ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 14-09-2021

Bar & Bench

ಯುಎಪಿಎ ಜಾಮೀನು ನಿಬಂಧನೆಗಳನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ ಆನಂದ್‌ ತೇಲ್ತುಂಬ್ಡೆ

ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ (ಯುಎಪಿಎ) ಜಾಮೀನು ನಿಬಂಧನೆಗಳು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್ಐಎ) ʼ ಮುಂಚೂಣಿ ಸಂಘಟನೆಗಳುʼ ಪದದ ದುರ್ಬಳಕೆಯನ್ನು ಭೀಮಾ ಕೋರೆಗಾಂವ್ ಆರೋಪಿ, ಚಿಂತಕ ಆನಂದ್ ತೇಲ್ತುಂಬ್ಡೆ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ಎನ್ಐಎಗೆ ನೋಟಿಸ್ ನೀಡಿದ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಾಮದಾರ್‌ ಅವರಿದ್ದ ಪೀಠ, ಮೂರು ವಾರಗಳಲ್ಲಿ ಉತ್ತರ ನೀಡುವಂತೆ ನಿರ್ದೇಶಿಸಿದೆ.

Dr Anand Teltumbde

ತೇಲ್ತುಂಬ್ಡೆ ತಮ್ಮ ಅರ್ಜಿಯಲ್ಲಿ ಮೂರು ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ತಾನು ನಿಷೇಧಿತ ಸಿಪಿಐಎಂ ಮಾವೋವಾದಿ ಸಂಘಟನೆಯ ಸದಸ್ಯ ಎಂದು ತೀರ್ಮನಿಸಿ ಎನ್‌ಐಎ ಕಾಯಿದೆಯಡಿ ವಿಶೇಷ ನ್ಯಾಯಾಲಯ ಜಾಮೀನು ತಿರಸ್ಕರಿಸಿದ್ದು ಮುಂಚೂಣಿ ಸಂಘಟನೆ ಎಂದರೇನು ಎಂಬ ಬಗ್ಗೆ ಯುಎಪಿಎ ಕಾಯಿದೆ ಅಥವಾ ಇನ್ನಾವುದೇ ನಿಯಮಾವಳಿಗಳಲ್ಲಿ ಉಲ್ಲೇಖವಿಲ್ಲ ಎಂದಿದ್ದಾರೆ. ಅಲ್ಲದೆ ಯುಎಪಿಎ ಕಾಯಿದೆಯ ಸೆಕ್ಷನ್ 43 ಡಿ ಆರೋಪಿಯು ಜಾಮೀನು ಪಡೆಯಲು ದುಸ್ಸಾಧ್ಯವಾದ ರೀತಿಯಲ್ಲಿ ಅಡ್ಡಿ ಉಂಟುಮಾಡುತ್ತದೆ. ವಿಚಾರಣೆಯ ಅಂತ್ಯದವರೆಗೂ ಕೆಲ ಬಾರಿ ಆರೋಪಿಗಳಿಗೆ ಜಾಮೀನು ದೊರೆಯುತ್ತಿಲ್ಲ ಎಂದು ವಾದಿಸಿದ್ದಾರೆ. ಮತ್ತೊಂದೆಡೆ ವಿಶೇಷ ನ್ಯಾಯಾಲಯ ತಮ್ಮ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ರೀತಿಯನ್ನು ಅವರು ಪ್ರಶ್ನಿಸಿದ್ದಾರೆ.

ಅಜೀತ್ ಭಾರ್ತಿ ವಿರುದ್ಧದ ನ್ಯಾಯಾಂಗ ನಿಂದನೆ ಮನವಿಗೆ ಅನುಮತಿಸಿದ ಅಟಾರ್ನಿ ಜನರಲ್‌

ಸುಪ್ರೀಂ ಕೋರ್ಟ್‌ ವಿರುದ್ಧ ಕೀಳು ಅಭಿರುಚಿಯ, ಆಕ್ಷೇಪಾರ್ಹ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ ಕಾರಣಕ್ಕೆ ಯೂಟ್ಯೂಬಿಗ ಅಜೀತ್‌ ಭಾರ್ತಿ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಹೂಡಲು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಸಮ್ಮತಿ ನೀಡಿದ್ದಾರೆ. ವಕೀಲೆ ಕೃತಿಕಾ ಸಿಂಗ್‌ ಎನ್ನುವವರು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿ ಎಜಿಗೆ ಬರೆದಿದ್ದ ಪತ್ರಕ್ಕೆ ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್‌ 15ರ ಅಡಿ ಎಜಿ ತಮ್ಮ ಅನುಮತಿ ನೀಡಿದ್ದಾರೆ.

KK Venugopal, Ajeet Bharti

ಸಮ್ಮತಿ ನೀಡುವ ವೇಳೆ ಅಟಾರ್ನಿಯವರು, “1.7 ಲಕ್ಷ ಮಂದಿ ನೋಡಿರುವ ವಿಡಿಯೋವು ಸುಪ್ರೀಂ ಕೋರ್ಟ್‌ ಹಾಗೂ ನ್ಯಾಯಾಂಗದ ವಿರುದ್ಧ ಕೀಳು ನಿಂದನೆಯ, ಬಿಡುಬೀಸಾದ, ಅತ್ಯಂತ ಅವಮಾನಕರ ವಿಷಯವನ್ನು ಹೊಂದಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ” ಎಂದಿದ್ದಾರೆ. ಇಂತಹ ಪ್ರಶ್ನಾರ್ಹ ಹೇಳಿಕೆಗಳು ಸಾಮಾನ್ಯ ಜನರ ಕಣ್ಣಿನಲ್ಲಿ ನ್ಯಾಯಾಂಗದ ಘನತೆಯನ್ನು ನಿಕೃಷ್ಟಗೊಳಿಸುವ ಹಾಗೂ ನ್ಯಾಯದಾನಕ್ಕೆ ಅಡ್ಡಿಪಡಿಸುವಂತಹವಾಗಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದ್ದಾರೆ.

ಡಾ. ಕಫೀಲ್‌ ಖಾನ್ ವಿರುದ್ಧದ ಅಮಾನತು ಆದೇಶಕ್ಕೆ ತಡೆ ನೀಡಿದ ಅಲಾಹಾಬಾದ್‌ ಹೈಕೋರ್ಟ್‌

ಉತ್ತರ ಪ್ರದೇಶದ ಬಹರಾಯಿಚ್‌ನಲ್ಲಿ ರೋಗಿಗಳಿಗೆ ಬಲವಂತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಆರೋಪದಡಿ ಡಾ. ಕಫೀಲ್‌ ಖಾನ್‌ ಅವರನ್ನು ಅಮಾನತ್ತುಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ತಡೆ ಹಿಡಿದಿದೆ. ಆದೇಶಕ್ಕೆ ತಡೆ ನೀಡಿದ ಏಕಸದಸ್ಯ ಪೀಠದ ನ್ಯಾ. ಸರಳ್‌ ಶ್ರೀವಾಸ್ತವ ಅವರು ಡಾ. ಖಾನ್‌ ಅವರ ವಿರುದ್ಧದ ವಿಚಾರಣೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ.

Dr. Kafeel khan with Allahabad HC

ಉತ್ತರ ಪ್ರದೇಶ ಪೊಲೀಸರು 2018ರಲ್ಲಿ ಖಾನ್‌ ಅವರನ್ನು ಬಹರಾಯಿಚ್‌ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕ ಉಪಟಳಕ್ಕೆ ಕಾರಣವಾದ ಆರೋಪದಡಿ ಬಂಧಿಸಿದ್ದರು. ಇದೇ ವೇಳೆ ಅವರ ಸಹಾಯಕಾರದ ಸೂರಜ್‌ ಪಾಂಡೆ ಮತ್ತು ಮಹಿಪಾಲ್‌ ಸಿಂಗ್ ಅವರನ್ನೂ ಸಹ ವಶಕ್ಕೆ ಪಡೆಯಲಾಗಿತ್ತು. ನಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿತ್ತು. ತಮ್ಮ ವಿರುದ್ಧ ಇಲಾಖಾ ವಿಚಾರಣೆಯನ್ನು ಆರಂಭಿಸಿ ಎರಡು ವರ್ಷಗಳೇ ಕಳೆದರೂ ಅದನ್ನು ಇನ್ನೂ ಪೂರ್ಣಗೊಳಿಸಲಾಗಿಲ್ಲ ಎಂದು ಆಕ್ಷೇಪಿಸಿ ಖಾನ್‌ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿರುವ ತೀರ್ಪಿನ ಅನ್ವಯ ಸುದೀರ್ಘ ವಿಳಂಬಿತ ಅವಧಿಯವರೆಗೆ ಅಮಾನತು ಆದೇಶ ಉಳಿಯುವುದಿಲ್ಲ ಎಂದು ವಾದಿಸಲಾಗಿತ್ತು.