ದೀಪಾವಳಿ ರಜೆಯ ನಂತರದ ದಿನಗಳಲ್ಲಿ ಭೌತಿಕ ವಿಚಾರಣೆಯ ಪ್ರಮಾಣವನ್ನು ತೀವ್ರವಾಗಿ ಹೆಚ್ಚಿಸುವ ಇಂಗಿತವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ. ಈ ಬಗ್ಗೆ ಸಿಜೆಐ ಎನ್ ವಿ ರಮಣ ಅವರು ಗುರುವಾರ ಹಿರಿಯ ವಕೀಲರೊಬ್ಬರಿಗೆ ಪ್ರತಿಕ್ರಿಯಿಸುವ ವೇಳೆ ಮಾಹಿತಿ ನೀಡಿದ್ದಾರೆ. “ದೀಪಾವಳಿಯ ನಂತರ ನಾವು ದೊಡ್ಡ ಮಟ್ಟದಲ್ಲಿ ಭೌತಿಕ ವಿಚಾರಣೆ ನಡೆಸುವ ಸಾಧ್ಯತೆ ಇದೆ,” ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಸರ್ವೋಚ್ಚ ನ್ಯಾಯಾಲಯವು ಬುಧವಾರ ಹಾಗೂ ಗುರುವಾರಗಳಂದು ಭೌತಿಕ ವಿಚಾರಣೆಯನ್ನು ನಡೆಸುತ್ತಿದೆ. ಈ ನಡುವೆ ಕೆಲವು ಹಿರಿಯ ವಕೀಲರು ವರ್ಚುವಲ್ ವಿಚಾರಣೆಯನ್ನು ಮುಂದುವರೆಸುವಂತೆ ಬೇಡಿಕೆ ಇರಿಸಿದ್ದಾರೆ. ಮತ್ತೊಂದೆಡೆ ಭಾರತೀಯ ವಕೀಲರ ಪರಿಷತ್ತು ಹಾಗೂ ವಕೀಲರ ಒಕ್ಕೂಟಗಳು ಭೌತಿಕ ವಿಚಾರಣೆಗೆ ಒತ್ತಡ ಹೆಚ್ಚಿಸುತ್ತಿವೆ. ಸುಪ್ರೀಂ ಕೋರ್ಟ್‌ಗೆ ದೀಪಾವಳಿ ರಜೆಯು ನವೆಂಬರ್ 1 ರಿಂದ ನವೆಂಬರ್ 6ರವರೆಗೆ ಇರಲಿದೆ.
ಅನಿಯಂತ್ರಿತ ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವುದು ಮೂಲಭೂತ ಹಕ್ಕಿನ ಭಾಗವಲ್ಲ ಎಂದು ಕೇಂದ್ರ ಸರ್ಕಾರವು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಗೆ ಮಾಡಿರುವ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ. ಅನಿಯಂತ್ರಿತ ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವುದು ಸಂವಿಧಾನದ 21ನೇ ವಿಧಿಯಡಿ ಬರುವ ಜೀವಿಸುವ ಹಾಗೂ ಸ್ವಾತಂತ್ರ್ಯದ ಹಕ್ಕಿನ ಭಾಗವಲ್ಲ ಎಂದು ಅದು ಹೇಳಿದೆ.
ವಿದೇಶಿ ಕೊಡುಗೆಗಳನ್ನು ನಿಯಂತ್ರಿಸುವುದು ಯಾವುದೇ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸೂಚಿಸಿದೆ. ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳು ಹಾಗೂ ತಿದ್ದುಪಡಿಯನ್ನು ಕಠಿಣವಾಗಿ ಜಾರಿಗೊಳಿಸಲು ಕೋರಿದ್ದ ಮತ್ತೊಂದು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಒಟ್ಟಾಗಿ ಕೈಗೆತ್ತಿಕೊಂಡಿದ್ದು, ಇದಕ್ಕೆ ಕೇಂದ್ರವು ಅಫಿಡವಿಟ್ ಸಲ್ಲಿಸಿದೆ.