ಮಾದಕ ವಸ್ತು ಮತ್ತು ಅಮಲು ಪದಾರ್ಥ ನಿಯಂತ್ರಣ (ಎನ್‌ಡಿಪಿಎಸ್) ಕಾಯಿದೆಯಡಿ ದಾಖಲಿಸಲಾಗಿದ್ದ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದ ಗರ್ಭಿಣಿಯೊಬ್ಬರಿಗೆ ಹಿಮಾಚಲ ಪ್ರದೇಶ ಹೈಕೋರ್ಟ್ ಜಾಮೀನು ನೀಡಿದೆ. ಗರ್ಭಿಣಿಯಾಗಿದ್ದಾಗ ಜೈಲಿನಲ್ಲಿದ್ದರೆ ಆಕೆಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ʼಸೆರೆವಾಸ ಮುಂದೂಡಿದರೆ ಸ್ವರ್ಗ ಬಿದ್ದು ಹೋಗುವುದಿಲ್ಲ ಎಂದಿದೆ.
ಗರ್ಭಿಣಿಯರಿಗೆ ಜಾಮೀನು ಬೇಕೇ ವಿನಾ ಜೈಲು ಅಲ್ಲ! ನ್ಯಾಯಾಲಯಗಳು ತಾಯ್ತನದ ಪರವಾಗಿ ಪವಿತ್ರ ಸ್ವಾತಂತ್ರ್ಯ ಒದಗಿಸಬೇಕು. ಅಪರಾಧಗಳು ಭಾರೀ ಗಂಭೀರವಾಗಿದ್ದರೂ ಆರೋಪಗಳು ತೀವ್ರವಾಗಿದ್ದರೂ ಕೂಡ ಅಂತಹವರು ಹೆರಿಗೆಯಾದ ಒಂದು ವರ್ಷದವರೆಗೆ ತಾತ್ಕಾಲಿಕ ಜಾಮೀನು ಅಥವಾ ಶಿಕ್ಷೆಯ ಅಮಾನತಿಗೆ ಅರ್ಹರಾಗಿರುತ್ತಾರೆ. ಅಲ್ಲದೆ ಶಿಕ್ಷೆಗೊಳಗಾದವರು ಮತ್ತು ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದವರು ಕೂಡ ಯಾವುದೇ ಮುಚ್ಚುಮರೆಯಿಲ್ಲದೆ ಇದೇ ಬಗೆಯ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ನ್ಯಾಯಮೂರ್ತಿ ಅನೂಪ್ ಚಿತ್ಕಾರ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ತಮ್ಮ ಸ್ವಂತ ಮನೆಯಲ್ಲಿ ಕೇವಲ ತಾವು ಮಾತ್ರವೇ ವಾಸಿಸಬಹುದಾದ ಹಿರಿಯ ನಾಗರಿಕರ ಹಕ್ಕನ್ನು ಸಂವಿಧಾನದ 21ನೇ ವಿಧಿಯಾದ ಜೀವಿಸುವ ಹಕ್ಕಿನ ಅನುಸಾರ ನೋಡಬೇಕಿದೆ ಎಂದು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಒತ್ತಿ ಹೇಳಿದೆ. ತಾವು ವಾಸಿಸುತ್ತಿರುವ ಸ್ವಂತ ಮನೆಯಿಂದ ಮಗ ಮತ್ತು ಸೊಸೆಯನ್ನು ತೆರವುಗೊಳಿಸುವಂತೆ ಕೋರಿ ಇಬ್ಬರು ಹಿರಿಯ ನಾಗರಿಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.
ಪ್ರಕರಣವನ್ನು ಅಲಿಸಿದ ನ್ಯಾ. ರಾಜಶೇಖರ ಮಂಥಾ ಅವರು, “ಹಿರಿಯ ನಾಗರಿಕರ ಸ್ವಂತ ಮನೆಯಲ್ಲಿ ವಾಸಿಸುವ ಮಕ್ಕಳು ಮತ್ತು ಅವರ ಪತ್ನಿಯರು ಹೆಚ್ಚೆಂದರೆ ಅಲ್ಲಿ ವಾಸಿಸುವ ಪರವಾನಗಿ ಹೊಂದಿರುವವರಾಗಿರುತ್ತಾರೆ. ಅವರ ಈ ವಾಸ್ತವ್ಯದ ಬಗ್ಗೆ ಹಿರಿಯ ನಾಗರಿಕರು ಅಸಂತುಷ್ಟಿಗೊಂಡರೆ ಅಲ್ಲಿಗೆ ಆ ವಾಸ್ತವ್ಯ ಕೊನೆಯಾಗುತ್ತದೆ” ಎಂದು ಆದೇಶಿಸಿದರು. ಆ ಮೂಲಕ, ಎಲ್ಲಿಯವರೆಗೆ ತಮ್ಮ ಸ್ವಂತ ಗೃಹದಲ್ಲಿ ವಾಸಿಸುವ ಹಿರಿಯ ನಾಗರಿಕರು ತಮ್ಮ ಮಗ, ಸೊಸೆಯಂದಿರ ವಾಸ್ತವ್ಯದ ಬಗ್ಗೆ ತೃಪ್ತಿ ಹೊಂದಿರುತ್ತಾರೋ ಅಲ್ಲಿಯವರೆಗೆ ಮಾತ್ರವೇ ಮಕ್ಕಳು, ಸೊಸೆಯಂದಿರು ಅಲ್ಲಿ ವಾಸಿಸಬಹುದು ಎಂದು ನ್ಯಾಯಾಲಯವು ಆದೇಶಿಸಿ ಹಿರಿಯ ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿದಿದೆ.