ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಮಾಡಿದ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಮತ್ತು ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಪ್ರತ್ಯೇಕ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ʼಬಾರ್ ಅಂಡ್ ಬೆಂಚ್ʼಗೆ ದೊರೆತ ಮಾಹಿತಿ ಪ್ರಕಾರ ಹಿರಿಯ ನ್ಯಾಯವಾದಿ ಡಾ. ಅಭಿಷೇಕ್ ಮನು ಸಿಂಘ್ವಿ ಅವರು ಮಹಾರಾಷ್ಟ್ರ ಸರ್ಕಾರದ ಪರ ವಾದ ಮಂಡಿಸಲಿದ್ದಾರೆ.
ಉನ್ನತ ಮಟ್ಟದ ಸಮಿತಿಯಿಂದ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರವು ಈಗಾಗಲೇ ಕ್ರಮಕೈಗೊಂಡಿರುವುದರಿಂದ ಸಿಬಿಐ ತಕ್ಷಣಕ್ಕೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ ಹದಿನೈದು ದಿನಗಳ ಒಳಗೆ ಪ್ರಾಥಮಿಕ ತನಿಖೆ ಪೂರ್ಣಗೊಳಿಸುವಂತೆ ಆದೇಶಿಸಿರುವ ಹೈಕೋರ್ಟ್, ಆ ಬಳಿಕ ಮುಂದಿನ ಕಾರ್ಯಾಚಾರಣೆಯ ಕುರಿತು ಸಿಬಿಐ ನಿರ್ಧರಿಸಬಹುದು ಎಂದಿದೆ.
ಕೊಲೆ ಆರೋಪಿಗಳ ವಿರುದ್ಧ ಜಾರಿ ಮಾಡಲಾಗಿದ್ದ ಮುಂಜಾಗ್ರತಾ ವಶ ಆದೇಶವನ್ನು ಇತ್ತೀಚೆಗೆ ತೆಲಂಗಾಣ ಹೈಕೋರ್ಟ್ ರದ್ದುಗೊಳಿಸಿದೆ. ಇಂತಹ ಕಾನೂನಿನ ಅಡಿ ನೀಡಲಾದ ಅಧಿಕಾರವನ್ನು ಸೂಕ್ಷ್ಮವಾಗಿ ಮತ್ತು ತೀವ್ರ ಎಚ್ಚರಿಕೆಯಿಂದ ಬಳಸಬೇಕು ಎಂದು ನ್ಯಾಯಾಲಯ ಹೇಳಿದೆ. ʼಸಾರ್ವಜನಿಕ ಸುವ್ಯವಸ್ಥೆʼ ಮತ್ತು ʼಕಾನೂನು ಮತ್ತು ಸುವ್ಯವಸ್ಥೆʼ ನಡುವಿನ ವ್ಯತ್ಯಾಸಗಳನ್ನು ಹೇಳಿದ ನ್ಯಾಯಾಲಯ ʼಕಾನೂನು ಮತ್ತು ಸುವ್ಯವಸ್ಥೆʼ ಎಲ್ಲಾ ರೀತಿಯ ಅಸ್ವಸ್ಥತೆಗಳಲ್ಲಿ ಕಂಡುಬರುತ್ತದೆ ಎಂದಿತು.
1986ರ ತೆಲಂಗಾಣ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯಿದೆಯಡಿ ಬಂಧನಕ್ಕೊಳಗಾಗಿದ್ದ ಆರೋಪಿಯ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಯನ್ನು ಎ ರಾಜಶೇಖರ ರೆಡ್ಡಿ ಮತ್ತು ಟಿ ಅಮರನಾಥ ಗೌಡ್ ಅವರಿದ್ದ ಪೀಠ ನಡೆಸಿತು. ಈ ರೀತಿ ಬಂಧಿಸುವುದನ್ನು ಸಾಮಾನ್ಯ ಕಾನೂನಿಗೆ ಪರ್ಯಾಯವಾಗಿ ಬಳಸಲು ಸಾಧ್ಯವಿಲ್ಲ ಎಂದ ನ್ಯಾಯಾಲಯ ಆರೋಪಿ ಇನ್ನಾವುದೇ ಅಪರಾಧದಲ್ಲಿ ನಂಟು ಹೊಂದಿಲ್ಲದೇ ಇದ್ದರೆ ಆತನನ್ನು ಬಿಡುಗಡೆಗೊಳಿಸಬೇಕು ಎಂದು ಆದೇಶಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.
ಪೋಷಕರನ್ನು ತೊರೆದು ನಾಪತ್ತೆಯಾಗಿದ್ದ 18 ವರ್ಷದ ಯುವತಿ ತಾನು ಪ್ರೀತಿಸುತ್ತಿರುವ 20 ವರ್ಷದ ವ್ಯಕ್ತಿಯೊಂದಿಗೆ ಸ್ವ- ಇಚ್ಛೆಯಿಂದ ಬದುಕುತ್ತಿದ್ದರೆ ಆಕೆಯನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ. ಹೀಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಮೂಲಕ ನ್ಯಾಯಾಲಯವನ್ನು ಸಂಪರ್ಕಿಸಿದ್ದ ಯುವತಿಯ ತಂದೆಗೆ ಪರಿಹಾರ ಒದಗಿಸಲು ರವೀಂದ್ರ ವಿ ಘುಗೆ ಮತ್ತು ನ್ಯಾಯಮೂರ್ತಿ ಬಿ ಯು.ದೇಬದ್ವಾರ್ ಅವರಿದ್ದ ಪೀಠ ನಿರಾಕರಿಸಿತು. ಅಲ್ಲದೆ ಜೋಡಿಗೆ ತೊಂದರೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತು.
ಕಾಣೆಯಾದ ಹುಡುಗಿ ಮತ್ತು ಹುಡುಗಿಯೊಂದಿಗೆ ಓಡಿಹೋದ ವ್ಯಕ್ತಿ ಇಬ್ಬರೂ ವಯಸ್ಕರಾಗಿದ್ದು ಮದುವೆಯಾಗುವ ವಯಸ್ಸು ಆಗಿರದಿದ್ದರೂ ಯುವತಿ ನೀಡಿದ ಕೆಲ ಉತ್ತರಗಳನ್ನು ಪರಿಗಣಿಸಿದರೆ ನಮಗೆ ಹುಡುಗಿಯನ್ನು ಬಂಧಿಸುವಂತೆ ಸೂಚಿಸಲು ಯಾವುದೇ ಕಾರಣಗಳು ಇಲ್ಲ ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ತಿಳಿಸಿತು.