ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 12-08-2021

>> ದೆಹಲಿ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಕುಟುಂಬಕ್ಕೆ ರೂ.2.5 ಲಕ್ಷ ಮಧ್ಯಂತರ ಪರಿಹಾರ >> ಆಗಸ್ಟ್ 14 ರಂದು ರಾಜ್ಯಾದ್ಯಂತ ಮೆಗಾ ಲೋಕ್ ಅದಾಲತ್ >> ನಟಿ ಗೆಹನಾ ವಸಿಷ್ಠಗೆ ನಿರೀಕ್ಷಣಾ ಜಾಮೀನು ನಿರಾಕರಣೆ

Bar & Bench

ದೆಹಲಿ ಕಂಟೋನ್ಮೆಂಟ್‌ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಯ ಕುಟುಂಬಕ್ಕೆ ರೂ.2.5 ಲಕ್ಷ ಮಧ್ಯಂತರ ಪರಿಹಾರ ನೀಡಲು ಕೋರ್ಟ್‌ ಆದೇಶ

ದೆಹಲಿಯ ಕಂಟೋನ್ಮೆಂಟ್‌ ಪ್ರದೇಶದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬಕ್ಕೆ ರೂ.2.5 ಲಕ್ಷ ಮಧ್ಯಂತರ ಪರಿಹಾರ ನೀಡುವಂತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ.

Delhi Cantonment Rape Case, Patiala House Cour

ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖೆ ನಡೆಯುತ್ತಿದ್ದು ಸದ್ಯಕ್ಕೆ ಅಪ್ರಾಪ್ತೆಯ ಮೇಲೆ ಅತ್ಯಾಚಾರವಾಗಿರುವುದರ ಸಂಬಂಧ ತನಿಖಾಧಿಕಾರಿಗಳು ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನುವ ಅಂಶವನ್ನು ಸಹ ನ್ಯಾಯಾಲಯವು ದಾಖಲಿಸಿಕೊಂಡಿತು. ಸಂತ್ರಸ್ತೆಯ ಕುಟುಂಬಕ್ಕೆ ದೆಹಲಿಯ ಕಾನೂನು ಸೇವಾ ಪ್ರಾಧಿಕಾರವು ಕಾನೂನು ಸೇವೆಯನ್ನು ನೀಡುತ್ತಿದ್ದು ಕುಟುಂಬಕ್ಕೆ ಅವರ ಹಕ್ಕುಗಳು ಮತ್ತು ಪರಿಹಾರದ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಅನುಸಾರ ಪರಿಹಾರಕ್ಕೆ ಅರ್ಜಿ ದಾಖಲಿಸಲಾಗಿದೆ. ಇನ್ನೆರಡು ದಿನಗಳೊಳಗೆ ಮಧ್ಯಂತರ ಪರಿಹಾರವು ಅವರಿಗೆ ದೊರೆಯಲಿದೆ ಎಂದು ಪ್ರಾಧಿಕಾರವು 'ಬಾರ್‌ ಅಂಡ್‌ ಬೆಂಚ್‌'ಗೆ ತಿಳಿಸಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಆಗಸ್ಟ್ 14 ರಂದು ರಾಜ್ಯಾದ್ಯಂತ ಮೆಗಾ ಲೋಕ್ ಅದಾಲತ್

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಾಜ್ಯಾದ್ಯಂತ ಆಗಸ್ಟ್ 14 ರಂದು ಇ-ಲೋಕ್ ಅದಾಲತ್- ಮೆಗಾ ಲೋಕ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ಪಡೆದುಕೊಳ್ಳಬಹುದು. ನ್ಯಾಯಾಲಯದಲ್ಲಿ ದಾಖಲಾಗದೇ ಇರುವ ಪ್ರಕರಣಗಳನ್ನು ಕೂಡ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ಶುಲ್ಕವನ್ನು ಪೂರ್ಣವಾಗಿ ಮರುಪಾವತಿಸಲಾಗುವುದು. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಹುದು.

Lok Adalat

ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಇತ್ಯರ್ಥವಾಗುವ ಈ ಕಾರ್ಯಕ್ರಮದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಕೆ: 1800-425-90900 ನ್ನು ಸಂಪರ್ಕಿಸಬಹುದು ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್ ಶಶಿಧರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಶ್ಲೀಲ ಚಿತ್ರ ಪ್ರಕರಣ: ನಟಿ ಗೆಹನಾ ವಸಿಷ್ಠ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಮುಂಬೈ ನ್ಯಾಯಾಲಯ

ಉದ್ಯಮಿ ರಾಜ್‌ ಕುಂದ್ರಾ ಕೂಡ ಆರೋಪಿಯಾಗಿರುವ ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಗೆಹನಾ ವಸಿಷ್ಠ್ ಅವರಿಗೆ ಮುಂಬೈನ ಸೆಷನ್ಸ್‌ ನ್ಯಾಯಾಲಯವೊಂದು ಜಾಮೀನು ನಿರಾಕರಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಮೂರನೇ ಎಫ್‌ಐಆರ್‌ನಲ್ಲಿ ವಸಿಷ್ಠ್ ನಿರೀಕ್ಷಣಾ ಜಾಮೀನು ಕೋರಿದ್ದರು.

Gehana Vashist, Mumbai Sessions Court

ಪರಿಹಾರಕ್ಕೆ ಸೂಕ್ತವಲ್ಲ ಎಂದು ಹೇಳಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಸೋನಾಲಿ ಅಗರ್ವಾಲ್ ಅರ್ಜಿಯನ್ನು ತಿರಸ್ಕರಿಸಿದರು. ಗೆಹನಾ ವಿರುದ್ಧ ಜುಲೈ 27ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 292, 293 (ಅಶ್ಲೀಲ ಸಾಮಾಗ್ರಿಗಳ ಮಾರಾಟ), ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ಗಳಾದ 67, 67ಎ (ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದ ವಿಷಯ ಪ್ರಸಾರ) ಮತ್ತು ಮಹಿಳೆಯನ್ನು ಅಸಭ್ಯವಾಗಿ ಬಿಂಬಿಸುವ (ನಿಯಂತ್ರಣ) ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯರನ್ನು ತನ್ನ ನಿರ್ದೇಶನದ ಅಶ್ಲೀಲ ಚಿತ್ರಗಳಲ್ಲಿ ನಟಿಸಲು ಬೆದರಿಕೆ, ಬಲವಂತ, ಅಮಿಷಗಳನ್ನು ಗೆಹನಾ ಒಡ್ಡುತ್ತಿದ್ದರು ಎಂದು ಆಕೆಯ ವಿರುದ್ಧ ದೂರು ದಾಖಲಿಸಲಾಗಿತ್ತು.