ಡಿಜಿಟಲ್ ಮಾಹಿತಿಯನ್ನು ಹತೋಟಿಯಲ್ಲಿಡಲು ಯತ್ನಿಸುವ 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಾವಳಿ ಪ್ರಶ್ನಿಸಿ ಸ್ವತಂತ್ರ ಕನ್ನಡ ಸುದ್ದಿ ತಾಣ ʼಪ್ರತಿಧ್ವನಿʼಯನ್ನು ನಡೆಸುತ್ತಿರುವ ಲಾಭ ರಹಿತ ಸಂಸ್ಥೆ ʼಟ್ರುತ್ ಪ್ರೊ ಫೌಂಡೇಶನ್ ಇಂಡಿಯಾʼ (ಟಿಪಿಎಫ್‌ಐ) ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಆದರೆ ಡಿಜಿಟಲ್ ಸುದ್ದಿ ಪೋರ್ಟಲ್‌ಗಳ ಮೇಲೆ ಪರಿಣಾಮ ಬೀರುವ ನಿಯುಮಗಳನ್ನು ಮಾತ್ರ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದ್ದು. ಆನ್‌ಲೈನ್ ಸಂಕಲಿತ ಮಾಹಿತಿ ಪ್ರಕಟಿಸುವವರಿಗೆ ಇದು ಸಂಬಂಧಿಸಿಲ್ಲ ಎಂದು ಅರ್ಜಿ ಸ್ಪಷ್ಟಪಡಿಸಿದೆ.
ಹೊಸ ಐಟಿ ನಿಯಮಗಳು ಮೂಲ ಮಾಹಿತಿ ತಂತ್ರಜ್ಞಾನ ಕಾಯಿದೆಯ ವ್ಯಾಪ್ತಿಗೆ ಬಾರದ ಸಂಸ್ಥೆಗಳ ಬಗ್ಗೆ ನಿಯಮಗಳನ್ನು ರೂಪಿಸಲು ಯತ್ನಿಸುತ್ತಿದ್ದು ಕಾಯಿದೆಯ ವ್ಯಾಪ್ತಿ ಮೀರಲಾಗಿದೆ ಎಂದು ದೂರಿನಲ್ಲಿ ಮುಖ್ಯವಾಗಿ ಆಕ್ಷೇಪಿಸಲಾಗಿದೆ. ವಕೀಲ ರಾಕೇಶ್ ಭಟ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ನಿಯಮಾವಳಿಗಳನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್, ಕೇರಳ ಹೈಕೋರ್ಟ್‌ಗಳಲ್ಲಿಯೂ ವಿವಿಧ ಸಂಸ್ಥೆಗಳು ಅರ್ಜಿ ಸಲ್ಲಿಸಿವೆ.
ಸಮರ್ಪಕ ನಿಯಮಗಳ ಆಧಾರವಿಲ್ಲದೆ ಇತರೆ ರಾಜ್ಯಗಳ ಜನರು ಗಡಿ ಪ್ರವೇಶಿಸದಂತೆ ನಿರ್ಬಂಧ ಹೇರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ಕೋವಿಡ್ ಮಾರ್ಗಸೂಚಿಗಳು ಗಡಿ ಮುಚ್ಚಲು ಅನುಮತಿ ನೀಡಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ಪೀಠವು ದೇಶದಲ್ಲಿ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆ ಇದೆ. ನೀವು ಸುಮ್ಮನೆ ಗಡಿಗಳನ್ನು ಮುಚ್ಚಲು ಸಾಧ್ಯ ಇಲ್ಲ ಎಂದಿದೆ.
ಕೇರಳ- ಕರ್ನಾಟಕ ಗಡಿಯುದ್ದಕ್ಕೂ ಎಲ್ಲಾ ಚೆಕ್‌ಪೋಸ್ಟ್‌ಗಳು ಮುಕ್ತವಾಗಿದ್ದು ಕೇರಳದಿಂದ ರಾಜ್ಯ ಪ್ರವೇಶಿಸುವ ವ್ಯಕ್ತಿಗಳಿಗೆ ಆರ್‌ಟಿ- ಪಿಸಿಆರ್ ನೆಗೆಟಿವ್ ವರದಿ ಸಲ್ಲಿಸಲು ಮಾತ್ರ ಸೂಚಿಸಲಾಗುತ್ತಿದೆ ಎಂದು ಹೇಳಿಕೆ ನೀಡುವಂತೆ ರಾಜ್ಯಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಗಡಿ ನಿರ್ಬಂಧ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ವಿಚಾರಣೆಯನ್ನು ನಾಳೆಗೆ (ಏಪ್ರಿಲ್ 1) ಮುಂದೂಡಲಾಗಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಮುಂಬೈ ನಗರ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ ಆದೇಶ ಕಾಯ್ದಿರಿಸಿತು. ಇದೇ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಅವರ ನೇತೃತ್ವದ ಪೀಠ “ಎಫ್‌ಐಆರ್ ಇಲ್ಲದೆ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ನ್ಯಾಯಾಲಯವನ್ನು ಹೇಗೆ ಕೋರುತ್ತೀರಿ? ಸಚಿವರ ವಿರುದ್ಧ ಎಫ್‌ಐಆರ್ ಏಕೆ ದಾಖಲಿಸಲಿಲ್ಲ ಎಂದು ಪರಮ್ ಪರ ವಕೀಲ ವಿಕ್ರಂ ನಂಕಣಿ ಅವರನ್ನು ಖಾರವಾಗಿ ಪ್ರಶ್ನಿಸಿತು.
ಅಲ್ಲದೆ “ಸೇವೆಗೆ ಸಂಬಂಧಿಸಿದ ಪ್ರಕರಣವಾಗಿದ್ದರೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಏಕೆ? ಇದು ವರ್ಗಾವಣೆಗೆ ಸಂಬಂಧಿಸಿದ ಅರ್ಜಿ. ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಲಾಗದು. ಇದೇ ಆಧಾರದಲ್ಲಿ ಅರ್ಜಿ ವಜಾಗೊಳಿಸಬಹುದು. ಸರ್ಕಾರದ ಒಪ್ಪಿಗೆ ಇಲ್ಲದೆ ನ್ಯಾಯಾಲಯ ವಿಚಾರಣೆ ನಡೆಸಬೇಕೆಂದು ಹೇಳುತ್ತಿದ್ದೀರಾ? ಎಫ್‌ಐಆರ್ ಎಲ್ಲಿದೆ? ಎಫ್‌ಐಆರ್ ಇಲ್ಲದೆ ತೀರ್ಪು ನೀಡಿದ್ದರೆ ಹಾಗೂ ಸಿಬಿಐಗೆ ತನಿಖೆಗೆ ವರ್ಗಾಯಿಸಿರುವ ಮಾಹಿತಿ ಇದ್ದರೆ ನಮಗೆ ತಿಳಿಸಿ ಎಂದು ನ್ಯಾಯಾಲಯ ಕಿಡಿಕಾರಿತು.