ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 20-08-2021

Bar & Bench

ಕ್ರಿಮಿನಲ್‌ ಮಾನಹಾನಿ, ಟ್ರೇಡ್‌ಮಾರ್ಕ್‌ ಉಲ್ಲಂಘನೆ ಪ್ರಕರಣ ದಾಖಲಿಸಿದ ಬ್ಯಾಂಕ್: ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್‌

ಕರದ್‌ ಅರ್ಬನ್‌ ಕೋ-ಆಪರೇಟಿವ್‌ ಬ್ಯಾಂಕ್‌ (ಕೆಯುಸಿಬಿ) ತನ್ನ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿ ಕ್ರಿಮಿನಲ್‌ ಮಾನಹಾನಿ ಮತ್ತು ಟ್ರೇಡ್‌ ಮಾರ್ಕ್‌ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ ಉಲ್ಲಂಘನೆ ದೂರು ದಾಖಲಿಸಿರುವುದನ್ನು ವಜಾ ಮಾಡುವಂತೆ ಕೋರಿ ಸೋನಿ ಎಲ್‌ಐವಿ ಅಪ್ಲಿಕೇಶನ್‌ ಮಾತೃಸಂಸ್ಥೆ ಪಿಕ್ಚರ್ಸ್‌ ನೆಟ್‌ವರ್ಕ್‌ ಇಂಡಿಯಾ ಪ್ರೈ. ಲಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದೆ.

SonyLiv, Scam 1992

ಅಪರಿಚಿತ ವ್ಯಕ್ತಿಗಳ ವಿರುದ್ಧ ಕೆಯುಸಿಬಿ ಸಲ್ಲಿಸಿದ ದೂರಿನಲ್ಲಿ, ಸೋನಿಲೈವ್ ಸರಣಿ 'ಸ್ಕ್ಯಾಮ್ 1992, ಹರ್ಷದ್ ಮೆಹ್ತಾ ಸ್ಟೋರಿ'ಯ ಒಂದು ಸಂಚಿಕೆಯಲ್ಲಿ, ಕೆಯುಸಿಬಿಯ ಟ್ರೇಡ್‌ಮಾರ್ಕ್ ಹೋಲುವ ಲೋಗೋವನ್ನು ಪ್ರದರ್ಶಿಸಿದೆ ಎಂದು ಆರೋಪಿಸಲಾಗಿದೆ. ಇದು ಬ್ಯಾಂಕಿನ ಹಣಕಾಸು, ವಾಣಿಜ್ಯ ಮತ್ತು ಸಾಮಾಜಿಕ ಖ್ಯಾತಿಗೆ ಗಂಭೀರ ಹಾನಿಯುಂಟು ಮಾಡಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಇದನ್ನು ಆಧರಿಸಿ ಪುಣೆ ಪೊಲೀಸರು ಐಪಿಸಿ, ಟ್ರೇಡ್‌ ಮಾರ್ಕ್‌ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ದೂರು ದಾಖಲಿಸಿದ್ದಾರೆ.

ಹಿರಿಯ ವಕೀಲೆ ಸುರೀಂದರ್‌ ಕೌರ್‌ ಮೇಲೆ ದಾಳಿ: ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಲು ಕೋರಿಕೆ

ಹಿರಿಯ ವಕೀಲೆ ಸುರೀಂದರ್ ಕೌರ್ ಮೇಲೆ ಅವರ ಮನೆಯ ಹೊರಗೆ ಶಸ್ತ್ರಸಜ್ಜಿತ ವ್ಯಕ್ತಿ ಹಲ್ಲೆ ನಡೆಸಿದ್ದನ್ನು ವಿರೋಧಿಸಿ ಇಂದು ಜಮ್ಮು ಮತ್ತು ಕೇಂದ್ರ ಆಡಳಿತ ನ್ಯಾಯಮಂಡಳಿಯ ಎಲ್ಲಾ ನ್ಯಾಯಾಲಯಗಳಲ್ಲಿ ಕೆಲಸ ಸ್ಥಗಿತಗೊಳಿಸಲು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ವಕೀಲರ ಪರಿಷತ್‌ ನಿರ್ಧರಿಸಿತ್ತು. ಬೈಕಿನಲ್ಲಿದ್ದ ಶಸ್ತ್ರಸಜ್ಜಿತ ವ್ಯಕ್ತಿಯು ಗುರುವಾರ ರಾತ್ರಿ 9 ಗಂಟೆ ಸಂದರ್ಭದಲ್ಲಿ ಕೌರ್‌ ಮೇಲೆ ದಾಳಿ ಮಾಡಿದ್ದಾನೆ ಎಂದು ವಕೀಲರ ಪರಿಷತ್‌ ಬಿಡುಗಡೆ ಮಾಡಿರುವ ನೋಟಿಸ್‌ನಲ್ಲಿ ವಿವರಿಸಲಾಗಿದೆ.

Jammu & Kashmir High Court

“ಹಿರಿಯ ವಕೀಲೆ ಕೌರ್ ಮೇಲೆ ದುಷ್ಕರ್ಮಿ ದಾಳಿ ನಡೆಸಿದ್ದು, ಸದ್ಯ ಕೌರ್‌ ಅವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ವಕೀಲರ ಪರಿಷತ್‌ ಸದಸ್ಯರಿಗೆ ನೋಟಿಸ್‌ನಲ್ಲಿ ತಿಳಿಸಿದೆ. ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿಯವರನ್ನು ಕೋರಿರುವ ಪರಿಷತ್‌, ಆರೋಪಿಗಳನ್ನು ತಕ್ಷಣ ಬಂಧಿಸಿಲು ನಿರ್ದೇಶಿಸುವಂತೆ ಮನವಿ ಮಾಡಿದ್ದಾರೆ.

[ಭೀಮಾ ಕೋರೆಗಾಂವ್ ಪ್ರಕರಣ] ವಶಪಡಿಸಿಕೊಳ್ಳಲಾದ ಮಾಹಿತಿಯ ಇಲೆಕ್ಟ್ರಾನಿಕ್ಸ್ ದತ್ತಾಂಶ ಪ್ರತಿಗಳಿಗೆ ನವಲಾಖಾ ಮತ್ತು ಸುಧಾ ಭಾರದ್ವಾಜ್ ಕೋರಿಕೆ

ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ಆರೋಪಿಗಳಾಗಿರುವ ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್‌ ಹಾಗೂ ಗೌತಮ್‌ ನವಲಾಖಾ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ತಮ್ಮಿಂದ ವಶಪಡಿಸಿಕೊಂಡಿರುವ ಉಪಕರಣಗಳಲ್ಲಿನ ಇಲೆಕ್ಟ್ರಾನಿಕ್‌ ದತ್ತಾಂಶಗಳ ನಕಲು ಪ್ರತಿಯನ್ನು (ಕ್ಲೋನ್‌) ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ತಮ್ಮ ಮೇಲೆ ಆರೋಪಗಳನ್ನು ಹೊರಿಸುವುದಕ್ಕೂ ಮೊದಲು ಹಾಗೂ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣೆ ಆರಂಭಕ್ಕೂ ಮುನ್ನ ನಕಲು ಪ್ರತಿಗಳು ಪಡೆಯುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

Sudha Bharadwaj, Gautam Navlakha and Bombay HC

ಪ್ರಕರಣದ ಸಂಬಂಧ ಎನ್‌ಐಎ ಇದಾಗಲೇ ಆರೋಪಗಳ ಕುರಿತಾದ ಕರಡನ್ನು ಸಲ್ಲಿಸಿದೆ. ವಿಶೇಷ ನ್ಯಾಯಾಲಯವು ಆಗಸ್ಟ್‌ 23ರಂದು ಆರೋಪಗಳನ್ನು ಹೊರಿಸುವ ಸಂಬಂಧ ವಿಚಾರಣೆ ಇರಿಸಿಕೊಂಡಿದೆ. ಈ ಹಿಂದೆ ಎನ್‌ಐಎ ವಿಶೇಷ ನ್ಯಾಯಾಲಯವು ಆರೋಪಿಗಳು ದತ್ತಾಂಶದ ನಕಲು ಪ್ರತಿಗೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತ್ತು. ಆರೋಪಿಗಳ ಪರ ಬಾಂಬೆ ಹೈಕೋರ್ಟ್‌ನ ನ್ಯಾ. ಎಸ್‌ ಎಸ್‌ ಶಿಂಧೆ ಮತ್ತು ನ್ಯಾ. ಎನ್‌ ಜೆ ಜಾಮದಾರ್ ಅವರ ಪೀಠದ ಮುಂದೆ ಹಾಜರಾದ ವಕೀಲ ಯುಗ್‌ ಮೋಹಿತ್‌ ಚೌಧರಿ ಅವರು ನಕಲು ದತ್ತಾಂಶ ಪ್ರತಿಗಳನ್ನು ನೀಡುವವರೆಗೆ ಆರೋಪ ಹೊರಿಸದಂತೆ ತಡೆಯಾಜ್ಞೆ ನೀಡಲು ಕೋರಿದ್ದಾರೆ.