ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 2-11-2020

>>ಭದ್ರತೆ ಕೋರಿದ್ದ ನ್ಯಾಯಾಧೀಶರ ಅರ್ಜಿ ತಿರಸ್ಕಾರ >>ಬೃಹತ್‌ ಹಗರಣವೊಂದರ ತನಿಖೆಗೆ ಸೂಚನೆ >>ಸಿಎ ಪರೀಕ್ಷೆ, ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಲು ಸೂಚನೆ >> ವಕೀಲರಿಗೆ ಆರ್ಥಿಕ ನೆರವು ಕೋರಿದ್ದ ಪ್ರಕರಣಗಳನ್ನು ವರ್ಗಾಯಿಸಿಕೊಂಡ ಸುಪ್ರೀಂ

Bar & Bench

ಬಾಬರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು: ಭದ್ರತೆ ಮುಂದುವರೆಸುವಂತೆ ಕೋರಿ ನ್ಯಾಯಾಧೀಶರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್‌

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‌ ಕೆ ಯಾದವ್‌ ಅವರು ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಇತ್ತೀಚೆಗೆ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್‌ ಕೆ ಅಡ್ವಾಣಿ, ಉಮಾ ಭಾರತಿ, ಮುರಳಿ ಮೋಹನ್‌ ಜೋಷಿ ಸೇರಿದಂತೆ 30 ಮಂದಿಯನ್ನು ಖುಲಾಸೆಗೊಳಿಸಿ ಅವರು ತೀರ್ಪು ನೀಡಿದ್ದರು.

Judge SK Yadav

ಯಾದವ್‌ ಅವರ ಭದ್ರತೆ ಮುಂದುವರೆಸುವಂತಹ ಯಾವುದೇ ಪರಿಸ್ಥಿತಿ ಇಲ್ಲ ಎಂದು ನ್ಯಾಯಮೂರ್ತಿಗಳಾದ ರೋಹಿಂಟನ್‌ ನಾರಿಮನ್‌, ನವೀನ್‌ ಸಿನ್ಹಾ, ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. "ಸೆಪ್ಟೆಂಬರ್ 30ರ ಪತ್ರವನ್ನು ಅವಲೋಕಿಸಿದ ನಂತರ, ಭದ್ರತೆ ಮುಂದುವರೆಸುವುದು ಅಗತ್ಯ ಎಂದು ನಾವು ಪರಿಗಣಿಸುವುದಿಲ್ಲ" ಎಂದು ನ್ಯಾಯಪೀಠ ಹೇಳಿತು.

‘ದೇಶದ ಬೃಹತ್‌ ಫ್ರಾಂಚೈಸಿ ಹಗರಣ’: ವೆಸ್ಟ್‌ಲ್ಯಾಂಡ್‌ ಕಂಪೆನಿ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್‌ ನೋಟಿಸ್

ದೇಶದ ಅತಿದೊಡ್ಡ ಫ್ರಾಂಚೈಸಿ ಹಗರಣ ಎಂದೇ ಆರೋಪಿಸಲಾಗಿರುವ ವೆಸ್ಟ್‌ಲ್ಯಾಂಡ್‌ ಟ್ರೇಡ್ ಪ್ರೈವೇಟ್ ಲಿಮಿಟೆಡ್ ಹಗರಣದ ಬಗ್ಗೆ ತನಿಖೆ ನಡೆಸುವ ಸಂಬಂಧ ಗೃಹ ಸಚಿವಾಲಯ, ಹಣಕಾಸು ಸಚಿವಾಲಯ ಮಾತ್ರವಲ್ಲದೆ ಸಿಬಿಐ, ಇಡಿ, ಎಸ್‌ಎಫ್‌ಐಒ ಇತ್ಯಾದಿ ಸಂಸ್ಥೆಗಳಿಗೆ ಸುಪ್ರೀಂಕೋರ್ಟ್‌ ನೋಟಿಸ್ ನೀಡಿದೆ.

Supreme Court of India

ಹೈಪರ್ ಸೂಪರ್‌ ಮಾರ್ಕೆಟ್, ಹೈಪರ್ ಮಾರ್ಟ್, ಬಿಗ್ ಮಾರ್ಟ್ ಸೂಪರ್ ಮಾರ್ಟ್, ಲೂಯಿಸ್ ಸಲೂನ್, ಮಿಡ್ನೈಟ್ ಕೆಫೆ, ಫ್ರ್ಯಾಂಚೈಸೀ ವರ್ಲ್ಡ್, ಬಿಎಂ ಮಾರ್ಟ್, ಹೆಚ್ ಮಾರ್ಟ್, ಎಸ್ ಮಾರ್ಟ್ ಮುಂತಾದ ನಕಲಿ ಕಂಪನಿಗಳ ಹೆಸರನ್ನು ತೇಲಿಬಿಟ್ಟು ಈ ಕಂಪೆನಿ ವಂಚನೆ ಎಸಗಿತ್ತು ಎಂದು ಆರೋಪಿಸಿ 38 ಅರ್ಜಿದಾರರು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರ ಮೂಲಕ ಪ್ರಕರಣ ದಾಖಲಿಸಿದ್ದಾರೆ. ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್‌ ಅವರಿರುವ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಸಿಎ ಪರೀಕ್ಷೆ: ಐಸಿಎಐ ಜೊತೆಗಿನ ಭಿನ್ನಾಭಿಪ್ರಾಯ ಮೊದಲು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ ಸುಪ್ರೀಂಕೋರ್ಟ್‌

ಸಿಎ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಏಕರೂಪವಾದ ಪ್ರಮಾಣಿತ ಕಾರ್ಯಾಚರಣಾ ಪ್ರಕ್ರಿಯೆಯನ್ನು (ಎಸ್‌ಒಪಿ) ಅಳವಡಿಸಿಕೊಳ್ಳುವಂತೆ ಕೋರಿದ್ದ ಅರ್ಜಿದಾರರಿಗೆ ಇನ್ಸ್‌ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ (ಐಸಿಎಐ) ಜೊತೆಗಿನ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ.

CA exams 2020

ಇದರಲ್ಲಿ ಕಾನೂನಿನ ಪ್ರಶ್ನೆ ಇಲ್ಲ ತಾತ್ವಿಕ ವಿಚಾರ ಅಡಗಿದೆ ಎಂದು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠ ತಿಳಿಸಿದ್ದು ಸಂಸ್ಥೆಯ ಮುಖ್ಯಸ್ಥರೊಂದಿಗಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡು ನಂತರ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸಲಹೆ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹೊರಡಿಸಲಾದ ಆರೋಗ್ಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರೀಕ್ಷೆ ನಡೆಸಲು ಐಸಿಎಐ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಸಾಲಿನ ಸಿಎ ಪರೀಕ್ಷೆ ನವೆಂಬರ್ 21 ರಿಂದ ಪ್ರಾರಂಭವಾಗಲಿದೆ.

ವಕೀಲರಿಗೆ ಹಣಕಾಸು ನೆರವು: ಹೈಕೋರ್ಟುಗಳಲ್ಲಿ ಬಾಕಿ ಇದ್ದ ಪ್ರಕರಣಗಳನ್ನು ಖುದ್ದು ವರ್ಗಾಯಿಸಿಕೊಂಡ ಸುಪ್ರೀಂಕೋರ್ಟ್‌

ಕೋವಿಡ್‌- 19 ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿರುವ ವಕೀಲರಿಗೆ ನೆರವು ನೀಡುವ ಸಂಬಂಧ ಹೈಕೋರ್ಟುಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸಲು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ ನಿರ್ದೇಶಿಸಿದೆ.

Lawyers

ಈ ಸಂಬಂಧದ ಪ್ರಕರಣವೊಂದನ್ನು ಮದ್ರಾಸ್‌ ಹೈಕೋರ್ಟ್‌ ವಿಲೇವಾರಿ ಮಾಡಿದ್ದನ್ನು ಗಮನಿಸಿದ ಸುಪ್ರೀಂಕೋರ್ಟ್‌ ಅದನ್ನೂ ತನಗೆ ವರ್ಗಾಯಿಸುವಂತೆ ಸೂಚಿಸಿದೆ. ಸಂಪಾದನೆ ಮಾಡುತ್ತಿರುವ ವಕೀಲ ಕೋವಿಡ್‌ನಿಂದ ಎಳ್ಳಷ್ಟೂ ಹಣ ಗಳಿಸದೇ ಇದ್ದರೆ ಅಂತಹವರಿಗೆ ನೆರವು ನೀಡಬಹುದು. ಆದರೆ ಸಂಪಾದನೆಯನ್ನೇ ಮಾಡದ ವಕೀಲರಿಗೆ ಇದು ವರವಾಗಬಾರದು. ನಾವು ಎಚ್ಚರಿಕೆಯಿಂದ ಇರಬೇಕುʼ ಎಂದು ಈ ಹಿಂದೆ ಅವರು ಅಭಿಪ್ರಾಯಪಟ್ಟಿದ್ದರು.