ಸುದ್ದಿಗಳು

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |06-07-2021

>> ಕಪ್ಪನ್‌ಗೆ ಜಾಮೀನು ನಿರಾಕರಣೆ >> ʼಲಸಿಕೆ ಹಾಕುವಾಗ ಮಾನಸಿಕ ಅಸ್ವಸ್ಥರನ್ನು ಪರಿಗಣಿಸಿʼ >> ಶಬರಿಮಲೆ ತೀರ್ಪಿನ ಕುರಿತು ವಿವಾದಾತ್ಮಕ ಪೋಸ್ಟ್‌ ಮಾಡಿದ್ದ ಕೇರಳ ನ್ಯಾಯಾಧೀಶ ರಾಜೀನಾಮೆ

Bar & Bench

ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಜಾಮೀನು ಅರ್ಜಿ ತಿರಸ್ಕರಿಸಿದ ಮಥುರಾ ನ್ಯಾಯಾಲಯ

ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಉತ್ತರ ಪ್ರದೇಶದ ಮಥುರಾ ನ್ಯಾಯಾಲಯ ತಿರಸ್ಕರಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ (ಯುಎಪಿಎ) ಉತ್ತರಪ್ರದೇಶದ ಪೊಲೀಸರು ಕಪ್ಪನ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು.

Kappan Kappan, Mathura court

ಜಾಮೀನು ನಿರಾಕರಿಸಿರುವ ನ್ಯಾ. ಅನಿಲ್‌ ಕುಮಾರ್‌ ಪಾಂಡೆ ಅವರು ಕಪ್ಪನ್‌ ಹಾಗೂ ಅವರ ಸಹ ಆರೋಪಿಗಳ ವಿರುದ್ಧ ಕಾನೂನು ಸುವ್ಯವಸ್ಥೆಯನ್ನು ಭಂಗಗೊಳಿಸಲು ಮುಂದಾಗಿದ್ದರು ಎನ್ನುವ ಆರೋಪ ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದಿದ್ದಾರೆ. ಆರೋಪಿಗಳು ಹಾಥ್‌ರಸ್‌ ಅತ್ಯಾಚಾರ ಸಂತ್ರಸ್ತೆಯ ಕುರಿತಾದ ವರದಿ ಮಾಡಲು ತೆರಳುತ್ತಿದ್ದ ವೇಳೆ ಅವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು. ಇತ್ತೀಚೆಗಷ್ಟೇ ಮಥುರಾ ನ್ಯಾಯಾಲಯವು ಕಪ್ಪನ್‌ ವಿರುದ್ಧವಿದ್ದ ಜಾಮೀನು ನೀಡಬಹುದಾದ ಆರೋಪಗಳನ್ನು ಕೈಬಿಟ್ಟಿತ್ತು.

ಮಾನಸಿಕ ಅಸ್ವಸ್ಥ ವ್ಯಕ್ತಿಗಳಿಗೆ ಲಸಿಕೆ ಹಾಕುವುದು ಆದ್ಯತೆಯ ವಿಷಯವಾಗಲಿ: ಸುಪ್ರೀಂ ಕೋರ್ಟ್‌

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಾನಸಿಕ ಅಸ್ವಸ್ಥ ಕೇಂದ್ರಗಳಲ್ಲಿರುವ ರೋಗಿಗಳ ಪರಿಸ್ಥಿತಿಯ ಬಗ್ಗೆ “ಹೆಚ್ಚು ಗಂಭೀರವಾಗಬೇಕು” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರನ್ನು ಪರೀಕ್ಷಿಸುವ, ಪತ್ತೆ ಹಚ್ಚುವ ಮತ್ತು ಲಸಿಕೆ ಹಾಕುವ ಕೆಲಸವು ಆದ್ಯತೆಯ ವಿಷಯವಾಗಬೇಕು ಎಂದು ನ್ಯಾ. ಡಿ ವೈ ಚಂದ್ರಚೂಡ್‌ ಹಾಗೂ ನ್ಯಾ. ಎಂ ಆರ್‌ ಶಾ ಅವರಿದ್ದ ಪೀಠವು ಹೇಳಿದೆ.

ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡಿದ್ದರೂ ಸಹ ಮಾನಸಿಕ ಚಿಕಿತ್ಸಾ ಕೇಂದ್ರಗಳು, ಆಸ್ಪತ್ರೆಗಳಲ್ಲಿಯೇ ಇರಿಸಲಾಗಿರುವ ಸುಮಾರು 8 ಸಾವಿರ ಮಂದಿಗೆ ಪುನರ್ವಸತಿ ಕಲ್ಪಿಸುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡಿರುವ ಹಾಗೂ ಇನ್ನೂ ಚಿಕಿತ್ಸೆ ಅಗತ್ಯವಿರುವ ರೋಗಿಗಳ ಮಾಹಿತಿ ಪಡೆಯಲು ಸರ್ವ ರಾಜ್ಯಗಳ ಸಭೆ ಕರೆಯಲು ಕೋವಿಡ್‌ ಕಾರಣದಿಂದಾಗಿ ಕಳೆದೊಂದು ವರ್ಷದಿಂದ ಸಾಧ್ಯವಾಗಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್‌ ಮಾಧವಿ ದಿವಾನ್‌ ಇದೇ ವೇಳೆ ನ್ಯಾಯಾಲಯಕ್ಕೆ ತಿಳಿಸಿದರು.

ಶಬರಿಮಲೆ ತೀರ್ಪು ಕುರಿತು ವಿವಾದತ್ಮಕ ಪೋಸ್ಟ್‌: ರಾಜೀನಾಮೆ ನೀಡಿದ ಬಗ್ಗೆ ಫೇಸ್‌ಬುಕ್‌ನಲ್ಲಿ ತಿಳಿಸಿದ ಕೇರಳದ ನ್ಯಾಯಾಧೀಶ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಂತೆ ಕೇರಳ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪುಗಳನ್ನು ಫೇಸ್‌ಬುಕ್‌ ಮೂಲಕ ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ವಿಚಾರಣೆ ಎದುರಿಸುತ್ತಿದ್ದ ಕೇರಳದ ಪೆರುಂಬವೂರು ಉಪ ನ್ಯಾಯಾಧೀಶ ಎಸ್‌ ಸುದೀಪ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರಿಗೆ ರಾಜೀನಾಮೆಯನ್ನು ಸಲ್ಲಿಸಿರುವ ವಿಷಯವನ್ನು ಅವರು ಫೇಸ್‌ಬುಕ್‌ ಮೂಲಕ ಹಂಚಿಕೊಂಡಿದ್ದಾರೆ.

Facebook and Sabarimala

ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದು ಮತ್ತಿತರ ಗಂಭೀರ ಆರೋಪಗಳಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದಿಲ್ಲವಾದರೂ, ಅವರ ನಡೆ ಕೇರಳ ಹೈಕೋರ್ಟ್ 2017ರ ಡಿಸೆಂಬರ್ 15 ರಂದು ಹೊರಡಿಸಿದ ಸುತ್ತೋಲೆಗೆ ವಿರುದ್ಧವಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿತ್ತು. ತನಿಖಾ ವರದಿಯನ್ನು ಅಂಗೀಕರಿಸಿದ್ದ ಹೈಕೋರ್ಟ್‌ ಸುದೀಪ್‌ ಅವರ ವಿವರಣೆ ಕೇಳಿತ್ತು. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ಅವರು ನಿರಾಕರಿಸಿದ್ದರು. ಇದನ್ನು ಒಪ್ಪದ ನ್ಯಾಯಾಲಯ ಅವರ ಕಳೆದ ವರ್ಷದ ಸೇವೆಯನ್ನು ಅಮಾನ್ಯ ಮಾಡಿ ಆದೇಶಿಸಿತ್ತು. ಅಲ್ಲದೆ ಕೆಲ ವರ್ಷಗಳಿಂದ ತಮ್ಮ ಬಡ್ತಿಯನ್ನು ನಿರಾಕರಿಸಲಾಗಿದೆ ಎಂದು ಸುದೀಪ್‌ ಆರೋಪಿಸಿದ್ದರು.