ಕೋವಿಡ್ ಸುದ್ದಿಗಳ ಪ್ರಸಾರಕ್ಕೆ ತಡೆ ನೀಡಬಾರದೆಂಬ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರದ ವಿರುದ್ಧ ರಾಜ್ಯದ ಸುದ್ದಿ ವಾಹಿನಿ ಎಬಿಎನ್ ಆಂಧ್ರಜ್ಯೋತಿ ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದೆ. ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ಕನಮುರಿ ರಘುರಾಮ ಕೃಷ್ಣಂ ರಾಜು ಅವರು ರಾಜ್ಯ ಸರ್ಕಾರ ಕೈಗೊಂಡ ಕೋವಿಡ್ ಕ್ರಮಗಳನ್ನು ಟೀಕಿಸಿ ಭಾಷಣ ಮಾಡಿದ್ದರು. ಅದನ್ನು ಪ್ರಸಾರ ಮಾಡಿದ್ದಕ್ಕಾಗಿ ತನ್ನ ಮೇಲೆ ಹಾಗೂ ಮತ್ತೊಂದು ಸುದ್ದಿ ವಾಹಿನಿ ʼಟಿವಿ 5ʼ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಇದು ಸುಪ್ರೀಂಕೋರ್ಟ್ ಏಪ್ರಿಲ್ 30ರಂದು ನೀಡಿದ್ದ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಎಬಿಎನ್ ಆಂಧ್ರಜ್ಯೋತಿ ಅರ್ಜಿಯಲ್ಲಿ ತಿಳಿಸಿದೆ.
ರಾಜ್ಯದ ಮಾಧ್ಯಮಗಳನ್ನು ಮತ್ತು ಜನರನ್ನು ಬೆದರಿಸುವ ಏಕೈಕ ಉದ್ದೇಶದಿಂದ ಆಂಧ್ರ ಸರ್ಕಾರ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ತನ್ನ ಕಾರ್ಯ ಹಾಗೂ ವರ್ಚಸ್ಸಿಗೆ ಕುಂದು ತರುವ ಯಾವುದೇ ಟೀಕೆಯನ್ನು ಕಾನೂನು ಬಾಹಿರವಾಗಿ ಪೊಲೀಸ್ ಅಧಿಕಾರ ಬಳಸಿ ಹತ್ತಿಕ್ಕಲಾಗುತ್ತಿದೆ ಎಂದು ಕೂಡ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ದೇಶದ್ರೋಹ ಪ್ರಕರಣವನ್ನು ಎರಡೂ ವಾಹಿನಿಗಳು ಸೋಮವಾರವಷ್ಟೇ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.
ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಹತ್ಯೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಮತಾ ಬ್ಯಾನರ್ಜಿ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿದೆ. ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಬಿಜೆಪಿ ಕಾರ್ಯಕರ್ತ ಅಭಿಜಿತ್ ಸರ್ಕಾರ್ ಅವರ ಸಹೋದರ ಬಿಸ್ವಜಿತ್ ಸರ್ಕಾರ್ ರಜಾಕಾಲೀನ ಪೀಠದ ಎದುರು ಸಲ್ಲಿಸಿದ್ದ ಮನವಿಯ ವಿಚಾರಣೆ ಮಂಗಳವಾರ ನ್ಯಾಯಾಲಯದಲ್ಲಿ ನಡೆಯಿತು.
ಅಭಿಜಿತ್ ಸರ್ಕಾರ್ ಮಾತ್ರವಲ್ಲದೆ ಬಿಜೆಪಿಯ ಮತ್ತೊಬ್ಬ ಕಾರ್ಯಕರ್ತ ಹರನ್ ಅಧಿಕಾರಿ ಅವರ ಹತ್ಯೆ ಕುರಿತಂತೆಯೂ ತನಿಖೆ ನಡೆಸುವ ಸಲುವಾಗಿ ವಿಶೇಷ ತನಿಖಾ ದಳ ರಚಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿದಾರ ಮತ್ತು ಸಹ ಅರ್ಜಿದಾರರಾದ ಹರನ್ ಅವರ ಪತ್ನಿ ಘಟನೆಯ ಪ್ರತ್ಯಕ್ಷದರ್ಶಿಗಳು ತಾವು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಮೇ 25ಕ್ಕೆ ನಿಗದಿಯಾಗಿದೆ.
ಮಹಾರಾಷ್ಟ್ರ ಸರ್ಕಾರ ತನ್ನ ವಿರುದ್ಧ ನಡೆಸುತ್ತಿರುವ ತನಿಖೆಯನ್ನು ಬೇರೊಂದು ರಾಜ್ಯಕ್ಕೆ ಹಾಗೂ ಬೇರೊಂದು ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು ಎಂದು ಕೋರಿ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ಸಲ್ಲಿಸುವ ಅರ್ಜಿಯ ವಿಚಾರಣೆ ನಡೆಸುವುದರಿಂದ ಸುಪ್ರೀಂಕೋರ್ಟ್ ನ್ಯಾ. ಬಿ ಆರ್ ಗವಾಯಿ ಹಿಂದೆ ಸರಿದಿದ್ದಾರೆ.
ನ್ಯಾ. ಗವಾಯಿ ಅವರಿಗೆ ಪ್ರಕರಣದ ವಿಚಾರಣೆ ನಡೆಸುವುದು ಕಷ್ಟವಾಗುತ್ತಿದೆ. ಅವರು ವಿಚಾರಣೆಯಿಂದ ಹಿಂದೆ ಸರಿದಿರುವುದರಿಂದ ಬೇರೊಂದು ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುವಂತೆ ಮತ್ತೊಬ್ಬ ನ್ಯಾಯಮೂರ್ತಿ ವಿನೀತ್ ಸರಣ್ ಆದೇಶಿಸಿದರು. ತಮ್ಮನ್ನು ಮಹಾರಾಷ್ಟ್ರ ಸರ್ಕಾರ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಿದೆ ಎಂಬುದು ಪೊಲೀಸ್ ಅಧಿಕಾರಿ ಸಿಂಗ್ ಅವರ ಆರೋಪ. ಆದ್ದರಿಂದ ಇಲಾಖಾ ತನಿಖೆ ಬದಲು ಸಿಬಿಐಗೆ ತಮ್ಮ ವಿರುದ್ಧದ ಪ್ರಕರಣಗಳನ್ನು ವರ್ಗಾಯಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದರು. ಸಿಂಗ್ ಅವರು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಭ್ರಷ್ಟಾಚಾರ ಮತ್ತು ದುರ್ನಡತೆ ಆರೋಪ ಮಾಡಿದ್ದರು. ಪರಿಣಾಮ ದೇಶಮುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.