ಕರ್ನಾಟಕ ಭೂ ಸುದಾರಣೆ ಕಾಯಿದೆ-1961ಕ್ಕೆ 2020ರ ಕರ್ನಾಟಕ ಅಧಿನಿಯಮ ಸಂಖ್ಯೆ 56ರನ್ವಯ ತಿದ್ದುಪಡಿ ಮಾಡಲಾಗಿರುತ್ತದೆ. ಈ ತಿದ್ದುಪಡಿಗೂ ಹಿಂದೆ ಹೊರಡಿಸಿದ್ದ 2020ರ ಕರ್ನಾಟಕ ಅಧ್ಯಾದೇಶ ಸಂಖ್ಯೆ: 23ರ ಬಗ್ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಗಳು ದಾಖಲಾಗಿರುವುದು ನ್ಯಾಯಾಲಯದ ಗಮನಕ್ಕೆ ಬಂದಿರುತ್ತದೆ. 2020 ರ ಕರ್ನಾಟಕ ಸುಗ್ರೀವಾಜ್ಞೆ ಸಂಖ್ಯೆ 23ನ್ನು ಆಧರಿಸಿ ರಾಜ್ಯ ಸರ್ಕಾರ ಮತ್ತು ಅದರ ಅಧಿಕಾರಿಗಳು ನಂತರ ಕೈಗೊಂಡ ಎಲ್ಲಾ ಕ್ರಮಗಳು ಈ ಅರ್ಜಿಯಲ್ಲಿ ಅಂಗೀಕರಿಸಬಹುದಾದ ಮುಂದಿನ ಆದೇಶಗಳಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಾಲಯ ನಿರ್ದೇಶಿಸಿದೆ. ಸುಗ್ರೀವಾಜ್ಞೆಯ ಆಧಾರದ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವಾಗ, ಈ ಆದೇಶದ ಬಗ್ಗೆ ಸಂಬಂಧಪಟ್ಟ ಪಕ್ಷಗಳಿಗೆ ಸೂಚಿಸಲಾಗಿದೆಯೆ ಎಂಬುದನ್ನು ಸರ್ಕಾರ ಖಾತ್ರಿಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಹೈಕೋರ್ಟ್ ಗ್ರಹಿಕೆಗಳ ಹಿನ್ನೆಲೆಯಲ್ಲಿ, ಕರ್ನಾಟಕ ಭೂ ಸುಧಾರಣೆ ಕಾಯಿದೆ, 1961 ಕ್ಕೆ ಮಾಡಿರುವ ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸುವ/ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸದರಿ ಆದೇಶದ ಭಾಗದಲ್ಲಿ “ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ W.P.No.9285/2020 c/w W.P.Nos.10162/2020, 10298/2020, 10332/2020, 10861/2020, 12095/2020, 13068/2020, 13886/2020 and 9332/2020 ರಲ್ಲಿ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬ ಷರತ್ತನ್ನು ನಮೂದಿಸಿ ಆದೇಶ/ಹಿಂಬರಹ ಹೊರಡಿಸುವಂತೆ ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.
ತಮಗೆ ನೂತನ ಆಧಾರ್ ಕಾರ್ಡ್ ನೀಡುವಂತೆ ಕೋರಿ ಉದ್ಯಮಿಯೊಬ್ಬರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ, ಯುಐಡಿಎಐಗೆ ಸೂಚನೆ ನೀಡಿದೆ. ತನ್ನ ಅನುಮತಿ ಇಲ್ಲದೆ ಎರಡು ಸಾಗರೋತ್ತರ ಸಂಸ್ಥೆಗಳೊಂದಿಗೆ ತಮ್ಮ ಆಧಾರ್ ಕಾರ್ಡ್ ಸಂಖ್ಯೆಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಅರ್ಜಿದಾರರಾದ ರಾಜನ್ ಅರೋರಾ ದೂರಿದ್ದರು.
ಈ ಸಂಬಂಧ ನ್ಯಾಯಮೂರ್ತಿ ರೇಖಾ ಪಲ್ಲಿ ಅವರಿದ್ದ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಸೆಪ್ಟೆಂಬರ್ 9ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಪಡಿಸಿದ್ದಾರೆ.
ಉಡುಪು ತಯಾರಿಕೆ ಮತ್ತು ರಫ್ತು ವ್ಯವಹಾರದಲ್ಲಿ ತೊಡಗಿರುವ ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬೇರೊಂದು ಘಟಕಕ್ಕೆ ಸಂಪರ್ಕಿಸಲಾಗಿದೆ ಎಂದು ಯೂರೋಪ್ ಮೂಲದ ಗ್ರಾಹಕರೊಬ್ಬರು ತಮಗೆ ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಸಾಗರೋತ್ತರ ಸಂಸ್ಥೆಗಳಿಗೆ ಪತ್ರ ಬರೆದರೂ ಸೂಕ್ತ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯ ಮೊರೆ ಹೋಗಿದ್ದಾರೆ.
ಆಡಳಿತಾರೂಢ ಡಿಎಂಕೆ ಸರ್ಕಾರವು ಸಾಮಾಜಿಕವಾಗಿ ವಂಚಿತರಾಗಿರುವ ವಿದ್ಯಾರ್ಥಿಗಳ ಮೇಲೆ ನೀಟ್ ಪರೀಕ್ಷೆಯು ಬೀರಿರುವ ಪರಿಣಾಮವನ್ನು ಅಧ್ಯಯನ ಮಾಡಲು ಒಂಬತ್ತು ಸದಸ್ಯರ ಸಮಿತಿ ರಚಿಸಿದ್ದನ್ನು ಪ್ರಶ್ನಿಸಿ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕರು ನಾಗರಾಜನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ. ಸಮಿತಿ ಸುಪ್ರೀಂಕೋರ್ಟನ್ನು ನಿರಾಕರಿಸುವುದಿಲ್ಲ ಅಥವಾ ಕೇಂದ್ರ ಸರ್ಕಾರದ ಅಧಿಕಾರವನ್ನೂ ಪ್ರಶ್ನಿಸುವುದಿಲ್ಲ ಎಂದು ಅದು ಹೇಳಿದೆ.
ಅಂತಹ ಸಮಿತಿ ರಚನೆ ಮತ್ತು ನಿರ್ವಹಣೆಗೆ ಹಣ ವ್ಯಯಿಸುವುದು ಸಂಪನ್ಮೂಲ ಪೋಲು ಮಾಡಿದಂತೆ ಎಂದು ಕೆಲವು ನಾಗರಿಕರು ಭಾವಿಸಬಹುದು ಅಥವಾ ಆ ಹಣವನ್ನು ಕೋವಿಡ್ ಪರಿಹಾರಕ್ಕೆ ಬಳಸಿಕೊಂಡಿದ್ದರೆ ಒಳ್ಳೆಯದಿತ್ತು ಎಂದುಕೊಳ್ಳಬಹುದು. ಆದರೆ ಇವು ಚುನಾಯಿತ ಸರ್ಕಾರದ ಕೈಗೊಳ್ಳಬೇಕಾದ ಆಯ್ಕೆಗಳಾಗಿದ್ದು ನಿಜವಾಗಿಯೂ ಸಾಂವಿಧಾನಿಕ ಚೌಕಟ್ಟಿನಲ್ಲಿ ಅಂತಹ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಎಸ್ ರಾಮಮೂರ್ತಿ ಅವರಿದ್ದ ಪೀಠ ತಿಳಿಸಿದೆ. ನ್ಯಾಯಾಲಯಗಳು ತಾವೇ ಮುಂದಾಗಿ ನೀತಿ ನಿರೂಪಣೆ ಅಥವಾ ಸಾರ್ವಜನಿಕ ಅಭಿಪ್ರಾಯಗಳಿಸುವುದಕ್ಕೆ ಸಂಬಂಧಿಸಿದ ಅಧಿಸೂಚನೆ ಅಥವಾ ಕ್ರಮಗಳಿಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.