ಸೆಂಟ್ರಲ್ ವಿಸ್ತಾ ನಿರ್ಮಾಣ ವಿಚಾರದಲ್ಲಿ ಸುಪ್ರೀಂಕೋರ್ಟ್ ಪರಿಶೀಲನೆಯನ್ನು ಕೇಂದ್ರ ಸ್ವಾಗತಿಸಿದೆ. ಇದೇ ವೇಳೆ ಪುನರ್ ಅಭಿವೃದ್ಧಿ ನಡೆಯುತ್ತಿರುವ ಚಾರಿತ್ರಿಕ ಸ್ಥಳವನ್ನು ಪರಿಗಣಿಸಿ ಕೇಂದ್ರಕ್ಕೆ ಸ್ವಲ್ಪ ಮುಕ್ತತೆ ನೀಡುವಂತೆಯೂ ಅದು ಒತ್ತಾಯಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ʼಕೇಂದ್ರ ಸಚಿವರು ಪ್ರಸ್ತುತ ಬೇರೆ ಬೇರೆ ಕಟ್ಟಡಗಳಲ್ಲಿ ವಾಸಿಸುತ್ತಿದ್ದು ಆ ಮನೆಗಳಿಗೆ ಕೇಂದ್ರ ಸರ್ಕಾರ ಬಾಡಿಗೆ ಪಾವತಿಸಬೇಕಿದೆ. ಹೊಸ ಕಟ್ಟಡದಿಂದ ಹಣ ಉಳಿಯುತ್ತದೆ. ಅಲ್ಲದೆ ಪುನರ್ ಅಭಿವೃದ್ಧಿ ವೇಳೆ ಸರ್ಕಾರ ಪರಿಸರ ಸಂಬಂಧಿ ಸಮಸ್ಯೆಗಳನ್ನು ಸಂಪೂರ್ಣ ಬಗೆಹರಿಸಿದೆʼ ಎಂಬ ಅಂಶಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಸ್ತುತ ಎದ್ದಿರುವ ಅಮೆಜಾನ್ ರಿಲಯನ್ಸ್ ನಡುವಿನ ವಿವಾದದಲ್ಲಿ ತಾನು ಸಿಲುಕಬಹುದು ಎಂದು ಅಂದಾಜಿಸಿರುವ ಫ್ಯೂಚರ್ ಕೂಪನ್ಸ್ ಲಿಮಿಟೆಡ್ ದೆಹಲಿ ಹೈಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದೆ.
ಬಿಗ್ ಬಜಾರ್ ಮತ್ತಿತರ ಚಿಲ್ಲರೆ ಮಾರಾಟ ಮಳಿಗೆಗಳನ್ನು ನಡೆಸುತ್ತಿರುವ ಕಿಶೋರ್ ಬಿಯಾನಿ ಒಡೆತನದ ಈ ಘಟಕ ತನ್ನ ಗಮನಕ್ಕೆ ತಾರದೆ ಯಾವುದೇ ಆದೇಶವನ್ನು ನೀಡಬಾರದು ಎಂದು ಕೋರಿದೆ.
ಚಿಲ್ಲರೆ ಮಾರಾಟ ಕ್ಷೇತ್ರದ ದೈತ್ಯ ಕಂಪೆನಿಗಳಾದ ರಿಲಯನ್ಸ್ ಮತ್ತು ಅಮೆಜಾನ್ ನಡುವಿನ ಸಮರದಲ್ಲಿ ತನಗೆ ಸಂಕಷ್ಟ ಎದುರಾಗಬಹುದು ಎಂದೆಣಿಸಿರುವ ಫ್ಯೂಚರ್ ಕೂಪನ್ಸ್ ಇತ್ತೀಚೆಗೆ ಸಿಂಗಪುರ ಅಂತರರಾಷ್ಟ್ರೀಯ ತುರ್ತು ಮಧ್ಯಸ್ಥಿಕೆ ನ್ಯಾಯಾಲಯದಿಂದಲೂ ತನಗೆ ಅನುಕೂಲಕರವಾಗುವಂತಹ ತೀರ್ಪು ಪಡೆದಿತ್ತು. 2020ರ ವಹಿವಾಟಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಎರಡೂ ಕಡೆಯವರು ಜಾರಿಗೆ ತರಲು ಸಾಧ್ಯವಿಲ್ಲ ಎಂದು ದಾಖಲೆಯಲ್ಲಿ ತಿಳಿಸಿದ್ದವು. ಈ ಮಧ್ಯೆ ತುರ್ತು ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪನ್ನು ಜಾರಿಗೊಳಿಸುವಂತೆ ಕೋರಿ ಅಮೆಜಾನ್, ದೆಹಲಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.
ಕೋವಿಡ್ ಹಿನ್ನೆಲೆಯಲ್ಲಿ ಪ್ರತ್ಯೇಕವಾಸದಲ್ಲಿರುವವರ ಮನೆಗಳೆದುರು ಪೋಸ್ಟರ್ ಅಂಟಿಸಬಾರದು ಎಂದು ಆದೇಶಿಸಿರುವುದಾಗಿ ದೆಹಲಿ ಸರ್ಕಾರ ಅಲ್ಲಿನ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಕೋವಿಡ್ ದೃಢಪಟ್ಟ ವ್ಯಕ್ತಿಗಳ ಗೋಪ್ಯತೆ ಕಾಪಾಡುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕುಶ್ ಕಲ್ರಾ ಎಂಬುವವರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ ನ್ಯಾಯಾಲಯ ಕೋವಿಡ್ ದೃಢಪಟ್ಟ ವ್ಯಕ್ತಿಗಳ ಹೆಸರು ಮತ್ತು ವಿಳಾಸವನ್ನು ಯಾರಿಗೂ ಬಹಿರಂಗಪಡಿಸದಂತೆ ಜಿಲ್ಲಾಡಳಿತಗಳಿಗೆ ಸೂಚಿಸಬೇಕೇಂದು ತಿಳಿಸಿದೆ. ರೋಗಿಗಳು ಶಾಂತವಾಗಿ ಕಾಯಿಲೆಯಿಂದ ಹೊರಬರಲು ಅವರ ಖಾಸಗಿತನ ಕಾಪಾಡುವುದು ಮುಖ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಲಿವ್- ಇನ್ ಸಂಬಂಧದಲ್ಲಿದ್ದು ಕುಟುಂಬದವರೂ ಸೇರಿದಂತೆ ಅನೇಕರಿಂದ ಬೆದರಿಕೆ ಎದುರಿಸುತ್ತಿದ್ದ ಇಬ್ಬರು ಸಲಿಂಗಿ ಮಹಿಳೆಯರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಅಲಾಹಾಬಾದ್ ಹೈಕೋರ್ಟ್ ಆದೇಶಿಸಿದೆ. ಇಬ್ಬರ ಲೈಂಗಿಕ ನಿಲುವೇ ಶೋಷಣೆಗೆ ಏಕೈಕ ಕಾರಣ ಎಂದು ಪೀಠ ಹೇಳಿದೆ.
ಲೈಂಗಿಕ ನಿಲುವು ಮನುಷ್ಯನಿಗೆ ಅತ್ಯಂತ ಸಹಜವಾದುದು ಎಂದು ನಿರ್ಣಯವಾಗಿದ್ದರೂ ಅರ್ಜಿ ಸಮಾಜದ ಸಂಪೂರ್ಣ ವಾಸ್ತವತೆಯನ್ನು ಎತ್ತಿತೋರಿಸುತ್ತಿದ್ದು ಅಲ್ಲಿ ನಾಗರಿಕರು ತಮ್ಮ ಲೈಂಗಿಕ ನಿಲುವಿನ ಕಾರಣಕ್ಕೆ ತಾರತಮ್ಯ ಎದುರಿಸುತ್ತಿದ್ದಾರೆ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.