ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 9-11-2020

Bar & Bench

ತೃತೀಯ ಲಿಂಗಿ ಸಮುದಾಯಕ್ಕೆ ಸಮತಲ ಮೀಸಲಾತಿ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದ ಕರ್ನಾಟಕ ಹೈಕೋರ್ಟ್‌

ತೃತೀಯ ಲಿಂಗಿ ಸಮುದಾಯಕ್ಕೆ ಸರ್ಕಾರಿ ಉದ್ಯೋಗದಲ್ಲಿ ಸಮತಲ ಮೀಸಲಾತಿ ಕೋರಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಸೋಮವಾರ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದೆ.

The Supreme Court’s 2014 NALSA judgment recognised Trangenders as a third gender

ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಹೊರಡಿಸಿರುವ ರಾಜ್ಯ ಸರ್ಕಾರವು ಪುರುಷ ಮತ್ತು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟು ತೃತೀಯ ಲಿಂಗಿಗಳನ್ನು ಕೈಬಿಟ್ಟಿದೆ ಎಂದು ʼಜೀವʼ ಎಂಬ ಟ್ರಸ್ಟ್‌ ಸಲ್ಲಿಸಿರುವ ಮಧ್ಯಪ್ರವೇಶ ಮನವಿಯಲ್ಲಿ ಸರ್ಕಾರದ ನಿಲುವನ್ನು ಪ್ರಶ್ನಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ವಿಚಾರಣೆಯನ್ನು ನವೆಂಬರ್‌ 26ಕ್ಕೆ ಮುಂದೂಡಿದೆ.

ಪ್ರತಿದಿನ ಮೂರು ಗಂಟೆ ಅರ್ನಾಬ್‌ ವಿಚಾರಣೆ: ರಾಯಗಡ ಪೊಲೀಸರಿಗೆ ಅನುಮತಿ ನೀಡಿದ ನ್ಯಾಯಾಲಯ

ಅರ್ನಾಬ್ ಗೋಸ್ವಾಮಿ ಅವರು ನ್ಯಾಯಾಂಗ ಬಂಧನದಲ್ಲಿರುವಷ್ಟು ದಿನ ಪ್ರತಿದಿನ 3 ಗಂಟೆಗಳ ಕಾಲ ವಿಚಾರಣೆ ನಡೆಸಲು ಅಲಿಬಾಗ್‌ನ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ರಾಯಗಡ ಪೊಲೀಸರಿಗೆ ಅನುಮತಿ ನೀಡಿದ್ದಾರೆ.

Arnab Goswami

ಎರಡು ವಾರಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಬಳಿಕ ಪ್ರಸ್ತುತ ತಳೋಜಾ ಜೈಲಿನಲ್ಲಿರುವ ಅರ್ನಾಬ್‌ ಅವರ ವಿಚಾರಣೆ ನಡೆಸಲು ಪೊಲೀಸರು ನ್ಯಾಯಾಧೀಶರಿಂದ ಅನುಮತಿ ಕೋರಿದ್ದರು.

ದೆಹಲಿ-ಎನ್‌ಸಿಆರ್‌ನಲ್ಲಿ ನ. 9ರಿಂದ ಡಿ. 1ರವರೆಗೆ ಪಟಾಕಿಗೆ ನಿಷೇಧ ಹೇರಿದ ಎನ್‌ಜಿಟಿ

ಕೋವಿಡ್‌ -19 ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವುದರಿಂದ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವುದರಿಂದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪ್ರಧಾನ ಪೀಠ ದೆಹಲಿ ನ್ಯಾಯಪೀಠ ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್ ಅಂದರೆ ದೆಹಲಿ ಸುತ್ತಮುತ್ತ ಇರುವ ರಾಜಸ್ತಾನ, ಉತ್ತರಪ್ರದೇಶ, ಹರ್ಯಾಣದ ಕೆಲ ಜಿಲ್ಲೆಗಳನ್ನೊಳಗೊಂಡ ಪ್ರದೇಶ) ಎಲ್ಲಾ ರೀತಿಯ ಪಟಾಕಿಗಳನ್ನು ಇದೇ ನವೆಂಬರ್‌ 9ರ ಮಧ್ಯರಾತ್ರಿಯಿಂದ ಡಿಸೆಂಬರ್‌ 1ರ ಮಧ್ಯರಾತ್ರಿಯವರೆಗೆ ನಿಷೇಧಿಸಲು ಆದೇಶಿಸಿದೆ.

National Green Tribunal, use of firecrackers

ಎನ್‌ಜಿಟಿಯ ಅಧ್ಯಕ್ಷ ನ್ಯಾ. ಆದರ್ಶ್ ಕುಮಾರ್ ಗೋಯೆಲ್ ಅವರು ನೀಡಿದ ಆದೇಶದ ಪ್ರಕಾರ ನವೆಂಬರ್‌ ತಿಂಗಳಲ್ಲಿ ಗಾಳಿಯ ಗುಣಮಟ್ಟ ಕುಸಿದಿರುವ ದೇಶದ ಎಲ್ಲಾ ನಗರ / ಪಟ್ಟಣಗಳಿಗೂ ಈ ಆದೇಶ ಅನ್ವಯಿಸುತ್ತದೆ. ಆದರೆ ಗಾಳಿಯ ಗುಣಮಟ್ಟ ಮಧ್ಯಮ ಪ್ರಮಾಣದಲ್ಲಿರುವ ನಗರ/ಪಟ್ಟಣಗಳಲ್ಲಿ ದೀಪಾವಳಿ, ಛತ್‌, ಕ್ರಿಸ್‌ಮಸ್‌ ಹಾಗೂ ಹೊಸವರ್ಷದಂದು ಹಸಿರು ಪಟಾಕಿಗಳನ್ನು ಸಿಡಿಸಲು ಮಾತ್ರ ಅವಕಾಶ ನೀಡಲಾಗಿದೆ. ಈ ಆದೇಶ 2019 ರ ಸುಪ್ರೀಂಕೋರ್ಟ್ ತೀರ್ಪಿಗೆ ಅನುಗುಣವಾಗಿದೆ ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ. ಪಟಾಕಿ ನಿಷೇಧಿಸುವುದರಿಂದ ಆರ್ಥಿಕ ನಷ್ಟ ಉಂಟಾಗಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗದು ಎಂಬುದು ಜನರ ಆರೋಗ್ಯ ಕಡೆಗಣಿಸಲು ಕಾರಣವಾಗಬಾರದು ಎಂದು ಕೂಡ ಅದು ಅಭಿಪ್ರಾಯಪಟ್ಟಿದೆ.

ಗುಜರಾತ್‌ ಮುಖ್ಯಮಂತ್ರಿ ಬದಲಾವಣೆ ಎಂದು ಸುದ್ದಿ ಪ್ರಕಟಿಸಿ ದೇಶದ್ರೋಹ ಪ್ರಕರಣ ಎದುರಿಸುತ್ತಿದ್ದ ಪತ್ರಕರ್ತ: ಕ್ಷಮೆಯಾಚನೆ ಬಳಿಕ ಜಾಮೀನು

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್‌ ಮುಖ್ಯಮಂತ್ರಿ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಸುದ್ದಿ ಪ್ರಕಟಿಸಿ ದೇಶದ್ರೋಹ ಪ್ರಕರಣ ಎದುರಿಸುತ್ತಿದ್ದ ಪತ್ರಕರ್ತರೊಬ್ಬರಿಗೆ ಬೇಷರತ್‌ ಕ್ಷಮೆ ಯಾಚಿಸಿದ ಬಳಿಕ ಗುಜರಾತ್ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

SEDITION, Gujarat High Court

ʼಫೇಸ್‌ ಆಫ್‌ ನೇಷನ್‌ʼ ಹೆಸರಿನ ಆನ್‌ಲೈನ್‌ ಸುದ್ದಿ ಪೋರ್ಟಲ್‌ ಸಂಪಾದಕ ಧವಲ್‌ ರಜನಿಕಾಂತ್‌ ಪಟೇಲ್‌ಗೆ ಜಾಮೀನು ನೀಡಿರುವ ನ್ಯಾಯಾಲಯ ʼಭವಿಷ್ಯದಲ್ಲಿ ಅವರು ಯಾವುದೇ ಲೇಖನ ಪ್ರಕಟಿಸಿದಾಗ ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧ ಈ ಬಗೆಯ ಹೇಳಿಕೆಗಳನ್ನು ನೀಡುವಂತಿಲ್ಲʼ ಎಂದು ಪೀಠ ತಾಕೀತು ಮಾಡಿದೆ.

ಮೂಲಸೌಕರ್ಯ ಸಮಸ್ಯೆ: ವರ್ಚುವಲ್ ನ್ಯಾಯಾಲಯ ನಡೆಸಲಾಗುತ್ತಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಹಾರಾಷ್ಟ್ರ ಆಡಳಿತ ನ್ಯಾಯಮಂಡಳಿ

ಸಾಕಷ್ಟು ಮೂಲಸೌಕರ್ಯ ಕೊರತೆಯಿಂದಾಗಿ ವೀಡಿಯೊ ಕಲಾಪಗಳನ್ನು ನಡೆಸಲು ಆಗುತ್ತಿಲ್ಲ ಎಂದು ಮಹಾರಾಷ್ಟ್ರ ಆಡಳಿತ ನ್ಯಾಯಮಂಡಳಿ (ಎಂಎಟಿ) ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ. ತಮ್ಮ ಬಳಿ ಇರುವ ಕಂಪ್ಯೂಟರ್‌ಗಳು ತುಂಬಾ ಹಳೆಯವು ಮತ್ತು ಕಾರ್ಯನಿರ್ವಹಿಸಲು ಸಾಧ್ಯವಾಗದಂತೆ ಇವೆ ಎಂದು ನ್ಯಾಯಮಂಡಳಿ ಹೇಳಿದೆ.

Bombay High Court, copyright

ಎಂಎಟಿಯ ರಿಜಿಸ್ಟ್ರಾರ್, ಎಸ್ ಕೆ ಜೋಶಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, “ಇ-ನ್ಯಾಯಾಲಯಗಳಿಗೆ ಅಗತ್ಯ ಮೂಲಸೌಲಭ್ಯ ಕೊರತೆ ಉಂಟಾಗಿದ್ದು ಇದರಿಂದಾಗಿ ನ್ಯಾಯಮಂಡಳಿ ವಿಡಿಯೋ ಕಲಾಪ ಮತ್ತು ಫೈಲಿಂಗ್‌ ಪ್ರಕ್ರಿಯೆಯಲ್ಲಿ ತೊಂದರೆ ಎದುರಿಸುತ್ತಿದೆ” ಎಂದು ವಿವರಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದ ವಕೀಲ ಯೋಗೇಶ್ ಮೊರ್ಬಲೆ ಅವರ ಮನವಿಗೆ ಪ್ರತಿಕ್ರಿಯೆಯಾಗಿ ಈ ವರದಿ ಸಲ್ಲಿಸಲಾಗಿದೆ.