ಮನೆಮನೆಗೆ ತೆರಳಿ ಕೋವಿಡ್ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡುವ ಕಾರ್ಯಕ್ರಮಕ್ಕೆ ಕೇಂದ್ರದ ಅನುಮತಿ ಕೋರುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಬುಧವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ. ಹಾಸಿಗೆ ಹಿಡಿದಿರುವವರು, ಅಂಗವೈಕಲ್ಯತೆಯಿಂದ ಚಲಿಸಲಾರದವರು ಹಾಗೂ ವೃದ್ಧರಿಗೆ ಮನೆಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಇದಾಗಿದೆ.
ಈ ಹಿಂದಿನ ವಿಚಾರಣೆ ವೇಳೆ, ಮಹಾರಾಷ್ಟ್ರ ಆರೋಗ್ಯ ಇಲಾಖೆಯು ಕೇಂದ್ರದ ಒಪ್ಪಿಗೆ ಪಡೆದ ನಂತರ ಮನೆಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡುವುದಾಗಿ ತಿಳಿಸಿತ್ತು. ಆದರೆ, ರಾಜ್ಯ ಸರ್ಕಾರದ ಈ ಧೋರಣೆಯ ಬಗ್ಗೆ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾ. ಜಿ ಎಸ್ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಅಸಂತೋಷ ವ್ಯಕ್ತಪಡಿಸಿತ್ತು. ಆರೋಗ್ಯ ವಿಷಯವು ರಾಜ್ಯ ಪಟ್ಟಿಯಲ್ಲಿದ್ದು ಇದಕ್ಕೆ ಕೇಂದ್ರದ ಅನುಮತಿ ಅಗತ್ಯವಿಲ್ಲ. ಬಿಹಾರ ಮತ್ತು ಕೇರಳ ರಾಜ್ಯಗಳೇನು ಕೇಂದ್ರದ ಅನುಮತಿ ಪಡೆದಿವೆಯೇ? ಎಂದು ಪ್ರಶ್ನಿಸಿತ್ತು. “ನೀವು ಪ್ರತಿಯೊಂದು ಕೆಲಸಕ್ಕೂ ಕೇಂದ್ರದ ಒಪ್ಪಿಗೆ ಪಡೆಯುತ್ತೀರಾ?” ಎಂದು ಕುಟುಕಿತ್ತು.
ಬಿಸಿಐ ನಿಯಮಾವಳಿಗಳಿಗೆ ಇತ್ತೀಚೆಗೆ ತರಲಾಗಿದ್ದ ನೂತನ ತಿದ್ದುಪಡಿಗಳ ಕುರಿತು ತಾನು ನೇಮಿಸಿರುವ ಪರಿಶೀಲನಾ ಸಮಿತಿಯು ವರದಿ ಸಲ್ಲಿಸುವವರಗೆ ಅವುಗಳನ್ನು ತಡೆಹಿಡಿಯಲು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮುಂದಾಗಿದೆ. ವಿವಿಧ ರಾಜ್ಯ ವಕೀಲರ ಪರಿಷತ್ತುಗಳು ಹಾಗೂ ಸದಸ್ಯರು ನೂತನ ನಿಯಮಾವಳಿಗಳ ಕುರಿತು ತಮ್ಮ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಬಿಸಿಐ ಕೈಗೊಂಡಿದೆ.
ನಿಯಮಾವಳಿಗಳನ್ನು ಪರಿಶೀಲಿಸಲು ಪರಿಶೀಲನಾ ಸಮಿತಿಯೊಂದನ್ನು ರಚಿಸಲು ಬಿಸಿಐ ನಿರ್ಧರಿಸಿದೆ. ಸಮಿತಿಯು ಮೂರು ವಾರಗಳಲ್ಲಿ ತನ್ನ ವರದಿಯನ್ನು ಸಲ್ಲಿಸಬೇಕಿದೆ. ಸಮಿತಿಯು ತನ್ನ ವರದಿಯನ್ನು ಸಲ್ಲಿಸಿ, ಅದನ್ನು ಬಿಸಿಐ ಪರಿಗಣಿಸಿ ಅದರ ಸಂಬಂಧ ನಿರ್ಧಾರ ಕೈಗೊಳ್ಳುವವರೆಗೆ ತಿದ್ದುಪಡಿ ಮಾಡಲಾಗಿರುವ ನಿಯಮಾವಳಿಗಳನ್ನು ತಡೆಹಿಡಿಯುವುದಾಗಿ ಬಿಸಿಐ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದೇ ವೇಳೆ ವಕೀಲ ವೃತ್ತಿಗೆ ಕಳಂಕ ತರುವ ಪ್ರಯತ್ನಗಳನ್ನು ನಡೆಸುತ್ತಿರುವ ವ್ಯಕ್ತಿಗಳ ಒತ್ತಡಕ್ಕೆ ತಾನು ಮಣಿಯುವುದಿಲ್ಲ ಎಂದೂ ಅದು ತಿಳಿಸಿದೆ.
ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ವಿರುದ್ಧ ಪಕ್ಷಪಾತದ ಗಂಭೀರ ಆರೋಪ ಹೊರಿಸಿ ಪತ್ರ ಬರೆದಿದ್ದ ಬಂಗಾಳ ವಕೀಲರ ಪರಿಷತ್ತಿನ ಅಧ್ಯಕ್ಷ ಅಶೋಕ್ ಕುಮಾರ್ ದೇಬ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಅನುಮತಿ ಕೋರಿ ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರಿಗೆ ಕೊಲ್ಕತ್ತಾ ನಿವಾಸಿಯೊಬ್ಬರು ಪತ್ರ ಬರೆದಿದ್ದಾರೆ.
ಖಾಸಗಿ ವ್ಯಕ್ತಿಯೊಬ್ಬರು ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಹೂಡಲು ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್ 15ರ ಅನ್ವಯ ಹೈಕೋರ್ಟ್ ವಿಚಾರಣೆಗೂ ಮುನ್ನ ಅಡ್ವೊಕೇಟ್ ಜನರಲ್ ಅವರ ಒಪ್ಪಿಗೆ ಪಡೆಯುವುದು ಅಗತ್ಯವಾಗಿರುತ್ತದೆ. ಹೌರಾದ ನಿವಾಸಿಯಾದ ವಿಜಯ್ ಕುಮಾರ್ ಸಿಂಘಾಲ್ ಎನ್ನುವವರು ದೇಬ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಅನುಮತಿ ಕೋರಿದ್ದಾರೆ.