ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |07-07-2021

>> ಸರ್ಕಾರಿ ವಕೀಲರು, ನ್ಯಾಯಾಂಗ ಅಧಿಕಾರಿಗಳು ಮತ್ತು ನಂಬರ್‌ ಪ್ಲೇಟ್‌: ಹೈಕೋರ್ಟ್ ಹೇಳಿದ್ದೇನು? >> ಭೌತಿಕ ವಿಚಾರಣೆಗೆ ಪರಿಗಣಿಸಿ: ಎಸ್‌ಸಿಬಿಎ >> ಕೋರ್ಟ್‌ ಶುಲ್ಕ ಮರುಪಾವತಿಗೆ ಕೋರಿದ ಜೂಹಿ; “ವಿವೇಕರಹಿತ ಅರ್ಜಿ” ಎಂದ ದೆಹಲಿ ಹೈಕೋರ್ಟ್‌

Bar & Bench

ಸರ್ಕಾರಿ ವಕೀಲರು, ನ್ಯಾಯಾಂಗ ಅಧಿಕಾರಿಗಳು ತಮ್ಮ ವಾಹನಗಳ ನಂಬರ್‌ ಪ್ಲೇಟ್‌ ಮೇಲೆ ಹೆಸರು, ಹುದ್ದೆಗಳನ್ನು ಹಾಕಿಕೊಳ್ಳುವಂತಿಲ್ಲ

ಸರ್ಕಾರಿ ವಕೀಲರು, ನ್ಯಾಯಾಂಗ ಅಧಿಕಾರಿಗಳು ತಮ್ಮ ವಾಹನದ ನೊಂದಾಯಿತ ನಂಬರ್ ಪ್ಲೇಟ್‌ ಮೇಲೆ ಹೆಸರು ಮತ್ತು ಹುದ್ದೆಗಳನ್ನು ಹಾಕಿಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ನಿರ್ದೇಶಿಸಿದ್ದು, ಹಾಗೊಂದು ವೇಳೆ ಹಾಕಿಕೊಂಡಿದ್ದರೆ ಮುಂದಿನ ಒಂದು ವಾರದ ಅವಧಿಯಲ್ಲಿ ತೆಗೆದು ಹಾಕುವಂತೆ ಸೂಚಿಸಿದೆ. ಮುಂದಿನ ಬುಧವಾರದ ಈ ಕುರಿತು ಅನುಸರಣಾ ವರದಿ ಸಲ್ಲಿಸುವಂತೆ ಅದು ಸರ್ಕಾರಕ್ಕೆ ಸೂಚಿಸಿದೆ.

Kerala High Court

ಮೋಟಾರು ವಾಹನ ನಿಯಂತ್ರಣ ಕಾಯಿದೆಯ ಉಲ್ಲಂಘನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾ. ಅನಿಲ್‌ ಕೆ ನರೇಂದ್ರನ್‌ ಅವರು “ಇದನ್ನು (ಹುದ್ದೆ, ಹೆಸರುಗಳನ್ನು ಹಾಕಿಕೊಳ್ಳುವುದು) ಅನುಮತಿಸಲು ಸಾಧ್ಯವಿಲ್ಲ. ನ್ಯಾಯಾಂಗದ ಅಧಿಕಾರಿಗಳು, ಕಾನೂನು ಅಧಿಕಾರಿಗಳು ಅಥವಾ ಹೈಕೋರ್ಟ್‌ ವಾಹನಗಳು ಯಾವುದೇ ಇರಲಿ ಇದನ್ನು ಅನುಮತಿಸಲಾಗದು. ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ,” ಎಂದರು.

ಭೌತಿಕ ವಿಚಾರಣೆ ಆರಂಭಿಸಲು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ವಕೀಲರ ಸಂಘದಿಂದ ಸಿಜೆಐ ಅವರಿಗೆ ಒತ್ತಾಯ

ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಭೌತಿಕ ವಿಚಾರಣೆಯನ್ನು ಆರಂಬಿಸುವ ಬಗ್ಗೆ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಪತ್ರ ಬರೆದಿದೆ.

Supreme Court Bar Association

ಈ ಸಂಬಂಧ ಪತ್ರ ಬರೆದಿರುವ ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಅವರು, ಕೋವಿಡ್‌ ನಿಯಂತ್ರಣ ವರ್ತನಾ ಕ್ರಮಗಳ ಅನುಸರಣೆಯೊಂದಿಗೆ ಭೌತಿಕ ಕಲಾಪಗಳನ್ನು ನಡೆಸಬಹುದಾಗಿದೆ ಎಂದಿದ್ದಾರೆ. ಅಲ್ಲದೆ, ಪತ್ರದಲ್ಲಿ, ಎಸ್‌ಸಿಬಿಎ ವತಿಯಿಂದ 45 ವಯೋಮಾನಕ್ಕಿಂತ ಕೆಳಗಿನ ವಕೀಲರಿಗೆ ಸಮರೋಪಾದಿಯಲ್ಲಿ ಲಸಿಕಾ ಕಾರ್ಯಕ್ರಮ ಕೈಗೊಂಡಿರುವ ಬಗ್ಗೆ ಹಾಗೂ 45 ವಯೋಮಾನ ಮೇಲ್ಪಟ್ಟವರಿಗೆ ಇದಾಗಲೇ ಲಸಿಕಾ ಕಾರ್ಯಕ್ರಮ ಸುಗಮವಾಗಿ ನಡೆಯುತ್ತಿರುವ ಬಗ್ಗೆಯೂ ವಿವರಿಸಲಾಗಿದೆ.

ಕೋರ್ಟ್‌ ಶುಲ್ಕ ಮರುಪಾವತಿಗೆ ಕೋರಿದ ಜೂಹಿ ಚಾವ್ಲಾ; “ಅತ್ಯಂತ ವಿವೇಕರಹಿತ ಅರ್ಜಿ” ಎಂದ ದೆಹಲಿ ಹೈಕೋರ್ಟ್‌

ದೇಶದಲ್ಲಿ 5ಜಿ ಜಾರಿಗೊಳಿಸುವುದನ್ನು ಪ್ರಶ್ನಿಸಿ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯ ಸಂಬಂಧ ದೆಹಲಿ ಹೈಕೋರ್ಟ್‌ ವಿಧಿಸಿದ್ದ ರೂ.20 ಲಕ್ಷ ದಂಡವನ್ನು ಮನ್ನಾ ಮಾಡುವಂತೆ ಕೋರಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯ ಬಗ್ಗೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ನ್ಯಾಯಾಲಯದ ಶುಲ್ಕವನ್ನೂ ಸಹ ಮರುಪಾವತಿ ಮಾಡುವಂತೆ ಕೋರಿದ್ದ ನಟಿಯ ಅರ್ಜಿಯ ಬಗ್ಗೆಯೂ ನ್ಯಾಯಾಲಯ ಅಸಂತೋಷ ವ್ಯಕ್ತಪಡಿಸಿದೆ.

Juhi Chawla - 5G

ಪ್ರಕರಣವನ್ನು ಆಲಿಸಿದ ನ್ಯಾ. ಜೆ ಆರ್‌ ಮಿಧಾ ಅವರು, “ನಾ ಕಂಡ ಅತ್ಯಂತ ವಿವೇಕಹೀನ ಅರ್ಜಿ ಇದಾಗಿದೆ,” ಎಂದರು. ಮುಂದುವರೆದು, “ನನ್ನ ವೃತ್ತಿ ಜೀವನದಲ್ಲಿಯೇ ನಾನು ನ್ಯಾಯಾಲಯದ ಶುಲ್ಕ ಪಾವತಿಸಲು ಸಮ್ಮತಿಸದ ಮತ್ತೊಬ್ಬ ವ್ಯಕ್ತಿಯನ್ನು ಇನ್ನೂ ಕಾಣಬೇಕಿದೆ. ಕೋರ್ಟ್‌ ಶುಲ್ಕವನ್ನು ಪ್ರಶ್ನಿಸಲಾಗಿರುವ ಈ ಅರ್ಜಿ ನನ್ನ ಜೀವನದಲ್ಲಿ ಕಂಡ ಅತ್ಯಂತ ವಿವೇಕಹೀನ ಅರ್ಜಿಯಾಗಿದೆ” ಎಂದರು. ಇನ್ನು ನ್ಯಾಯಾಲಯವು ವಿಧಿಸಿರುವ ರೂ.20 ಲಕ್ಷ ದಂಡ ಪಾವತಿಗೆ ಜೂಹಿ ಪರ ವಕೀಲರು ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಒಂದು ವಾರ ಸಮಯ ನೀಡಿತು.