ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 09-08-2021

>> ಸ್ಟಾಲಿನ್‌ ಗುರಿಯಾಗಿಸಿದ್ದ ಪಿಐಎಲ್‌: ಉಪದ್ರವಕಾರಿ ಮನವಿ ಎಂದ ಮದ್ರಾಸ್‌ ಹೈಕೋರ್ಟ್‌ >> ತೆಲಂಗಾಣ ಹೈಕೋರ್ಟ್‌ ನ್ಯಾ. ಪಿ ಕೇಶವ ರಾವ್ ನಿಧನ >> ಮುಸ್ಲಿಂ ವಿರೋಧಿ ಘೋಷಣೆ: ದೆಹಲಿ ಮಹಿಳಾ ವಕೀಲರ ವೇದಿಕೆಯಿಂದ ಸುಪ್ರೀಂ ಕೋರ್ಟ್‌ಗೆ ಪತ್ರ

Bar & Bench

ಸ್ಟಾಲಿನ್‌ ಗುರಿಯಾಗಿಸಿದ್ದ ಪಿಐಎಲ್‌: ಕೆಟ್ಟ ಅಭಿರುಚಿಯ, ಉಪದ್ರವಕಾರಿ ಮನವಿ ಎಂದ ಮದ್ರಾಸ್‌ ಹೈಕೋರ್ಟ್‌

ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯಿದೆಯಡಿ ರಚಿಸಲಾದ ಯಾವುದೇ ಸಲಹಾ ಸಮಿತಿಗಳ ನೇತೃತ್ವವನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‌ ವಹಿಸದಂತೆ ನಿರ್ಬಂಧ ವಿಧಿಸಲು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯೊಂದನ್ನು ತಮಿಳುನಾಡು ಹೈಕೋರ್ಟ್‌ ಸೋಮವಾರ ವಜಾಗೊಳಿಸಿದೆ. ಮುಖ್ಯಮಂತ್ರಿ ಸ್ಟಾಲಿನ್‌ ಅವರು ಹಿಂದೂ ದೇವಸ್ಥಾನದಲ್ಲಿ, ಹಿಂದೂ ದೇವರ ಎದುರಿನಲ್ಲಿ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡದ ಹೊರತು ದತ್ತಿ ಕಾಯಿದೆಯಡಿಯ ಸಲಹಾ ಸಮಿತಿಗಳ ನೇತೃತ್ವವಹಿಸಬಾರದು ಎನ್ನುವುದು ಅರ್ಜಿದಾರರ ಬೇಡಿಕೆಯಾಗಿತ್ತು.

Madras HC and MK Stalin

ಅರ್ಜಿದಾರರ ಮನವಿಯ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ನೇತೃತ್ವದ ಪೀಠವು, ಇದೊಂದು ಅತ್ಯಂತ ಕೆಟ್ಟ ಅಭಿರುಚಿಯ, ಕಡು ಉಪದ್ರವಕಾರಿ ಮನವಿಯಾಗಿದ್ದು ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ ಎಂದಿತು. ಅಲ್ಲದೆ, ಅರ್ಜಿದಾರರು ಮುಂದಿನ ಐದು ವರ್ಷಗಳ ಕಾಲು ಯಾವುದೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸದಂತೆ ನಿರ್ಬಂಧ ವಿಧಿಸಿತು. ಇದೇ ವೇಳೆ ನ್ಯಾಯಾಲಯವು, “ಭಾರತವು ಜಾತ್ಯತೀತ ದೇಶವಾಗಿದ್ದು, ಜಾತ್ಯತೀತತೆ ಎನ್ನುವುದು ಇತರೆ ಧರ್ಮಗಳೆಡೆಗಿನ ಸಹಿಷ್ಣುತೆಯನ್ನು ಒಳಗೊಳ್ಳುತ್ತದೆ,” ಎಂದು ಹೇಳಿತು.

ತೆಲಂಗಾಣ ಹೈಕೋರ್ಟ್‌ ನ್ಯಾ. ಪಿ ಕೇಶವ ರಾವ್ ನಿಧನ; ಸಿಜೆಐ ಸಂತಾಪ

ತೆಲಂಗಾಣ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನ್ಯಾ. ಪಿ ಕೇಶವ ರಾವ್‌ ಅವರು ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. 2017ರ ಸೆಪ್ಟೆಂಬರ್‌ನಲ್ಲಿ ಅವರು ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನಿಯುಕ್ತಿಗೊಂಡಿದ್ದರು.

Justice P Keshava Rao

ರಾವ್ ಅವರ ಸಾವಿನ ಬಗ್ಗೆ ಕಂಬನಿ ಮಿಡಿದಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು “ಪಿ. ಕೇಶವ ರಾವ್ ಅವರು ಅಂತಃಕರಣಪೂರಿತ, ಕಾರ್ಯಶ್ರದ್ಧೆಯ ನ್ಯಾಯಮೂರ್ತಿಗಳಾಗಿದ್ದರು ಎನ್ನುವುದನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಅವರ ಮೂವತ್ತೈದು ವರ್ಷದ ದೀರ್ಘ ಕಾನೂನು ವೃತ್ತಿಯಲ್ಲಿ ನ್ಯಾಯೋದ್ದೇಶಕ್ಕಾಗಿ ಅಗಾಧ ಸೇವೆ ಸಲ್ಲಿಸಿದ್ದಾರೆ. ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು,” ಎಂದು ಮಿಡಿದಿದ್ದಾರೆ.

ಮುಸ್ಲಿಂ ವಿರೋಧಿ ಘೋಷಣೆ: ದೆಹಲಿ ಹೈಕೋರ್ಟ್‌ ಮಹಿಳಾ ವಕೀಲರ ವೇದಿಕೆಯಿಂದ ಸುಪ್ರೀಂ ಕೋರ್ಟ್‌ಗೆ ಪತ್ರ

ದೆಹಲಿಯ ಜಂತರ್‌ಮಂತರ್‌ನಲ್ಲಿ ಭಾನುವಾರ ಕೇಳಿಬಂದ ಮುಸ್ಲಿಂ ವಿರೋಧಿ ಘೋಷಣೆಗಳನ್ನು ತೀವ್ರವಾಗಿ ಖಂಡಿಸಿ ದೆಹಲಿ ಮಹಿಳಾ ವಕೀಲರ ವೇದಿಕೆಯು ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದೆ. ಸುಪ್ರೀಂ ಕೋರ್ಟ್‌ ವಕೀಲ, ಬಿಜೆಪಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಭಾನುವಾರ ಆಯೋಜಿಸಿದ್ದ ‘ವಸಾಹತುಶಾಹಿ ಕಾಲದ ಕಾನೂನು’ಗಳ ವಿರುದ್ಧದ ಸಮಾವೇಶದ ನಂತರ ಮುಸ್ಲಿಂ ವಿರೋಧಿ ಘೋಷಣೆಗಳು ಕೇಳಿ ಬಂದಿದ್ದವು.

Lawyer Ashwini Upadhyay and Rally

ಸುಪ್ರೀಂ ಕೋರ್ಟ್‌ಗೆ ಬರೆದಿರುವ ಪತ್ರದಲ್ಲಿ ಮಹಿಳಾ ವಕೀಲರ ವೇದಿಕೆಯು, “ಈ ಘೋಷಣೆಗಳು ಮುಸಲ್ಮಾನರ ವಿರುದ್ಧ ದ್ವೇಷವನ್ನು ಉದ್ದೀಪಿಸುವಂತಹವಾಗಿದ್ದು ಭಾರತದ ಸಂವಿಧಾನದಡಿ ಇವುಗಳಿಗೆ ಯಾವುದೇ ರಕ್ಷಣೆಯಿಲ್ಲ. ಸಮಾವೇಶದಲ್ಲಿ ಮಾಡಲಾದ ಭಾಷಣಗಳನ್ನು ಅಭಿಪ್ರಾಯಭೇದ ಹೊಂದಲು ಇರುವ ಸ್ವಾತಂತ್ರ್ಯಕ್ಕಾಗಲಿ, ಟೀಕಾ ಭಾಷಣಕ್ಕಾಗಲಿ ನಾವು ಗೊಂದಲ ಮಾಡಿಕೊಳ್ಳಬಾರದು. ಸಮಾವೇಶದಲ್ಲಿನ ಭಾಷಣಗಳು ನೇರವಾಗಿ, ಸಂಪೂರ್ಣವಾಗಿ ಮತ್ತೊಂದು ಧರ್ಮದ ವಿರುದ್ಧ ಹಿಂಸೆಯನ್ನು ಪ್ರಚೋದಿಸುತ್ತಿದ್ದವು,” ಎಂದು ಹೇಳಿದೆ. ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಪತ್ರದಲ್ಲಿ ಆಗ್ರಹಿಸಲಾಗಿದೆ.