ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 24-10-2021

>> ಆರ್ಯನ್‌ ಖಾನ್‌ ಪ್ರಕರಣದಲ್ಲಿ ಮಹತ್ವದ ಅಫಿಡವಿಟ್‌ ಸಲ್ಲಿಸಿದ ಸೈಲ್‌ >> ಸುಪ್ರೀಂ ತೀರ್ಪು ಜಾರಿಯಾದರೆ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದ ಹರ್ಯಾಣ ಸರ್ಕಾರ >> ಮಾನನಷ್ಟ ಪ್ರಕರಣದ ವರ್ಗಾವಣೆ ಕೋರಿದ್ದ ಕಂಗನಾ ಅರ್ಜಿ ತಿರಸ್ಕೃತ

Bar & Bench

ಆರ್ಯನ್‌ ಖಾನ್‌ ಮಾದಕವಸ್ತು ಪ್ರಕರಣ: ಖಾಲಿ ಪೇಪರ್‌ಗಳಿಗೆ ಎನ್‌ಸಿಬಿ ಸಹಿ ಹಾಕುವಂತೆ ಹೇಳಿತು ಎಂದ ಸಾಕ್ಷಿ

ಬಾಲಿವುಡ್‌ ನಟ ಶಾರೂಕ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಲಿ ಪತ್ರಗಳಿಗೆ ಸಹಿ ಹಾಕುವಂತೆ ಎನ್‌ಸಿಬಿ ಸೂಚಿಸಿತ್ತು ಎಂದು ಮಹತ್ವದ ಬೆಳವಣಿಗೆಯೊಂದರಲ್ಲಿ ತನಿಖಾಧಿಕಾರಿ ಕೆ ಪಿ ಗೋಸಾವಿ ಅವರ ಖಾಸಗಿ ಅಂಗರಕ್ಷಕ ಎನ್ನಲಾದ ಪ್ರಭಾಕರ್‌ ಸೈಲ್‌ ತಮ್ಮ ಅಫಿಡವಿಟ್‌ನಲ್ಲಿ ಆರೋಪಿಸಿದ್ದಾರೆ.

KP Gosavi and Aryan Khan

ಅಲ್ಲದೆ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಹಾಗೂ ಗೋಸಾವಿ ಅವರು ರೂ 18 ಕೋಟಿ ವ್ಯವಹಾರದಲ್ಲಿ ಶಾಮೀಲಾಗಿದ್ದಾರೆ. ಕೆ ಪಿ ಗೋಸಾವಿ ಹಾಗೂ ಸ್ಯಾಂ ಡಿಸೋಜಾ ನಡುವಿನ ರೂ 18 ಕೋಟಿ ವ್ಯವಹಾರದ ಬಗೆಗೆ ಕೇಳಿದ್ದೇನೆ. ಅದರಲ್ಲಿ ರೂ 8 ಕೋಟಿ ಸಮೀರ್‌ ವಾಂಖೆಡೆಗೆ ಪಾವತಿಸಬೇಕಿತ್ತು. ಗೋಸಾವಿ ಅವರಿಂದ ನಗದು ಪಡೆದು ಸ್ಯಾಂ ಅವರಿಗೆ ನೀಡಿರುವುದಾಗಿ ಸೈಲ್‌ ತಿಳಿಸಿದ್ದಾರೆ. ತಮ್ಮ ಜೀವ ಹಾಗೂ ಸ್ವಾತಂತ್ರ್ಯದ ಬಗ್ಗೆ ಭಯಭೀತನಾಗಿ ಅಫಿಡವಿಟ್‌ ಸಲ್ಲಿಸಿರುವುದಾಗಿ ಅವರು ಹೇಳಿದ್ದು ಗೋಸಾವಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪು ಜಾರಿಗೆ ತಂದರೆ ಬಹುಪಾಲು ಕಟ್ಟಡಗಳನ್ನು ಕೆಡವಬೇಕಾದೀತು: ಹರ್ಯಾಣ ಸರ್ಕಾರ

ಅರಣ್ಯಭೂಮಿ ಕುರಿತಂತೆ ಸುಪ್ರೀಂಕೋರ್ಟ್‌ 2018ರಲ್ಲಿ ನೀಡಿದ ತೀರ್ಪನ್ನು ಜಾರಿಗೊಳಿಸಿದರೆ ಭಾರಿ ಪ್ರಾಯೋಗಿಕ ಸಮಸ್ಯೆ ಎದುರಾಗುತ್ತದೆ. ಆಗ ರಾಜ್ಯದ ಶೇ 40ರಷ್ಟು ಭೌಗೋಳಿಕ ಪ್ರದೇಶದ ಕಟ್ಟಡಗಳನ್ನು ನೆಲಸಮಗೊಳಿಸಬೇಕಾಗುತ್ತದೆ ಇದು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಹರ್ಯಾಣ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Gurgaon

ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಪ್ರದೇಶವನ್ನು ನೋಟಿಫೈ ಮಾಡಿದ್ದು ಹೇಗೆ ಎಂಬುದನ್ನು ಸ್ಪಸ್ಟಪಡಿಸುವಂತೆ ಅಕ್ಟೋಬರ್ 5, 2021ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ. ನೆಲಸಮ ಮಾಡಬೇಕಾದ ಕಟ್ಟಡಗಳು ಭಾರಿ ಪ್ರಮಾಣದಲ್ಲಿದ್ದು ಇದು ರಾಜ್ಯ ಸರ್ಕಾರದ ಸಾಮರ್ಥ್ಯ ಮೀರಿದ್ದಾಗಿದೆ. ಇದು ಗಂಭೀರ ಮತ್ತು ಎಣೆಯಿಲ್ಲದ ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಸಹ ಸೃಷ್ಟಿಸುತ್ತದೆ ಎಂದು ಮನೋಹರ್‌ ಲಾಲ್‌ ಖಟ್ಟರ್‌ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

[ಕಂಗನಾ ರನೌತ್‌ ಅರ್ಜಿ] ಸುಳ್ಳು ಆರೋಪಕ್ಕಾಗಿ ಪ್ರಕರಣ  ವರ್ಗಾಯಿಸಿದರೆ ನ್ಯಾಯಾಧೀಶರ ನೈತಿಕತೆ ಮೇಲೆ ಪರಿಣಾಮ ಬೀರುತ್ತದೆ ಎಂದ ಮುಂಬೈ ನ್ಯಾಯಾಲಯ

ಗೀತರಚನೆಕಾರ ಜಾವೇದ್ ಅಖ್ತರ್ ಅವರ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಸಲ್ಲಿಸಿದ ವರ್ಗಾವಣೆ ಅರ್ಜಿಯನ್ನು ತಿರಸ್ಕರಿಸಿದ ಮುಂಬೈ ನ್ಯಾಯಾಲಯ, ಸುಳ್ಳು ಆರೋಪದ ಆಧಾರದ ಮೇಲೆ ಪ್ರಕರಣ ವರ್ಗಾಯಿಸಿದರೆ, ಅದು ಸಂಬಂಧಪಟ್ಟ ನ್ಯಾಯಾಧೀಶರ ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

Kangana Ranaut, Javed Akhtar

ರಿಪಬ್ಲಿಕ್ ಟಿವಿಯಲ್ಲಿ ತಮ್ಮ ವಿರುದ್ಧ ಕಂಗನಾ ನೀಡಿದ ಹೇಳಿಕೆಗಳ ವಿರುದ್ಧ ಅಖ್ತರ್ ಅವರು ಅಂಧೇರಿ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಿದ್ದ ಕ್ರಿಮಿನಲ್‌ ಮಾನನಷ್ಟ ಪ್ರಕರಣವನ್ನು ವರ್ಗಾಯಿಸಲು ಆಕೆ ಕೋರಿದ್ದರು. ಕಾನೂನು ಪ್ರಕ್ರಿಯೆ ಅನುಸರಿಸಿ ನ್ಯಾಯಾಧೀಶ ಪ್ರಕರಣ ಮುಂದುವರೆಸಿದ ಮಾತ್ರಕ್ಕೆ ಅವರು ಪಕ್ಷಪಾತ ಧೋರಣೆ ಹೊಂದಿದ್ದಾರೆ ಎಂದರ್ಥವಲ್ಲ ಎಂದು ನ್ಯಾಯಾಲಯ ಹೇಳಿದೆ.