ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |07-4-2021

>> ಚುನಾವಣೆ ಮುಂದೂಡಿಕೆಗೆ ಕಾರಣ ಕೇಳಿದ ಕೇರಳ ಹೈಕೋರ್ಟ್ >> ಮಂಗಳೂರಿನಲ್ಲಿ ನಾಳೆ ವಕೀಲರಿಗೆ ಕೋವಿಡ್‌ ಲಸಿಕೆ >> ʼವಾಕ್‌ಸ್ವಾತಂತ್ರ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿಲ್ಲʼ >> ನ್ಯಾಯಾಲಯ ಕಟ್ಟಡಗಳ ಪರಂಪರೆ ಕುರಿತ ಸಂವಾದ‌

Bar & Bench

ಮೂರು ಸ್ಥಾನಗಳಿಗೆ ರಾಜ್ಯಸಭಾ ಚುನಾವಣೆ ಮುಂದೂಡಲು ಕಾರಣವೇನು? ಚುನಾವಣಾ ಆಯೋಗವನ್ನು ಪ್ರಶ್ನಿಸಿದ ಕೇರಳ ಹೈಕೋರ್ಟ್‌

ಕೇರಳದ ಮೂರು ರಾಜ್ಯಸಭಾ ಸ್ಥಾನಗಳಿಗೆ ಏಪ್ರಿಲ್‌ 12ರಂದು ಚುನಾವಣೆ ನಡೆಸಲು ಈ ಹಿಂದೆ ತಾನು ಹೊರಡಿಸಿದ್ದ ಅಧಿಸೂಚನೆ ತಡೆಯಲು ಕಾರಣಗಳೇನು ಎಂಬ ಬಗ್ಗೆ ಹೇಳಿಕೆ ನೀಡುವಂತೆ ಕೇರಳ ಹೈಕೋರ್ಟ್‌ ಬುಧವಾರ ಭಾರತ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಿದೆ. (ಎಸ್ ಶರ್ಮಾ ಮತ್ತು ಭಾರತ ಮುಖ್ಯ ಚುನಾವಣಾ ಆಯೋಗ ನಡುವಣ ಪ್ರಕರಣ).

ಏಪ್ರಿಲ್‌ 21ರಂದು ಮೂರು ರಾಜ್ಯಸಭಾ ಸದಸ್ಯರ ಅಧಿಕಾರಾವಧಿ ಮುಗಿಯಲಿದ್ದು ಅಷ್ಟರೊಳಗೆ ಚುನಾವಣೆ ನಡೆಸಲಾಗುವುದು ಎಂದು ಇಸಿಐ ಪರ ವಕೀಲ ದೀಪು ಲಾಲ್‌ ಮೋಹನ್‌ ಅವರು ಭರವಸೆ ಕೊಟ್ಟರೂ ಕೇರಳ ಹೈಕೋರ್ಟ್‌ ಈ ನಿರ್ದೇಶನ ನೀಡಿತು. ಚುನಾವಣೆ ಮುಂದೂಡುವ ನಿರ್ಧಾರಕ್ಕೆ ಇಸಿಐ ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಅದನ್ನು ಗಮನಿಸಿದ ನ್ಯಾಯಮೂರ್ತಿ ಪಿ ವಿ ಆಶಾ ಆದೇಶ ಹೊರಡಿಸಿದರು.

ಮಂಗಳೂರು ವಕೀಲರ ಸಂಘದ ಆಶ್ರಯದಲ್ಲಿ 45 ವರ್ಷಕ್ಕೂ ಮೇಲ್ಪಟ್ಟ ವಕೀಲರಿಗೆ ನಾಳೆ ಕೋವಿಡ್‌ ಲಸಿಕೆ ಕಾರ್ಯಕ್ರಮ

45 ವರ್ಷಕ್ಕೂ ಮೇಲ್ಪಟ್ಟ ವಕೀಲರಿಗೆ ಕೋವಿಡ್‌ ಲಸಿಕೆ ಹಾಕುವ ಕಾರ್ಯಕ್ರಮವನ್ನು ಮಂಗಳೂರು ವಕೀಲರ ಸಂಘ ಗುರುವಾರ (ಏಪ್ರಿಲ್‌ 8) ಹಮ್ಮಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ಗಂಟೆ ವರೆಗೆ ಲಸಿಕೆ ನೀಡಲಾಗುತ್ತದೆ.

ಹಿರಿಯ ವಕೀಲರು ಹಾಗೂ ಅವರ ಕುಟುಂಬದ ಸದಸ್ಯರು ಲಸಿಕೆ ಪಡೆಯಲಿದ್ದಾರೆ. ಮಂಗಳೂರು ವಕೀಲರ ಸಂಘದ ಸದಸ್ಯರು ಹಾಗೂ ಕೋರ್ಟ್ ವಾಡಿ೯ನ ಮಹಾನಗರ ಪಾಲಿಕೆ ಸದಸ್ಯರಾದ ಎ ಸಿ ವಿನಯರಾಜ್ ನೇತೃತ್ವದಲ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಸಹಕಾರದೊಂದಿಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ವಾಕ್‌ ಸ್ವಾತಂತ್ರ್ಯ ಎಂಬುದು ಧಾರ್ಮಿಕ ಭಾವನೆಗಳನ್ನು ನೋಯಿಸುವ ಪರವಾನಗಿ ಅಲ್ಲ: ರಾಮಮಂದಿರ ಕುರಿತ ಆರೋಪಗಳಿಗೆ ಅಲಾಹಾಬಾದ್‌ ಕೋರ್ಟ್‌ ಪ್ರತಿಕ್ರಿಯೆ

ಜಾತ್ಯತೀತ ದೇಶದಲ್ಲಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ನಾಗರಿಕರ ಧಾರ್ಮಿಕ ಭಾವನೆ ಮತ್ತು ನಂಬಿಕೆಗಳನ್ನು ಘಾಸಿಗೊಳಿಸಲು ಅಥವಾ ನೋಯಿಸಲು ಇರುವ ಪರವಾನಗಿಯಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್‌ ಸೋಮವಾರ ತಿಳಿಸಿದೆ. ಹೀಗಾಗಿ ಪಿಎಫ್‌ಐನ ಮೊಹಮ್ಮದ್‌ ನದೀಮ್‌ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾ. ಚಂದ್ರ ಧಾರಿ ಸಿಂಗ್‌ ಅವರಿದ್ದ ಏಕಸದಸ್ಯ ಪೀಠ ತಿರಸ್ಕರಿಸಿದೆ. ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಅಡಿಗಲ್ಲು ಹಾಕುವ ಸಮಾರಂಭದ ವಿರುದ್ಧ ಹೇಳಿಕೆ ನೀಡಿದ ಹಾಗೂ ಮುಸ್ಲಿಮರು ಬಾಬ್ರಿ ಮಸೀದಿ ಜಾಗವನ್ನು ರಕ್ಷಿಸಬೇಕೆಂದು ಪ್ರಚೋದಿಸಿದ ಆರೋಪ ನದೀಮ್‌ ಅವರ ಮೇಲಿದೆ.

ಮೇಲ್ನೋಟಕ್ಕೆ ಕೃತ್ಯವು, ಸೆಕ್ಷನ್ 153 ಎ ಐಪಿಸಿ ಅಡಿಯಲ್ಲಿ ಶಿಕ್ಷಿಸಬಹುದಾದ ಅಪರಾಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ತಾವು ಹಳ್ಳಿಯಲ್ಲಿದ್ದಾಗ ನದೀಮ್‌ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದುದು ಗಮನಕ್ಕೆ ಬಂದಿತ್ತು ಎಂದು ಅನಿಲ್‌ ಕುಮಾರ್‌ ಮತ್ತು ಅಮಿತ್‌ ಕುಮಾರ್‌ ಎಂಬುವವರು ದೂರು ನೀಡಿದ್ದರು.

ಮೂಲಸೌಕರ್ಯ ಅಳವಡಿಸಲಾಗದ ನ್ಯಾಯಾಲಯ ಕಟ್ಟಡಗಳ ಪಾರಂಪರಿಕತೆಗೆ ಅಂಟಿ ಕೂರುವ ಅಗತ್ಯವಿಲ್ಲ: ನ್ಯಾ. ಎ ಕೆ ಸಿಖ್ರಿ

ದೇಶದ ಪಾರಂಪರಿಕ ನ್ಯಾಯಾಲಯ ಕಟ್ಟಡಗಳನ್ನು ಉಳಿಸಿಕೊಳ್ಳಲು ಪ್ರಯತ್ನಗಳು ನಡೆಯಬೇಕಿದ್ದರೂ ನ್ಯಾಯಾಲಯದ ಕಾರ್ಯಚಟುವಟಿಕೆಗಳಿಗೆ ಅಗತ್ಯವಾದ ಮೂಲಸೌಕರ್ಯ ಅಂತಹ ಕಟ್ಟಡಗಳಲ್ಲಿ ಅಳವಡಿಸಲು ಸಾಧ್ಯವಾಗದೇ ಇದ್ದಲ್ಲಿ ನಾವು ಪಾರಂಪರಿಕತೆಯ ಬಗ್ಗೆ ಅಂಟಿಕೊಳ್ಳಬಾರದು ಎಂದು ನಿವೃತ್ತ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎ ಕೆ ಸಿಖ್ರಿ ತಿಳಿಸಿದ್ದಾರೆ.

ಇದೊಂದು ಚರ್ಚೆಗೊಳಗಬೇಕಾದ ಗಂಭೀರ ವಿಚಾರ ಎಂದ ಅವರು ತಿಳಿಸಿದರು. ವಿಧಿ ಸೆಂಟರ್‌ ಆಫ್‌ ಲಾ ಅಂಡ್‌ ಪಾಲಿಸಿ ಮತ್ತು ಸೃಷ್ಟಿ ಕಲೆ ಮತ್ತು ವಿನ್ಯಾಸ ಸಂಸ್ಥೆ ಸೋಮವಾರ ಆಯೋಜಿಸಿದ್ದ ʼರೀ ಇಮ್ಯಾಜಿನಿಂಗ್‌ ಕೋರ್ಟ್‌ ಸ್ಟ್ರಕ್ಚರ್ಸ್‌ ಇನ್‌ ಇಂಡಿಯಾʼ ವರದಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಮತ್ತೊಬ್ಬ ಅತಿಥಿ ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಡಾ. ಆದಿತ್ಯ ಸೊಂಧಿ ಮಾತನಾಡಿ, “1982ರಲ್ಲಿ ಕರ್ನಾಟಕ ಹೈಕೋರ್ಟ್‌ ಕಟ್ಟಡವನ್ನು ನೆಲಸಮಗೊಳಿಸುವ ಪ್ರಸ್ತಾಪವಿತ್ತು. ಕುತೂಹಲಕರ ಸಂಗತಿಯೆಂದರೆ ಅದೇ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಅದರ ರಕ್ಷಣೆಗೆ ಕಾರಣವಾಯಿತು. ಅದಕ್ಕಾಗಿ ದೇವರಿಗೆ ಧನ್ಯವಾದ ಸಲ್ಲಿಸಬೇಕು. ಏಕೆಂದರೆ ಹಾಗಾಗದಿದ್ದರೆ ಇಂದು ಆ ಭವ್ಯ ಕಟ್ಟಡ ನೋಡಲು ಸಿಗುತ್ತಿರಲಿಲ್ಲ. ಬಾಂಬೆ ಹೈಕೋರ್ಟ್‌, ನಾಗಪುರ ಪೀಠ ಮದ್ರಾಸ್‌ ಹೈಕೋರ್ಟ್‌ ರೀತಿಯ ಕಟ್ಟಡಗಳಿಗೆ ಅನನ್ಯವಾದ ಸೌಂದರ್ಯ ಇದೆ ಎಂದು ಅವರು ತಿಳಿಸಿದರು.