ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 29-07-2021

>> ಪ್ರತಿಷ್ಠಿತ ಕಾನೂನು ಶಾಲೆಗಳಿಗೆ ಐಡಿಐಎ ಟ್ರೈನಿಗಳು >> ಮಾಧ್ಯಮ ನಿರ್ಬಂಧ ಕೋರಿದ ಶಿಲ್ಪಾ ಶೆಟ್ಟಿ >> ಕೌನ್ಸೆಲಿಂಗ್‌ಗೆ ರೂ. 50 ಸಾವಿರ ಠೇವಣಿ ಪ್ರಶ್ನಿಸಿ ಅರ್ಜಿ >> ಪ. ಬಂಗಾಳ ಕಾನೂನು ಸೇವಾ ಪ್ರಾಧಿಕಾರದ ಸಮಿತಿಗೆ ತೃತೀಯ ಲಿಂಗಿ

Bar & Bench

ಪ್ರತಿಷ್ಠಿತ ಕಾನೂನು ಶಾಲೆಗಳಿಗೆ ಐಡಿಐಎ ಟ್ರೈನಿಗಳು

ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ಮತ್ತು ಎನ್‌ಎಎಲ್‌ಎಸ್‌ಎಆರ್‌ ಕಾನೂನು ವಿವಿ ಸೇರಿದಂತೆ ವಿವಿಧ ಕಾನೂನು ಶಾಲೆಗಳಿಗೆ ಐಡಿಐಎ ಸಂಸ್ಥೆಯ 10 ಟ್ರೈನಿಗಳು (ಪ್ರಶಿಕ್ಷಣಾರ್ಥಿಗಳು) ಮೊದಲ ಪಟ್ಟಿಯಲ್ಲಿ ಸೇರ್ಪಡೆಯಾಗುತ್ತಿರುವುದಕ್ಕೆ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಶಿಶಿರ ರುದ್ರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡಿರುವ ಅವರು ಐಡಿಐಎ ಟ್ರೈನಿಗಳ ಪಾಲಿಗೆ ಇದು ಮತ್ತೊಂದು ಯಶಸ್ವಿ ವರ್ಷ ಎಂದು ತಿಳಿಸಿದ್ದಾರೆ. ಸಿಎಲ್‌ಎಟಿ ಫಲಿತಾಂದ ಬೆನ್ನಿಗೇ ಐಡಿಐಎ ಟ್ರೈನಿಗಳ ಸಾಧನೆ ಗಮನ ಸೆಳೆದಿದೆ.

IDIA

ಅಲ್ಲದೆ, ಇನ್ನೂ10 ಟ್ರೈನಿಗಳು ಎರಡನೇ ಪಟ್ಟಿಯಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ಕೂಡ ಅವರು ಹೇಳಿದ್ದಾರೆ. ಇದೇ ವೇಳೆ ಕೋವಿಡ್‌ ನಿರ್ಬಂಧಗಳಿರುವ ಸಂದರ್ಭದಲ್ಲಿ ಟ್ರೈನಿಗಳ ಪಾಲಿಗೆ ಇದು ಕಠಿಣ ವರ್ಷವಾಗಿತ್ತು ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ. ಐಡಿಐಎ ಸಂಸ್ಥೆಯು ಕಾನೂನು ಶಿಕ್ಷಣ ಮತ್ತು ಕಾನೂನು ಕ್ಷೇತ್ರದಲ್ಲಿ ವೈವಿಧ್ಯಮಯ ಹಿನ್ನೆಲೆಯಿಂದ, ವಿಶೇಷವಾಗಿ ಮೊದಲನೆಯ ತಲೆಮಾರಿನ ಕಾನೂನು ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುವು ಮಾಡುವ ಸಲುವಾಗಿ ಕೆಲಸ ಮಾಡುತ್ತಿರುವ ವಾಣಿಜ್ಯ ಉದ್ದೇಶವಿಲ್ಲದ ಸಂಸ್ಥೆಯಾಗಿದೆ. ಕಾನೂನು ತಜ್ಞ ದಿವಂಗತ ಬಶೀರ್‌ ಶಮ್ನಾದ್ ಅವರು ಐಡಿಐಎ ಸ್ಥಾಪಕರು.

ಪಶ್ಚಿಮ ಬಂಗಾಳ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಮಿತಿಯ ಸದಸ್ಯ ವಕೀಲರಾಗಿ ತೃತೀಯ ಲಿಂಗಿ ಅಂಕನಿ ಬಿಸ್ವಾಸ್‌

ತೃತೀಯ ಲಿಂಗಿ ವಕೀಲರಾದ ಅಂಕನಿ ಬಿಸ್ವಾಸ್ ಅವರನ್ನು ಪಶ್ಚಿಮ ಬಂಗಾಳದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಎಸ್‌ಎಲ್‌ಎಸ್‌ಎ) ಸಮಿತಿಯ ಸದಸ್ಯ ವಕೀಲರಾಗಿ ಸೇರ್ಪಡೆ ಮಾಡಲಾಗಿದೆ. ಪ್ರಾಧಿಕಾರದ ಸದಸ್ಯ ವಕೀಲರಾಗಿ ಸೇರ್ಪಡೆಯಾದ ಮೊದಲ ತೃತೀಯ ಲಿಂಗಿ ಅವರಾಗಿದ್ದಾರೆ.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಪೋಷಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಕಲ್ಕತ್ತಾ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ ಶೇ.1ರಷ್ಟು ಸಮಾನ ಮೀಸಲಾತಿ ನೀಡಿದ ದೇಶದ ಮೊದಲ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ ಇತ್ತೀಚೆಗೆ ಭಾಜನವಾಗಿತ್ತು. ಎನ್‌ಸಿಸಿಗೆ ತೃತೀಯ ಲಿಂಗಿ ಪ್ರವೇಶಿಸಲು ಅರ್ಹ ಎಂದು ಕೇರಳ ಹೈಕೋರ್ಟ್‌ ಕೆಲ ದಿನಗಳ ಹಿಂದೆ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾನಹಾನಿ ಸುದ್ದಿ ಪ್ರಕಟಿಸಿದಂತೆ ಮಾಧ್ಯಮಗಳನ್ನು ನಿರ್ಬಂಧಿಸಲು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಶಿಲ್ಪಾ ಶೆಟ್ಟಿ

ಅಶ್ಲೀಲ ಚಿತ್ರ ಪ್ರಕರಣದಲ್ಲಿ ಬಂಧಿತರಾಗಿರುವ ಪತಿ ರಾಜ್‌ ಕುಂದ್ರಾ ಅವರಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಅಸಮಂಜಸವಾದ, ತಪ್ಪು ಮಾಹಿತಿಯಿಂದ ಕೂಡಿದ, ದುರುದ್ದೇಶಪೂರಿತ, ಮಾನಹಾನಿಕರ ಸುದ್ದಿಗಳನ್ನು ಸಾಮಾಜಿಕ ಜಾಲತಾಣ ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿದಂತೆ ನಿರ್ಬಂಧ ವಿಧಿಸಲು ಕೋರಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

Shilpa Shetty and Bombay High Court

ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ಇಂಡಿಯಾ ಟಿವಿ, ಫ್ರಿ ಪ್ರೆಸ್‌ ಜರ್ನಲ್‌, ಎನ್‌ಡಿಟಿವಿ, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ. ಮುಂಬೈ ನ್ಯಾಯಾಲಯವು ಜುಲೈ 28ರಂದು ರಾಜ್‌ ಕುಂದ್ರಾ ಜಾಮೀನು ಮನವಿ ತಿರಸ್ಕಿರಿಸಿದ ಬೆನ್ನಿಗೇ ಶಿಲ್ಪಾ ಶೆಟ್ಟಿ ಮನವಿ ಸಲ್ಲಿಸಿದ್ದಾರೆ. ತಮ್ಮ ಓದುಗರು ಅಥವಾ ನೋಡಗರ ಸಂಖ್ಯೆ ಹೆಚ್ಚಿಸಿಕೊಳ್ಳಲು ಪ್ರತಿವಾದಿಗಳು ಪ್ರಚೋದನಕಾರಿ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಅರ್ಜಿದಾರರ ಘನತೆಗೆ ಚ್ಯುತಿ ಉಂಟು ಮಾಡುತ್ತಿದ್ದಾರೆ ಎಂದು ವಾದಿಸಿದ್ದಾರೆ. ಹೀಗಾಗಿ, ಮಾನಹಾನಿ ಸುದ್ದಿ ಪ್ರಕಟಿಸದಂತೆ ಪ್ರತಿಬಂಧಕಾದೇಶ ಹೊರಡಿಸಲು ಶಿಲ್ಪಾ ಶೆಟ್ಟಿ ಕೋರಿದ್ದಾರೆ.

ಕೌನ್ಸೆಲಿಂಗ್‌ಗೆ ರೂ. 50 ಸಾವಿರ ಠೇವಣಿ: ಸಿಎಲ್‌ಎಟಿ ಅಭ್ಯರ್ಥಿ ಮನವಿ ಆಧರಿಸಿ ನೋಟಿಸ್‌ ಜಾರಿ ಮಾಡಿದ ಕೇರಳ ಹೈಕೋರ್ಟ್‌

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (ಎನ್‌ಎಲ್‌ಯು) ಸೀಟು ಹಂಚಿಕೆ ಮಾಡಲು ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ₹50,000 ಠೇವಣಿ ಇಡಬೇಕು ಎಂಬುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

Kerala High Court, CLAT 2021

ಎನ್‌ಎಲ್‌ಯುಗಳಿಗೆ ಪ್ರವೇಶಾತಿ ಕೋರಿ ಸಿಎಲ್‌ಎಟಿ -2021 ಅಭ್ಯರ್ಥಿಗಳು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್‌ ಅವರು ಪ್ರತಿವಾದಿಗಳಾದ ಭಾರತೀಯ ವಕೀಲರ ಪರಿಷತ್‌, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ ನೋಟಿಸ್‌ ಜಾರಿ ಮಾಡಿದ್ದಾರೆ. ಪ್ರವೇಶಾತಿಗೂ ಮುನ್ನ ₹50,000 ಠೇವಣಿ ಇಡಬೇಕು ಎಂಬ ನಿರ್ಧಾರವನ್ನು ಪ್ರಶ್ನಿಸಿ ಅರ್ಜಿದಾರರು ವಕೀಲ ತಾರೀಖ್‌ ಅನ್ವರ್‌ ಮೂಲಕ ಮನವಿ ಸಲ್ಲಿಸಿದ್ದಾರೆ.