂದೂಡುತ್ತಿರುವ ಸಂಬಂಧ ರೂ 3000 ದಂಡ ವಿಧಿಸಿದ ನ್ಯಾಯಾಲಯ ಅದನ್ನು ಅವಧ್‌ನ ವಕೀಲರ ಸಂಘಕ್ಕೆ ಪಾವತಿಸುವಂತೆ ಸೂಚಿಸಿದೆ. ಸರ್ಕಾರಿ ವಕೀಲ ಅವೀಂದ್ರ ಸಿಂಗ್‌ ಪರಿಹಾರ್‌ ಹಾಗೂ ನ್ಯಾಯವಾದಿಗಳಾದ ಅವಿನಾಶ್‌ ಕುಮಾರ್‌ ಸಿಂಗ್‌, ದೇವೇಂದ್ರ ಕುಮಾರ್‌ ರೈ ಹಾಗೂ ಮೈತ್ರೇಯಿ ರೈ ಅವರು ಪ್ರತಿವಾದಿಗಳನ್ನು ಪ್ರತಿನಿಧಿಸುತ್ತಿದ್ದರೆ ವಕೀಲರಾದ ಪ್ರದೀಪ್‌ ಕುಮಾರ್‌ ರೈ ಹಾಗೂ ಪ್ರಕರ್ಷ್‌ ಪಾಂಡೆ ಅವರು ಅರ್ಜಿದಾರರ ಪರ ವಾದ ಮಂಡಿಸಬೇಕಿತ್ತು. ಈ ಎಲ್ಲಾ ವಕೀಲರು ಪ್ರವಾಸ ತೆರಳಿದ್ದರು.

ಫ್ಯೂಚರ್‌ ಗ್ರೂಪ್‌ನ ಕಿಶೋರ್‌ ಬಿಯಾನಿ ಅವರನ್ನು ಬಂಧಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಅಮೆಜಾನ್‌ ಮೊರೆ

ರಿಲಯನ್ಸ್‌ ರಿಟೇಲ್‌ ಜೊತೆಗೆ ಒಪ್ಪಂದ ಮುಂದುವರೆಸದಂತೆ ಫ್ಯೂಚರ್‌ ಗ್ರೂಪ್‌ ಕಂಪೆನಿಯನ್ನು ತಡೆಯಲು ತುರ್ತು ಪರಿಹಾರ ನೀಡಬೇಕೆಂದು ಕೋರಿ ಅಮೆಜಾನ್‌ ಸಂಸ್ಥೆಯು ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ. ಅಲ್ಲದೆ ಅದು ಫ್ಯೂಚರ್‌ ಗ್ರೂಪ್‌ ಕಂಪೆನಿಗಳು, ಕಿಶೋರ್‌ ಬಿಯಾನಿ ಮತ್ತಿತರರ ಆಸ್ತಿಯನ್ನು ಜಪ್ತಿ ಮಾಡಬೇಕು ಜೊತೆಗೆ ಅವರನ್ನು ಬಂಧಿಸಬೇಕು ಎಂದು ಮನವಿ ಮಾಡಿದೆ. ಅಮೆಜಾನ್ ಪ್ರಕಾರ, ಎಸ್‌ಐಎಸಿ ನಿಯಮಗಳ ಅಡಿಯಲ್ಲಿ ನೀಡಲಾಗಿರುವ ತುರ್ತು ಆದೇಶವನ್ನು ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ಸೆಕ್ಷನ್ 17 (2) ಅಡಿ ಜಾರಿಗೊಳಿಸಬಹುದು. ಅಲ್ಲದೆ ಭಾರತೀಯ ಕಾನೂನಿನ ಪ್ರಕಾರ ತುರ್ತು ತೀರ್ಪು ಮೇಲ್ನೋಟಕ್ಕೆ ಮಾನ್ಯ ಎಂದು ಹೈಕೋರ್ಟ್‌ ತನ್ನ ಡಿ. 21 ರ ಆದೇಶದಲ್ಲಿ ಹೈಕೋರ್ಟ್‌ ತಿಳಿಸಿದ್ದನ್ನು ಗಮನಕ್ಕೆ ತಂದಿತು. ಫ್ಯೂಚರ್‌ ಗ್ರೂಪ್‌, ಕಿಶೋರ್‌ ಬಿಯಾನಿ ಹಾಗೂ ಇತರ ಪ್ರವರ್ತಕರು ಮತ್ತು ನಿರ್ದೇಶಕರು ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರೂ ʼಉದ್ದೇಶಪೂರ್ವಕವಾಗಿ ಮತ್ತು ದೋಷಪೂರಿತವಾಗಿʼ ಅವಿಧೇಯತೆ ತೋರಿದ್ದಾರೆ ಎಂದು ಅಮೆಜಾನ್‌ ಆರೋಪಿಸಿದೆ.

kishore biyani, Amazon

ರಿಲಯನ್ಸ್‌ ಜೊತೆಗಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ಫ್ಯೂಚರ್‌ ಗ್ರೂಪ್‌ ಮತ್ತು ಅದರ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಂತೆ ತಡೆಯಜ್ಞೆ ನೀಡಬೇಕೆಂದು ಅಮೆಜಾನ್‌ ಪ್ರಾರ್ಥಿಸಿದೆ. ಅಲ್ಲದೆ ತನ್ನ ಆಸ್ತಿ ಪರಭಾರೆ ಮಾಡಲು, ಹಸ್ತಾಂತರಿಸಲು ಅಥವಾ ವರ್ಗಾವಣೆ ಮಾಡಲು ಇಲ್ಲವೇ ಸೃಷ್ಟಿಸುವುದನ್ನು ತಡೆಯಲು ಕೂಡ ಅರ್ಜಿಯಲ್ಲಿ ಕೋರಲಾಗಿದೆ. ಪ್ರಕರಣ ಇದೇ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.