ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 23-08-2021

Bar & Bench

ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಾಖಗೆ ತಾತ್ಕಾಲಿಕ ಜಾಮೀನು ನಿರಾಕರಿಸಿದ ಎನ್‌ಐಎ ನ್ಯಾಯಾಲಯ

ಭೀಮಾ ಕೊರೆಗಾಂವ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಗೌತಮ್‌ ನವಲಾಖಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ತಾತ್ಕಾಲಿಕ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ. ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಜೈಲುಗಳ ಮೇಲಿನ ಒತ್ತಡ ಕಡಿಮೆ ಮಾಡುವ ದೃಷ್ಟಿಯಿಂದ ಉನ್ನತ ಮಟ್ಟದ ಸಮಿತಿಯ ಮಾರ್ಗಸೂಚಿಗಳನ್ನು ಆಧರಿಸಿ ನವಲಾಖ ಅವರು ತಾತ್ಕಾಲಿಕ ಜಾಮೀನು ಕೋರಿದ್ದರು.

Gautam Navlakha

ಜೈಲಿನಿಂದಲೇ ಮನವಿ ಸಲ್ಲಿಸಲಾಗಿದ್ದು, ಈ ಕಾರಣಕ್ಕಾಗಿ ಹೆಚ್ಚಿನ ವಾದ ಮಂಡಿಸಲು ಇಚ್ಛಿಸುವುದಿಲ್ಲ ಎಂದು ವಕೀಲ ಚಾಂದಿನಿ ಚಾವ್ಲಾ ಹೇಳಿದರು. “ನವಲಾಖ ಅವರು ಹಿರಿಯ ನಾಗರಿಕರಾಗಿದ್ದು, ಇದು ಕೋವಿಡ್‌ ಸಂದರ್ಭ ಎಂಬುದನ್ನು ಪರಿಗಣಿಸಬೇಕು” ಎಂದು ವಾದಿಸಿದ್ದರು. ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕರು ತೀವ್ರ ವಿರೋಧ ದಾಖಲಿಸಿದ್ದರು.

ಜಂತರ್‌ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಪ್ರಕರಣ: ಪಿಂಕಿ ಚೌಧರಿ ನಿರೀಕ್ಷಣಾ ಜಾಮೀನು ಮನವಿ ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ನಮ್ಮದು ತಾಲಿಬಾನ್‌ ಆಡಳಿತಕ್ಕೆ ಒಳಪಟ್ಟಿರುವ ದೇಶವಲ್ಲ. ಬಹು ಸಂಸ್ಕೃತಿಯ ಸಮಾಜವಾದ ನಮ್ಮಲ್ಲಿ ನ್ಯಾಯ ಪರಿಪಾಲನೆಯು ಅತ್ಯಂತ ಪವಿತ್ರವಾದ ಆಡಳಿತ ತತ್ವವಾಗಿದೆ ಎಂದು ದೆಹಲಿ ನ್ಯಾಯಾಲಯವು ಸೋಮವಾರ ಹೇಳಿದ್ದು, ಜಂತರ್‌ ಮಂತರ್‌ನಲ್ಲಿ ದ್ವೇಷ ಭಾಷೆ ಪ್ರಕರಣದ ಆರೋಪಿ ಪಿಂಕಿ ಚೌಧರಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ವಜಾ ಮಾಡಿದೆ.

Pinky Chaudhary and Patiala house

“ಇಡೀ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಕೆಲವು ಮನಸ್ಸುಗಳು ಅತೃಪ್ತ ಮತ್ತು ಸ್ವಯಂ ಕೇಂದ್ರಿತ ನಂಬಿಕೆಗಳಲ್ಲಿ ಸಿಲುಕಿಕೊಂಡಿವೆ” ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅನಿಲ್‌ ಅಂಟಿಲ್‌ ಆದೇಶದಲ್ಲಿ ತಿಳಿಸಿದ್ದು, ಭೂಪೇಂದರ್‌ ತೋಮರ್‌ ಅಲಿಯಾಸ್‌ ಪಿಂಕಿ ಚೌಧರಿ ಅವರ ಜಾಮೀನು ಮನವಿಯನ್ನು ವಜಾಗೊಳಿಸಿದ್ದಾರೆ.