ಕನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆಗಸ್ಟ್ 14ರಂದು ರಾಜ್ಯಾದ್ಯಂತ ‘ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಲೋಕ್ ಆದಾಲತ್ ವೇಳೆ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಬಯಸಿದರೆ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ/ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಆನ್‍ಲೈನ್/ವಿಡಿಯೋ ಕಾನ್ಫರೆನ್ಸ್/ಇ-ಮೇಲ್/ಎಸ್ಎಂಎಸ್/ವಾಟ್ಸಾಪ್ ಮೂಲಕ ಇಲ್ಲವೇ ಖುದ್ದು ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ ವಿಳಾಸ www.kslsa.kar.nic.in; ನ್ಯಾಯ ಸಂಯೋಗ, ಕಾನೂನು ನೆರವು ಘಟಕ (ಬಹುವಿಧ ಸೇವೆಗಳು- ಒಂದೇ ಸೂರಿನಡಿಯಲ್ಲಿ) ‘ನ್ಯಾಯ ದೇಗುಲ’, ಮೊದಲನೆ ಮಹಡಿ, ಹೆಚ್.ಸಿದ್ಧಯ್ಯ ರಸ್ತೆ, ಬೆಂಗಳೂರು- 560027, ದೂರವಾಣಿ ಸಂಖ್ಯೆ: 080-22111730, ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಅಥವಾ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರ ಸಹಾಯ ವಾಣಿ ಸಂಖ್ಯೆ 1800-425-90900 ಅನ್ನು ಸಂಪರ್ಕಿಸಬಹುದು ಎಂದು ಪ್ರಾಧಿಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಹಣ ಹೊಂದಿಸಲಾಗುತ್ತಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ ಇತ್ತೀಚೆಗೆ ಶೇ 5ರಷ್ಟು ರಿಡೀಮ್ ಮಾಡಬಹುದಾದ ಸಂಚಿತ ಆದ್ಯತಾ ಷೇರುಗಳ ಅವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಲು ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಿತು. ಅಶುತೋಷ್ ಚಂದ್ರ (ನ್ಯಾಯಾಂಗ ಸದಸ್ಯ) ಮತ್ತು ರಾಜೇಶ್ವರ ರಾವ್ ವಿಟ್ಟನಾಲ (ತಾಂತ್ರಿಕ ಸದಸ್ಯ) ಅವರಿದ್ದ ಪೀಠ ಈ ಆದೇಶ ನೀಡಿತು.
ಕೊರೊನಾ ಹಿನ್ನೆಲೆಯಲ್ಲಿ ವ್ಯವಹಾರಗಳನ್ನು ಸುಲಭಗೊಳಿಸಬೇಕು ಎಂಬ ಸರ್ಕಾರದ ಉಪಕ್ರಮ ಉತ್ತೇಜಿಸಲು ಮತ್ತು ಇಕ್ವಿಟಿ ಹಾಗೂ ನ್ಯಾಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಮಂಡಳಿ ತಿಳಿಸಿದೆ. ಕಂಪೆನಿ ಕಾಯಿದೆ 2013ರ ಸೆಕ್ಷನ್ 55 (3) ರ ಅಡಿಯಲ್ಲಿ ಶಾಸನಬದ್ಧ ಅವಶ್ಯಕತೆಗಳಿಗೆ ಅನುಗುಣವಾಗಿ ಈ ಅರ್ಜಿ ಸಲ್ಲಿಸಲಾಗಿತ್ತು.
ಕ್ರಿಪ್ಟೋಕರೆನ್ಸಿ ವಂಚನೆಗೆ ಸಂಬಂಧಿಸಿದಂತೆ ಬಿಟ್‌ಕಾಯಿನ್ ಜಾಲದ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ದೆಹಲಿ ಪೊಲೀಸರಿಗೆ ದೆಹಲಿಯ ಮೆಟ್ರೊಪಾಲಿಟನ್ ನ್ಯಾಯಾಲಯ ಆದೇಶಿಸಿದೆ. ಬಿಟ್‌ಕಾಯಿನ್ ಆನ್‌ಲೈನ್ ವಹಿವಾಟು ತಾಣ ʼಬಿಯಾನ್ಸ್ʼ ಮೂಲಕ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ನೀಡಿದ ದೂರಿಗೆ ಸಂಬಂಧಿಸಿದಂತೆ ನ್ಯಾಯಾಧೀಶ ಅಭಿನವ್ ಪಾಂಡೆ ಈ ಆದೇಶ ನೀಡಿದ್ದಾರೆ.
ಆರೋಪಿ ಮಾಡಿದ ವಂಚನೆ ವಿರುದ್ಧ ತನಿಖೆ ನಡೆಸುವ ಅವಶ್ಯಕತೆ ಇದೆ. ಹಾಗೆಯೇ ದೂರುದಾರನಾಗಿರುವ ಬಿಟ್‌ಕಾಯಿನ್ ಮಾರಾಟಗಾರ ಮತ್ತು ಮಧ್ಯವರ್ತಿಯಾದ ಪೋರ್ಟಲ್ ಕಡೆಯಿಂದ ಏನಾದರೂ ತಪ್ಪು ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕೆಂದು ಅದು ಅಭಿಪ್ರಾಯಪಟ್ಟಿದೆ. ಪ್ರಕರಣದಲ್ಲಿ ಆರೋಪಿ ಹಲವು ಬಾರಿ ದೂರುದಾರರಿಂದ ಬಿಟ್‌ಕಾಯಿನ್ ಖರೀದಿಸಿ ದೂರುದಾರರ ಖಾತೆಗೆ ಹಣ ವರ್ಗಾಯಿಸಿದ್ದ. ಇದಕ್ಕಾಗಿ ‘ಬಿಯಾನ್ಸ್’ ಪೋರ್ಟಲ್ ಬಳಸಲಾಗಿತ್ತು. ಒಮ್ಮೆ ಆರೋಪಿಯ ಬಿಟ್‌ಕಾಯಿನ್ ವ್ಯವಹಾರ ಅಕ್ರಮ ಎಂದು ಆತನ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಆತ ತಾನು ಮಾಡಿದ ಪಾವತಿಗಳು ಹಗರಣದ ಭಾಗವೇ ಆಗಿದ್ದವು ಎಂದು ದೂರುದಾರರಿಗೆ ತಿಳಿಸಿದ್ದ.
ಬಾಲನ್ಯಾಯ ಕಾಯಿದೆ 2015ರ ನಿಬಂಧನೆಗಳು ಅನಾಥ, ಪರಿತ್ಯಕ್ತ, ಒಪ್ಪಿಸಲಾದ ಅಥವಾ ಕಾನೂನು ಸಂಘರ್ಷ ಎದುರಿಸುತ್ತಿರುವ ಇಲ್ಲವೇ ಆರೈಕೆ ಮತ್ತು ರಕ್ಷಣೆಯ ಅಗತ್ಯ ಇರುವ ಮಕ್ಕಳನ್ನು ಮಾತ್ರ ದತ್ತು ತೆಗೆದುಕೊಳ್ಳಲು ಸೀಮಿತವಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಅಭಿಪ್ರಾಯಪಟ್ಟಿದೆ. ಬದಲಿಗೆ ಅದು ಸಂಬಂಧಿಕರಿಂದ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದು ಮತ್ತು ಮಲ ಪೋಷಕರಿಂದ ದತ್ತು ತೆಗೆದುಕೊಳ್ಳುವುದನ್ನು ನಿಯಂತ್ರಿಸುತ್ತದೆ ಎಂದು ನ್ಯಾ. ಮನೀಶಾ ಪಿಟಾಲೆ ಅವರಿದ್ದ ಪೀಠ ತಿಳಿಸಿತು.
ಈ ಹಿನ್ನೆಲೆಯಲ್ಲಿ ಕಾಯಿದೆಯ ನಿಬಂಧನೆ ಪ್ರಕಾರ ಮಗುವನ್ನು ದತ್ತು ತೆಗೆದುಕೊಳ್ಳಬೇಕೆಂದು ಅಪ್ರಾಪ್ತ ಹೆಣ್ಣು ಮಗುವಿನ ಜೈವಿಕ ಮತ್ತು ಭಾವಿ ಪೋಷಕರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ಯಾವತ್ಮಲ್‌ನ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ಹೈಕೋರ್ಟ್ ತಳ್ಳಿಹಾಕಿತು. ಈ ಪ್ರಕರಣದಲ್ಲಿ ಮಗು ಅನಾಥ, ಪರಿತ್ಯಕ್ತ, ಒಪ್ಪಿಸಲಾದ ಅಥವಾ ಕಾನೂನು ಸಂಘರ್ಷ ಎದುರಿಸುತ್ತಿರುವ ಇಲ್ಲವೇ ಆರೈಕೆ ಮತ್ತು ರಕ್ಷಣೆಯ ಅಗತ್ಯತೆಯ ವರ್ಗದಡಿ ಬರುವುದಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ನ್ಯಾಯಾಧೀಶರು ಅರ್ಜಿ ತಿರಸ್ಕರಿಸಿದ್ದರು.