ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |26-3-2021

>> ಶಾಸಕ ಅನ್ಸಾರಿ ವರ್ಗಾವಣೆಗೆ ಅಸ್ತು >> ಸಾಕ್ಷ್ಯ ಸಂಗ್ರಹಿಸಲು ನಿರ್ದೇಶಿಸುವಂತಿಲ್ಲ >> ರೋಹಿಂಗ್ಯಾಗಳ ಗಡಿಪಾರು: ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಆಲಿಸಲು ಸುಪ್ರೀಂ ನಕಾರ

Bar & Bench

ಪಂಜಾಬ್‌ನಿಂದ ಉತ್ತರ ಪ್ರದೇಶಕ್ಕೆ ಶಾಸಕ ಮುಖ್ತಾರ್‌ ಅನ್ಸಾರಿ ವರ್ಗಾಯಿಸಲು ಅಸ್ತು ಎಂದ ಸುಪ್ರೀಂ

ಪಂಜಾಬ್‌ನ ರೋಪರ್‌ ಜೈಲಿನಲ್ಲಿರುವ ಉತ್ತರ ಪ್ರದೇಶ ವಿಧಾನಸಭಾ ಸದಸ್ಯ ಮುಖ್ತಾರ್‌ ಅನ್ಸಾರಿ ಅವರನ್ನು ಉತ್ತರ ಪ್ರದೇಶದ ಬಂಡಾ ಜೈಲಿಗೆ ವರ್ಗಾಯಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಅನುಮತಿಸಿದೆ. ಎರಡು ವಾರಗಳಲ್ಲಿ ಅನ್ಸಾರಿ ಅವರನ್ನು ಉತ್ತರ ಪ್ರದೇಶ ಪೊಲೀಸರ ವಶಕ್ಕೆ ನೀಡಬೇಕು ಮತ್ತು ಅವರನ್ನು ಬಂಡಾ ಜೈಲಿನಲ್ಲಿ ಇಡಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಆರ್‌ ಸುಭಾಷ್‌ ರೆಡ್ಡಿ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.

Punjab and UP

ಪಂಜಾಬ್‌ನಿಂದ ಉತ್ತರ ಪ್ರದೇಶಕ್ಕೆ ಅನ್ಸಾರಿ ಅವರನ್ನು ವರ್ಗಾಯಿಸುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮನವಿ ಒಂದೆಡೆ ಇದ್ದರೆ, ತಮ್ಮ ವಿರುದ್ಧದ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ಅನ್ಸಾರಿ ಅವರು ಸಹ ಮನವಿ ಸಲ್ಲಿಸಿದ್ದರು. ಮೊದಲ ಮನವಿಗೆ ಸಮ್ಮತಿಸಿರುವ ನ್ಯಾಯಾಲಯವು ಅನ್ಸಾರಿ ಮನವಿಯನ್ನು ವಜಾಗೊಳಿಸಿದೆ. ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ ದೂರಿನ ಮೇರೆಗೆ ಪಂಜಾಬ್ ಪೊಲೀಸರು ಪ್ರೊಡಕ್ಷನ್ ವಾರಂಟ್ ಪಡೆದು ಅನ್ಸಾರಿ ಅವರನ್ನು ಪಂಜಾಬ್‌ಗೆ ಕರೆತರುವುದಕ್ಕೂ ಮುನ್ನ ಅವರು ಉತ್ತರ ಪ್ರದೇಶದ ಜೈಲಿನಲ್ಲಿದ್ದರು. ಅನ್ಸಾರಿ ಅವರನ್ನು ಮತ್ತೆ ಉತ್ತರ ಪ್ರದೇಶಕ್ಕೆ ವರ್ಗಾಯಿಸುವಂತೆ ಕೋರಿ ಅಲ್ಲಿನ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.

ಸಾಕ್ಷ್ಯ ಹೇಗೆ ಸಂಗ್ರಹಿಸಬೇಕು ಎಂದು ನ್ಯಾಯಾಲಯ ಅಥವಾ ಆರೋಪಿ ಆದೇಶಿಸುವಂತಿಲ್ಲ: ಮಧ್ಯಪ್ರವೇಶಿಸಲು ದೆಹಲಿ ನ್ಯಾಯಾಲಯ ನಕಾರ

ತಮ್ಮ ಕಚೇರಿಯಲ್ಲಿ ದೆಹಲಿ ಪೊಲೀಸರು ನಡೆಸಿದ ಶೋಧಕ್ಕೆ ಸಂಬಂಧಿಸಿದಂತೆ ವಕೀಲ-ಕಕ್ಷಿದಾರರ ನಡುವಿನ ವಿಶೇಷ ವಿನಾಯಿತಿ ಸಂರಕ್ಷಿಸುವ ಸಂಬಂಧ ನಿರ್ದೇಶನ ನೀಡುವಂತೆ ಕೋರಿ ವಕೀಲ ಮೆಹಮೂದ್‌ ಪ್ರಾಚಾ ಸಲ್ಲಿಸಿದ್ದ ಮನವಿ ಕುರಿತಾಗಿ ಯಾವುದೇ ಆದೇಶ ಹೊರಡಿಸಲು ಪಟಿಯಾಲ ಹೌಸ್‌ ಕೋರ್ಟ್‌ ಗುರುವಾರ ನಿರಾಕರಿಸಿದೆ. “ಅರ್ಜಿದಾರರು ಎತ್ತಿದ ಆಕ್ಷೇಪಣೆಗಳು ಆಧಾರರಹಿತವಾಗಿವೆ. ಕಾನೂನಿನ ಪ್ರಕಾರ ಸರ್ಚ್ ವಾರಂಟ್ ಅನ್ನು ಕಾರ್ಯಗತಗೊಳಿಸಬೇಕು” ಎಂದು ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಡಾ. ಪಂಕಜ್‌ ಶರ್ಮಾ ಹೇಳಿದ್ದಾರೆ.

Mehmood Pracha

ಸಾಕ್ಷ್ಯಾಧಾರಗಳ ಸಂಗ್ರಹವು ತನಿಖೆಯಲ್ಲಿ ಅಂತರ್ಗತವಾಗಿರುತ್ತದೆ ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸುವುದನ್ನು ತಡೆಯಲು ತನಿಖಾಧಿಕಾರಿಗಳ ಕೈಗಳನ್ನು ಕಟ್ಟಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ತನಿಖಾಧಿಕಾರಿ ತನ್ನ ಸ್ವಂತ ವಿವೇಚನೆಗೆ ಅನುಗುಣವಾಗಿ ತನಿಖೆಯ ಸಮಯದಲ್ಲಿ ಅತ್ಯುತ್ತಮವಾದ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಕಡ್ಡಾಯವಾಗಿದೆ ... ತನಿಖಾಧಿಕಾರಿ ನಿರ್ಧಾರದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ತನಿಖಾಧಿಕಾರಿ ಹಸ್ತಕ್ಷೇಪ ಮಾಡದಂತೆ ಇತರೆ ದತ್ತಾಂಶ ರಕ್ಷಿಸಬಹುದು ಎಂಬುದು ಸ್ಪಷ್ಟವಾಗಿದ್ದರೆ, ಸಾಕ್ಷ್ಯಗಳನ್ನು ಹೇಗೆ ಸಂಗ್ರಹಿಸಬೇಕು ಎಂಬುದರ ಕುರಿತು ಆರೋಪಿ ನಿರ್ದೇಶಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.

ರೋಹಿಂಗ್ಯಾಗಳ ಗಡಿಪಾರು: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ತಗಾದೆ-ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿ ಆಲಿಸಲು ಸುಪ್ರೀಂ ನಕಾರ

ರೋಹಿಂಗ್ಯಾ ನಿರ್ಗತಿಕರ ಗಡಿಪಾರಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಪ್ರತಿನಿಧಿಯಾದ ಇ ತೆಂಡಾಯಿ ಅಚಿಯ್ಮೆ ಅವರು ನ್ಯಾಯಾಲಯಕ್ಕೆ ಸಹಾಯ ನೀಡಲು ಮಾಡಿದ ಮನವಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ.

Supreme Court, Rohingya refugees

ಅಚಿಯ್ಮೆ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಯು ಸಿಂಗ್‌ ಅವರ ವಾದ ಆಲಿಸಲು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನಿರಾಕರಿಸಿದರು. “ನಾವು ನಿಮ್ಮನ್ನು ಆಲಿಸಲಾಗದು. ಸರ್ಕಾರಕ್ಕೆ ತನ್ನದೇ ಆದ ಮಿತಿಗಳಿವೆ. ನಿಮ್ಮ ವಾದವನ್ನು ಆನಂತರ ಆಲಿಸುತ್ತೇವೆ” ಎಂದು ಸಿಜೆಐ ಹೇಳಿದರು. “ಒಂದೇ ಒಂದು ಕ್ಷಣ ಅವಕಾಶ ನೀಡಿ” ಎಂದು ಸಿಂಗ್‌ ಮನವಿ ಮಾಡಿದರು. “ನಿಮ್ಮ ಒಂದು ಕ್ಷಣ ಮುಗಿದಿದೆ. ಅದಕ್ಕೆ ಗಂಭೀರ ತಗಾದೆ ಮಾಡಲಾಗಿದೆ. ನಿಮ್ಮನ್ನು ಯಾವಾಗ ಆಲಿಸಬೇಕು ಎಂಬುದನ್ನು ಪರಿಶೀಲಿಸುತ್ತೇವೆ” ಎಂದು ಸಿಜೆ ಹೇಳಿದರು. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಪ್ರತಿನಿಧಿಸಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ಭಾರತವು ವಿಶ್ವಸಂಸ್ಥೆಯ ಪ್ರತಿನಿಧಿಯ ಬಗ್ಗೆ ಈ ವಿಷಯವಾಗಿ ಹೊಂದಿರುವ ವ್ಯತಿರಿಕ್ತ ನಿಲುವನ್ನು ಉಲ್ಲೇಖಿಸಿ ತಗಾದೆ ಎತ್ತಿರುವುದನ್ನು ಪರಿಗಣಿಸಿ ಪೀಠವು ಮೇಲಿನಂತೆ ಹೇಳಿತು.