ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |25-3-2021

>> ಮಹಾಕುಂಭ ಮೇಳಕ್ಕೆ ಕೊರೊನಾ ಕರಿನೆರಳು >> ಸಿಬಿಐ ತನಿಖೆ ಕೋರಿ ಬಾಂಬೆ ಹೈಕೋರ್ಟ್ ಕದ ತಟ್ಟಿದ ಪರಮ್‌ ಬೀರ್‌ ಸಿಂಗ್ >> ಚಂದಾ ಕೊಚ್ಚಾರ್‌ ಪತಿ ದೀಪಕ್‌ಗೆ ಜಾಮೀನು >> ಪತ್ರಕರ್ತೆ ವಿರುದ್ಧದ ಎಫ್‌ಐಆರ್‌ ವಜಾ

Bar & Bench

ಮಹಾ ಕುಂಭಮೇಳ ಕೋವಿಡ್‌ ವ್ಯಾಪಿಸಲು ವೇದಿಕೆಯಾಗದಂತೆ ಎಚ್ಚರ ವಹಿಸಿ: ನಿರ್ದೇಶನ ಜಾರಿಗೊಳಿಸಿದ ಉತ್ತರಾಖಂಡ ಹೈಕೋರ್ಟ್‌

ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಯಾತ್ರಾರ್ಥಿಯು ಆರ್‌ಟಿ-ಪಿಸಿಆರ್‌ ಕೋವಿಡ್‌ ಪರೀಕ್ಷೆ ವರದಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಬುಧವಾರ ಉತ್ತರಾಖಂಡ ಹೈಕೋರ್ಟ್‌ ಹೇಳಿದೆ. “ರಾಜ್ಯ ಸರ್ಕಾರ ಎಚ್ಚರದಿಂದ ಇರಬೇಕು. ಮಹಾಕುಂಭ ಮೇಳವು ಕೋವಿಡ್‌ ಸಾಂಕ್ರಾಮಿಕ ರೋಗ ಹರಡಲು ವೇದಿಕೆಯಾಗಬಾರದು” ಎಂದು ನ್ಯಾಯಾಲಯ ಹೇಳಿದ್ದು, ಕೋವಿಡ್‌ ವರದಿ, ಆಸ್ಪತ್ರೆಗಳ ಪರಿಶೀಲನೆ, ಘಾಟ್‌ ಬಳಿ ವ್ಯವಸ್ಥೆ, ಪ್ರವೇಶದ್ವಾರದಲ್ಲಿ ಪರಿಶೀಲನಾ ಕೇಂದ್ರ, ಮಹಿಳಾ ಘಾಟ್‌ಗಳಿಗೆ ಮಹಿಳಾ ಪೊಲೀಸರ ಮೇಲ್ವಿಚಾರಣೆ, ರಾತ್ರಿ ತಂಗುದಾಣಗಳ ಹೆಚ್ಚಳ ಮಾಡುವುದು ಸೇರಿದಂತೆ ಹಲವು ನಿರ್ದೇಶನಗಳನ್ನು ಸರ್ಕಾರಕ್ಕೆ ನೀಡಿದೆ.

Maha Kumbh Mela at Haridwarha

ನ್ಯಾಯಮೂರ್ತಿಗಳಾದ ರಾಘವೇಂದ್ರ ಸಿಂಗ್‌ ಚೌಹಾಣ್‌ ಮತ್ತು ನ್ಯಾಯಮೂರ್ತಿ ಅಲೋಕ್‌ ಕುಮಾರ್‌ ವರ್ಮಾ ಅವರು “ಮಹಾಕುಂಭ ಮೇಳದಲ್ಲಿ ಭಾಗವಹಿಸುವ ವ್ಯಕ್ತಿಗೆ ಕೋವಿಡ್‌ ಸೋಂಕು ತಗುಲಿಲ್ಲ ಎಂಬುದನ್ನು ಖಾತರಿಪಡಿಸುವ ವೈದ್ಯಕೀಯ ವರದಿ ತರದ ಹೊರತು ಕುಂಭಮೇಳದ ಸ್ಥಳ ಅಥವಾ ರಾಜ್ಯವನ್ನು ಪ್ರವೇಶಿಸಿದಂತೆ ಎಚ್ಚರವಹಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ್ದಾರೆ. “ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ನ್ಯಾಯಾಲಯ ಸೂಚಿಸಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅರ್ಜಿದಾರರ ಪರ ವಕೀಲ ಶಿವ ಭಟ್‌ ಸಲ್ಲಿಸಿದ್ದ ವಿಭಿನ್ನ ವರದಿಗಳನ್ನು ನ್ಯಾಯಾಲಯ ಪರಿಗಣಿಸಿದೆ.

ಅನಿಲ್‌ ದೇಶಮುಖ್‌ ನಿರ್ಧಾರದ ಕುರಿತು ಸಿಬಿಐ ತನಿಖೆ ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಪರಮ್‌ ಬೀರ್‌ ಸಿಂಗ್‌

ಸುಪ್ರೀಂ ಕೋರ್ಟ್‌ನಿಂದ ಮನವಿ ಹಿಂಪಡೆದಿರುವ ಮುಂಬೈ ಪೊಲೀಸ್‌ ಮಾಜಿ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಅವರು ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶಮುಖ್‌ ನಿರ್ಧಾರಗಳ ಕುರಿತು ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆಗೆ ಆದೇಶಿಸುವಂತೆ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಯಾವುದೇ ರಾಜಕಾರಣಿಗೆ ಉಂಟಾಗಬಹುದಾದ ಲಾಭದಾಯಕ ಪ್ರಯೋಜನ ಪರಿಗಣಿಸಿ ಪೊಲೀಸ್ ಅಧಿಕಾರಿಗಳ ವರ್ಗಾವಣೆ / ಹುದ್ದೆ ನೀಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಸಿಂಗ್‌ ಕೋರಿದ್ದಾರೆ.

Param Bir Singh and Anil Deshmukh

ರಾಜ್ಯ ಗೃಹ ಇಲಾಖೆಯ ಗುಪ್ತಚರ ಇಲಾಖೆಯ ಆಯುಕ್ತರಾದ ರಶ್ಮಿ ಶುಕ್ಲಾ ಅವರ ವರದಿಯನ್ನು ಒಳಗೊಂಡ ಸಂಪೂರ್ಣ ದಾಖಲೆಯನ್ನು ಸಲ್ಲಿಸುವಂತೆಯೂ ಅವರು ಮಧ್ಯಂತರ ಮನವಿಯಲ್ಲಿ ಕೋರಿದ್ದಾರೆ. ದಾಖಲೆ ನಾಶ ತಪ್ಪಿಸುವ ಹಿನ್ನೆಲೆಯಲ್ಲಿ ದೇಶಮುಖ್‌ ಅವರ ನಿವಾಸದ ಸಿಸಿಟಿವಿ ದೃಶ್ಯಾವಳಿಗಳನ್ನು ಕಸ್ಟಡಿಗೆ ಪಡೆದುಕೊಳ್ಳುವ ಸಂಬಂಧ ನಿರ್ದೇಶನ ನೀಡುವಂತೆಯೂ ಅವರು ಕೋರಿದ್ದಾರೆ.

ಐಸಿಐಸಿಐ ಬ್ಯಾಂಕ್‌-ವಿಡಿಯೋಕಾನ್‌ ಅಕ್ರಮ ಹಣ ವರ್ಗಾವಣೆ ಪ್ರಕರಣ: ದೀಪಕ್‌ ಕೊಚ್ಚಾರ್‌ಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್‌

ಐಸಿಐಸಿಐ ಬ್ಯಾಂಕ್‌-ವಿಡಿಯೋಕಾನ್‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌‌ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚಾರ್‌ ಅವರ ಪತಿ ದೀಪಕ್‌ ಕೊಚ್ಚಾರ್‌ ಅವರಿಗೆ ಗುರುವಾರ ಬಾಂಬೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. 3 ಲಕ್ಷ ರೂಪಾಯಿಯ ವೈಯಕ್ತಿಕ ಬಾಂಡ್‌ ಮತ್ತು ಭದ್ರತೆ ಒದಗಿಸುವಂತೆ ಸೂಚಿಸಿರುವ ನ್ಯಾಯಮೂರ್ತಿ ಪಿ ಡಿ ನಾಯಕ್‌ ಅವರು ಜಾಮೀನಿಗೆ ಸಮ್ಮತಿಸಿದ್ದಾರೆ. ಪಾಸ್‌ಪೋರ್ಟ್‌ ಅನ್ನು ಸಲ್ಲಿಸುವಂತೆ ಸೂಚಿಸಿರುವ ಪೀಠವು ತನಿಖೆಗೆ ಸಹಕರಿಸುವಂತೆ ದೀಪಕ್‌ ಕೊಚ್ಚಾರ್‌ಗೆ ಆದೇಶಿಸಿದೆ.

Deepak Kochhar

ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಬರುವ ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ಪ್ರಕರಣದ ಅರ್ಹತೆಯ ಆಧಾರದಲ್ಲಿ ಕಳೆದ ನವೆಂಬರ್‌ನಲ್ಲಿ ಜಾಮೀನು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಚ್ಚಾರ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೊಚ್ಚಾರ್‌ ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿತ್ತು. ಅಲ್ಲಿಂದ ಆಗಾಗ್ಗೆ ಜಾರಿ ನಿರ್ದೇಶನಾಲಯದ ಕಸ್ಟಡಿಯನ್ನು ವಿಸ್ತರಿಸಲಾಗಿದೆ.

ಶಿಲ್ಲಾಂಗ್ ಟೈಮ್ಸ್‌ ಸಂಪಾದಕಿ ಪೆಟ್ರಿಶಿಯಾ ಮುಖಿಮ್‌ ವಿರುದ್ಧದ ಎಫ್‌ಐಆರ್‌ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ಮೇಘಾಲಯದಲ್ಲಿ ಬಡಕಟ್ಟೇತರ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯ ವಿರೋಧಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಶಿಲ್ಲಾಂಗ್‌ ಟೈಮ್ಸ್ ಸಂಪಾದಕಿ ಪೆಟ್ರಿಶಿಯಾ ಮುಖಿಮ್‌ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ. ಮುಖಿಮ್‌ ಅವರ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆ ರದ್ದುಗೊಳಿಸಲಾಗದು ಎಂದಿದ್ದ ಮೇಘಾಲಯ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌ ಮತ್ತು ರವೀಂದ್ರ ಭಟ್‌ ಅವರಿದ್ದ ವಿಭಾಗೀಯ ಪೀಠವು ತೀರ್ಪು ನೀಡಿದೆ.

Patricia Mukhim

ಮೇಘಾಲಯದಲ್ಲಿ ಕೆಲವು ಬುಡಕಟ್ಟೇತರ ಸಮುದಾಯಗಳ ಯುವಕರ ಮೇಲಿನ ದಾಳಿ ನಿಯಂತ್ರಿಸುವ ಸಂಬಂಧ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಫೇಸ್‌ಬುಕ್‌ ಪೋಸ್ಟ್‌ ಮಾಡಿದ್ದ ಮುಖಿಮ್‌ ವಿರುದ್ಧ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಲಾಗಿತ್ತು. ಹಿರಿಯ ವಕೀಲೆ ವೃಂದಾ ಗ್ರೋವರ್‌ ಅವರು ಮುಖಿಮ್‌ ಅವರನ್ನು ಪ್ರತಿನಿಧಿಸಿದ್ದರು.