ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 1-10-2021

Bar & Bench

ರಾಜೀವ್‌ ಹತ್ಯೆ ಪ್ರಕರಣ: ಸಾಕ್ಷ್ಯವಾಗಿ ಪರಿಗಣಿಸಲ್ಪಟ್ಟಿರುವ ಬ್ಯಾಡ್ಜ್‌, ಕ್ಯಾಪ್‌ ಧರಿಸಲು ನಿವೃತ್ತಿ ಹೊಂದಲಿರುವ ಐಪಿಎಸ್‌ ಅಧಿಕಾರಿಗೆ ಅನುಮತಿಸಿದ ನ್ಯಾಯಾಲಯ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರು ತಮಿಳುನಾಡಿನ ಶ್ರೀಪೆರುಂಬದೂರಿನಲ್ಲಿ ಹತ್ಯೆಯಾದ ಸಂದರ್ಭದಲ್ಲಿ ಧರಿಸಿದ್ದ ಬ್ಯಾಡ್ಜ್‌ ಮತ್ತು ಕ್ಯಾಪ್‌ ಅನ್ನು ತಮ್ಮ ನಿವೃತ್ತಿಯ ದಿನ ಹಾಕಿಕೊಳ್ಳಲು ತಮಿಳುನಾಡಿನ ತರಬೇತಿ ವಿಭಾಗದ ಪೊಲೀಸ್‌ ಮಹಾನಿರ್ದೇಶಕರಾದ ಐಪಿಎಸ್‌ ಅಧಿಕಾರಿ ಡಾ. ಪ್ರತೀಪ್‌ ವಿ ಫಿಲಿಪ್‌ ಅವರಿಗೆ ಈಚೆಗೆ ಚೆನ್ನೈನ ಸಿಟಿ ಸಿವಿಲ್‌ ನ್ಯಾಯಾಲಯ ಅನುಮತಿಸಿದೆ. ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದು ಗಂಭೀರವಾಗಿ ಗಾಯಗೊಂಡಿದ್ದ ಫಿಲಿಪ್‌ ಅವರ ಸಮವಸ್ತ್ರ, ನೇಮ್‌ಪ್ಲೇಟ್‌, ಕ್ಯಾಪ್‌ಗಳನ್ನು ಸಾಕ್ಷ್ಯವಾಗಿ ಸಂಗ್ರಹಿಸಲಾಗಿದ್ದು ಹಾಗೆಯೇ ಉಳಿಸಿಕೊಳ್ಳಲಾಗಿದೆ.

Rajiv Gandhi and Chennai City Civil Court

ರಾಜೀವ್‌ ಗಾಂಧಿ ಅವರ ಹತ್ಯೆಯ ಸಂದರ್ಭದಲ್ಲಿ ಕಂದೀಪುರಂನಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆಯಲ್ಲಿದ್ದ ಫಿಲಿಪ್‌ ಅವರು ಘಟನೆಯ ದಿನ ರಾಜೀವ್ ಅವರು ಹತ್ಯೆಯಾದ ಸ್ಥಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ಸಂದರ್ಭದಲ್ಲಿ ಅಧಿಕಾರಿಯ ದೇಹಕ್ಕೆ ಹೊಕ್ಕ ಉಕ್ಕಿನ ತುಣುಕುಗಳು ಈಗಲೂ ಅವರ ದೇಹದಲ್ಲಿ ಹಾಗೆಯೇ ಉಳಿದಿವೆ ಎಂಬ ಅಂಶವನ್ನೂ ಪೀಠವು ಪರಿಗಣಿಸಿತು. 2003ರಲ್ಲಿ ಫಿಲಿಪ್‌ ಸೇವೆಯನ್ನು ಗುರುತಿಸಿ ಅವರಿಗೆ ಪ್ರಧಾನ ಮಂತ್ರಿ ಪದಕ ಮತ್ತು 2012ರಲ್ಲಿ ಅವರಿಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಅಧಿಕಾರಿಗೆ ತಮ್ಮ ಸಮವಸ್ತ್ರದೊಂದಿಗೆ ಇರುವ ನಂಟನ್ನು ಅಲ್ಲಗಳೆಯದ ಪೀಠವು ಅವರಿಗೆ ತಮ್ಮ ನಿವೃತ್ತಿಯ ಕೊನೆಯ ದಿನ ಅವರ ಇಷ್ಟದಂತೆ ಘಟನೆಯ ಸಂದರ್ಭದಲ್ಲಿ ಧರಿಸಿದ್ದ ಕ್ಯಾಪ್‌ ಹಾಗೂ ನೇಮ್‌ಪ್ಲೇಟ್‌ ಧರಿಸಲು ಅನುಮತಿಸಿದೆ. ಆದರೆ, ಈ ವಸ್ತುಗಳನ್ನು ಅಧಿಕಾರಿಗೆ ಮಧ್ಯಂತರ ಕಸ್ಟಡಿಯಾಗಿ ರೂ. 1 ಲಕ್ಷ ಭದ್ರತೆ ಪಡೆದು ನೀಡುವಂತೆ ಹಾಗೂ ಅವುಗಳನ್ನು ಪಡೆದ ಉದ್ದೇಶ ಈಡೇರಿದ ಬಳಿಕ ದಿ.28-10-21ರ ಒಳಗೆ ಅವುಗಳನ್ನು ಮರಳಿ ಹಿಂದಿರುಗಿಸುವಂತೆ ಸೂಚಿಸಲಾಗಿದೆ.

ವ್ಯಕ್ತಿಯ ಬಡತನದ ಕಾರಣಕ್ಕೆ ಅವರ ಅಂಗಾಂಗ ದಾನವನ್ನು ನಿರಾಕರಿಸುವಂತಿಲ್ಲ: ಕೇರಳ ಹೈಕೋರ್ಟ್‌

ಕೇವಲ ಬಡವರು ಎನ್ನುವ ಏಕೈಕ ಕಾರಣದಿಂದಾಗಿ ಯಾವುದೇ ವ್ಯಕ್ತಿಯನ್ನು ತನ್ನ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ನಿರ್ಬಂಧಿಸುವ ಹಾಗಿಲ್ಲ ಎಂದು ಕೇರಳ ಹೈಕೋರ್ಟ್‌ ಈಚೆಗೆ ಆದೇಶಿಸಿದೆ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅರ್ಜಿದಾರರೊಬ್ಬರಿಗೆ ಮೂತ್ರಪಿಂಡ ದಾನ ಮಾಡಲು ಮುಂದಾದ ವ್ಯಕ್ತಿಯ ಅರ್ಜಿಯನ್ನು ಜಿಲ್ಲಾ ಅಧಿಕೃತ ಒಪ್ಪಿಗೆ ಸಮಿತಿಯು ತಿರಸ್ಕರಿಸಿತ್ತು. ದಾನಿಯ ಬಡತನದ ಹಿನ್ನೆಲೆಯನ್ನು ವಿಶೇಷವಾಗಿ ಗಮನಿಸಿದ್ದ ಸಮಿತಿಯು ಕಿಡ್ನಿ ದಾನಕ್ಕೆ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ದಾನಪಡೆಯುವ ಹಾಗೂ ದಾನ ನೀಡುವ ವ್ಯಕ್ತಿಗಳಿಬ್ಬರೂ ನ್ಯಾಯಾಲಯದ ಮೆಟ್ಟಿಲೇರಿದ್ದರು.

organ donation aarogya.com

ಪ್ರಕರಣದ ವಿಚಾರಣೆಯನ್ನು ನಡೆಸಿದ, ಪಿ ವಿ ಕುನ್ನಿಕೃಷ್ಣನ್‌ ಅವರಿದ್ದ ಏಕಸದಸ್ಯ ಪೀಠವು, “ಬಡವರು ತಮ್ಮ ಅಂಗಾಗಗಳನ್ನು ದಾನ ಮಾಡಬಾರದು ಎಂದು ಎಲ್ಲಿಯೂ ನಿಯಮವಿಲ್ಲ. ಬಡವರಾಗಿರುವುದು ಪಾಪವಲ್ಲ. ನಮ್ಮ ದೇಶದಲ್ಲಿ ಹೃದಯ ಶ್ರೀಮಂತಿಕೆಗೆ ಕೊರತೆಯಿಲ್ಲ. ಇಂತಹವರು ಅಂಗಾಂಗ ದಾನದ ಅಗತ್ಯವಿರುವವರನ್ನು ರಕ್ಷಿಸಬಲ್ಲರು. ಹೀಗೆ ಮಾತ್ರವೇ ನಾವು ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಾಧ್ಯ” ಎಂದು ಅಭಿಪ್ರಾಯಪಟ್ಟಿತು. ಅಂತಿಮವಾಗಿ ಬಡ ದಾನಿಯು ತನ್ನ ಕಿಡ್ನಿಯನ್ನು ದಾನ ಮಾಡಲು ಅನುಮತಿಸಿತು.