ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಯಿಂದ ದಿನನಿತ್ಯ ವಿಚಾರಣೆ ನಡೆಸಲಾಗುವುದು ಎಂದು ಮುಂಬೈನ ವಿಶೇಷ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ನ್ಯಾಯಾಲಯ ಹೇಳಿದೆ. ಪ್ರಕರಣದಲ್ಲಿನ ಎಲ್ಲಾ ಆರೋಪಿಗಳೂ ತನ್ನ ಮುಂದೆ ಇಂದೇ ಹಾಜರಾಗುವಂತೆ ಹಿಂದೆಯೇ ನ್ಯಾಯಾಲಯ ನಿರ್ದೇಶಿಸಿತ್ತು.
ಕಡಿಮೆ ಅವಧಿಯಲ್ಲಿ ಹಾಜರಾಗುವಂತೆ ಸೂಚಿಸಿರುವುದರಿಂದ ಕೆಲವರಿಗೆ ಸ್ಥಳಕ್ಕೆ ತಲುಪುವುದು ಕಷ್ಟವಾಗಿದೆ ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ವಿವರಿಸಿದರು. ಇನ್ನುಳಿದ ಕೆಲವರು ದೈಹಿಕವಾಗಿ ಸಮರ್ಥರಿಲ್ಲದೇ ಇರುವುದರಿಂದ ಪ್ರಯಾಣ ಕಷ್ಟ ಎಂದೂ ಹೇಳಿದರು. ಕೋವಿಡ್ ಹಿನ್ನೆಲೆಯಲ್ಲಿ ಕಡ್ಡಾಯ ಉಪಸ್ಥಿತಿಯಿಂದ ಅವರಿಗೆ ವಿನಾಯಿತಿ ನೀಡಿರುವ ನ್ಯಾಯಾಲಯವು ಡಿಸೆಂಬರ್ 19ರಂದು ಹಾಜರಿರುವಂತೆ ಸೂಚಿಸಿದೆ. ವಿಶೇಷ ನ್ಯಾಯಾಧೀಶ ಪಿ ಆರ್ ಸಿತ್ರೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಧಾರ್ಮಿಕ ಮತಾಂತರ ಮತ್ತು ಅಂತರ ಧರ್ಮೀಯ ವಿವಾಹಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿರುವ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಜನರನ್ನು ಸುಳ್ಳು ಆರೋಪಗಳಲ್ಲಿ ಸಿಲುಕಿಸುವ ಸಾಧ್ಯತೆ ಇದ್ದು, ಇದು ಅವ್ಯವಸ್ಥೆ ಮತ್ತು ಭಯಕ್ಕೆ ನಾಂದಿ ಹಾಡಬಹುದು ಎಂದು ಸುಗ್ರೀವಾಜ್ಞೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ವಕೀಲರಾದ ವಿಶಾಲ್ ಠಾಕ್ರೆ ಮತ್ತು ಅಭಯ್ ಸಿಂಗ್ ಯಾದವ್ ಹಾಗೂ ಕಾನೂನು ಸಂಶೋಧಕ ಪ್ರಣವೇಶ್ ಅವರು ಸರ್ಕಾರ ಜಾರಿಗೊಳಿಸಿರುವ ಸುಗ್ರೀವಾಜ್ಞೆಯು ಸಾರ್ವಜನಿಕ ನೀತಿ ಮತ್ತು ಜನರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ತಕರಾರು ಎತ್ತಿದ್ದಾರೆ. ಉತ್ತರ ಪ್ರದೇಶದ ವಿವಾದಾತ್ಮಕ ಕಾನೂನುಬಾಹಿರ ಧಾರ್ಮಿಕ ಮತಾಂತರ ಸುಗ್ರೀವಾಜ್ಞೆ-2020ಗೆ ನವೆಂಬರ್‌ನಲ್ಲಿ ಸಂಪುಟ ಒಪ್ಪಿಗೆ ನೀಡಿತ್ತು.
ಅತಿ ಹೆಚ್ಚು ಮಹಿಳಾ ನ್ಯಾಯಮೂರ್ತಿಗಳನ್ನು ಹೊಂದಿರುವ ಹೈಕೋರ್ಟ್ ಎಂಬ ಹಿರಿಮೆಯನ್ನು ಮದ್ರಾಸ್ ಹೈಕೋರ್ಟ್ ತನ್ನಲ್ಲೇ ಉಳಿಸಿಕೊಂಡಿದ್ದು, ಇಂದು ಪ್ರಮಾಣ ಸ್ವೀಕರಿಸಿದ ಹತ್ತು ಹೆಚ್ಚುವರಿ ನ್ಯಾಯಾಮೂರ್ತಿಗಳ ಪೈಕಿ ನಾಲ್ವರು ಮಹಿಳಾ ನ್ಯಾಯಮೂರ್ತಿಗಳಾಗಿದ್ದಾರೆ.
ಮದ್ರಾಸ್ ಹೈಕೋರ್ಟ್‌ನಲ್ಲಿ ಹದಿಮೂರು ಮಂದಿ ಮಹಿಳಾ ನ್ಯಾಯಮೂರ್ತಿಗಳಿದ್ದು, ದೇಶಾದ್ಯಂತ ಇರುವ ಹೈಕೋರ್ಟ್‌ಗಳ ಪೈಕಿ ನಮ್ಮಲ್ಲೇ ಅತಿಹೆಚ್ಚು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಹೇಳಿದರು. ಪತಿ-ಪತ್ನಿ ಇಬ್ಬರೂ ನ್ಯಾಯಮೂರ್ತಿಗಳಾಗಿ ಒಂದೇ ದಿನ ಪ್ರಮಾಣ ಸ್ವೀಕರಿಸಿದ ಐತಿಹಾಸಿಕ ಘಟನೆಗೂ ಮದ್ರಾಸ್ ಹೈಕೋರ್ಟ್ ಸಾಕ್ಷಿಯಾಯಿತು. ನ್ಯಾಯಮೂರ್ತಿಗಳಾದ ಮುರಳಿ ಶಂಕರ್ ಕುಪ್ಪುರಾಜು ಮತ್ತು ತಮಿಳ್‌ಸೆಲ್ವಿ ಸೇರಿದಂತೆ ಹತ್ತು ಮಂದಿಗೆ ಮುಖ್ಯ ನ್ಯಾಯಮೂರ್ತಿ ಎ ಪಿ ಸಾಹಿ ಪ್ರಮಾಣ ವಚನ ಬೋಧಿಸಿದರು. ಮಂಜುಳಾ ರಾಮರಾಜು ನಲ್ಲಯ್ಯ ಅವರು ಪಿಎಚ್ ಡಿ ಮಾಡುತ್ತಿದ್ದಾರೆ ಎಂದು ಅಡ್ವೊಕೇಟ್ ಜನರಲ್ ವಿಜಯನ್ ವಿವರಿಸಿದರು.
ತನ್ನನ್ನು 'ಅಶಿಕ್ಷಿತ, ಅವಿವೇಕಿ' ಎಂದು ಕರೆದಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಸಮನ್ಸ್ ನೀಡದ್ದನ್ನು ಪ್ರಶ್ನಿಸಿ ಜೀ ಮೀಡಿಯಾ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಲು ದೆಹಲಿ ನ್ಯಾಯಾಲಯ ನಿರಾಕರಿಸಿದೆ.
ರೋಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರು ಜೀ ಮಾಧ್ಯಮದ ಪುನರ್ ಪರಿಶೀಲನಾ ಮನವಿಯನ್ನು ತಡವಾಗಿ ಸಲ್ಲಿಸಲಾಗಿದೆ ಎಂದು ಹೇಳಿ ವಜಾ ಮಾಡಿದರು. ಮೊಯಿತ್ರಾ ವಿರುದ್ಧ ಜೀ ನ್ಯೂಸ್ ದಾಖಲಿಸಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯವು ಕಳೆದ ವರ್ಷ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಜೀ ನ್ಯೂಸ್ ಅನ್ನು ಮೊಯಿತ್ರಾ ಅವರು ಕಳ್ಳರು ಮತ್ತು ಕಾಸಿಗಾಗಿ ಸುದ್ದಿ ಪ್ರಸಾರ ಮಾಡುವವರು ಎಂದು ಜರಿದಿದ್ದಕ್ಕೆ ಸಮನ್ಸ್ ಆದೇಶ ಹೊರಡಿಸಲಾಗಿತ್ತು. ಆದರೆ, "ಅಶಿಕ್ಷಿತ, ಅವಿವೇಕಿ" ಎಂದದ್ದಕ್ಕೆ ಸಮನ್ಸ್ ಹೊರಡಿಸಿರಲಿಲ್ಲ ಎನ್ನುವುದು ವಾಹಿನಿಯ ಆಕ್ಷೇಪಣೆ.
ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಗಢ ಪೊಲೀಸರು ಆರೋಪ ಪಟ್ಟಿ ಸಲ್ಲಿಸುವುದಕ್ಕೆ ತಡೆ ನೀಡುವಂತೆ ಬಾಂಬೆ ಹೈಕೋರ್ಟ್‌ಗೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮಧ್ಯಂತರ ಮನವಿ ಸಲ್ಲಿಸಿದ್ದಾರೆ. ಪೊಲೀಸರು ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಿದರೆ ಅದು ಸುಪ್ರೀಂ ಕೋರ್ಟ್ ನವೆಂಬರ್ 27ರಂದು ನೀಡಿರುವ ನಿರ್ದೇಶನಗಳು ಮತ್ತು ಆದೇಶದ ವ್ಯಂಗ್ಯವಾಗಲಿದೆ ಎಂದು ಅರ್ನಾಬ್ ವಿವರಿಸಿದ್ದಾರೆ.
ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಕೋರಿರುವ ಅರ್ನಾಬ್, ಮಹಾರಾಷ್ಟ್ರ ಸರ್ಕಾರದ ಹಸ್ತಕ್ಷೇಪವಿಲ್ಲದ ಕೇಂದ್ರೀಯ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಗೆ ವಿಚಾರಣೆ ವರ್ಗಾಯಿಸುವಂತೆ ಕೋರಿದ್ದಾರೆ. ಫೀನಿಕ್ಸ್ ಲೀಗಲ್ ಮೂಲಕ ಮನವಿ ಸಲ್ಲಿಸಿರುವ ಗೋಸ್ವಾಮಿ ಅವರು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರ ನಡತೆಯು ನವೆಂಬರ್ 27ರ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದೂ ವಾದಿಸಿದ್ದಾರೆ.