Karnataka High Court, EPFO 
ಸುದ್ದಿಗಳು

ದೂರು ದಾಖಲಾಗುವುದಕ್ಕೂ ಮುನ್ನ ಭವಿಷ್ಯ ನಿಧಿ ಮೊತ್ತ ಪಾವತಿ: ಕಾನೂನು ಪ್ರಕ್ರಿಯೆ ಸೂಕ್ತವಲ್ಲ ಎಂದ ಹೈಕೋರ್ಟ್‌

ಬಾಕಿ ಹಣ ಪಾವತಿಸುವುದಕ್ಕೂ ಮುನ್ನ ಇಪಿಎಫ್‌ಒ ಯಾವುದೇ ದೂರು ದಾಖಲಿಸಿರಲಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧ ನಂಬಿಕೆ ದ್ರೋಹ ಪ್ರಕರಣದ ವಿಚಾರಣೆಗೆ ಮುಂದುವರಿಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

Bar & Bench

ಉದ್ಯೋಗದಾತ ಸಂಸ್ಥೆಯು ಸಿಬ್ಬಂದಿಯ ಭವಿಷ್ಯ ನಿಧಿ ಹಣವನ್ನು ಪೊಲೀಸ್‌ ದೂರು ದಾಖಲಾಗುವುದಕ್ಕೂ ಮುನ್ನ ಬಡ್ಡಿ ಸಮೇತ ಪಾವತಿಸಿರುವುದರಿಂದ ಅವರ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆ ಮುಂದುವರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ.

ದಾಸರಹಳ್ಳಿ ಶಾಸಕ ಮುನಿರಾಜು ಅವರ ಪುತ್ರಿ ಸ್ವಪ್ನಾ ಕಾರ್ಯದರ್ಶಿಯಾಗಿರುವ ಶ್ರೀಬಾಲಾಜಿ ಚಾರಿಟಬಲ್ ಟ್ರಸ್ಟ್ ಮತ್ತು ಸಂಸ್ಥಾಪಕ ಟ್ರಸ್ಟಿ ಬಿ ಆರ್ ರಮೇಶ್ ಅವರ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಏಕಸದಸ್ಯ ಪೀಠ ರದ್ದುಪಡಿಸಿದೆ.

ಅರ್ಜಿದಾರ ಸಂಸ್ಥೆಯು ಸಿಬ್ಬಂದಿಯ ಭವಿಷ್ಯ ನಿಧಿ ಮೊತ್ತವನ್ನು ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಯಿಂದ ನೋಟಿಸ್‌ ಬಂದ ತಕ್ಷಣ ಪಾವತಿಸಿದೆ. ಬಾಕಿ ಹಣ ಪಾವತಿಸುವುದಕ್ಕೂ ಮುನ್ನ ಉದ್ಯೋಗಿ ಭವಿಷ್ಯನಿಧಿ ಸಂಸ್ಥೆಯು (ಇಪಿಎಫ್‌ಒ) ಯಾವುದೇ ದೂರು ದಾಖಲಿಸಿರಲಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧ ನಂಬಿಕೆ ದ್ರೋಹ ಪ್ರಕರಣದ ವಿಚಾರಣೆಗೆ ಮುಂದುವರಿಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಸಿಬ್ಬಂದಿಯ ಭವಿಷ್ಯ ನಿಧಿ ಬಾಕಿ ಉಳಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಉದ್ಯೋಗಿ ಭವಿಷ್ಯನಿಧಿ ಸಂಸ್ಥೆಯು ಬಡ್ಡಿ ಸಮೇತ ಹಣ ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು. ಇದರ ಅನ್ವಯ ಅವರು ಎಲ್ಲಾ ಮೊತ್ತವನ್ನು ಬಡ್ಡಿ ಸಮೇತ ಪಾವತಿ ಮಾಡಿರುವುದರಿಂದ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 406, 409 ಮತ್ತು 34ರ ಅಡಿ ಸಂಜ್ಞೇ ಪರಿಗಣಿಸಿ, ಸಮನ್ಸ್‌ ಜಾರಿ ಮಾಡಿರುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಬಾಲಾಜಿ ಎಜುಕೇಷನಲ್ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಟ್ರಸ್ಟಿ ಹಾಗೂ ಕಾರ್ಯದರ್ಶಿಗಳಾಗಿದ್ದೂ, ಟ್ರಸ್ಟ್ ವತಿಯಿಂದ ರೈನ್‌ಬೋ ಇಂಟರ್ ನ್ಯಾಷನಲ್ ಸ್ಕೂಲ್ ಮತ್ತು ರೈನ್‌ಬೋ ಪದವಿ ಪೂರ್ವ ಕಾಲೇಜು ನಡೆಸುತ್ತಿದ್ದಾರೆ. 2014ರ ಜೂನ್ ತಿಂಗಳಿನಿಂದ 2015ರ ಜನವರಿವರೆಗೆ ಬಾಕಿ ಉಳಿಸಿಕೊಂಡಿದ್ದ ಶಾಲೆಯ ಸಿಬ್ಬಂದಿಯ ಭವಿಷ್ಯ ನಿಧಿಯ ಮೊತ್ತವನ್ನು ಪಾವತಿಸುವಂತೆ ಸೂಚಿಸಿ 2015ರ ಆಗಸ್ಟ್ 26ರಂದು ಇಪಿಎಫ್‌ಒ ಅಧಿಕಾರಿ ಶಾಲೆಗೆ ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ನೀಡಿದ ತಕ್ಷಣ ಅರ್ಜಿದಾರರು ಬಾಕಿ ಮೊತ್ತವನ್ನು ಪಾವತಿಸಿ ರಸೀದಿ ಪಡೆದುಕೊಂಡಿದ್ದರು.

ಬಳಿಕ ಅರ್ಜಿದಾರರನ್ನು ವಿಚಾರಣೆಗೆ ಹಾಜರಾಗುವಂತೆ ಇಪಿಎಫ್‌ಒ ಅಧಿಕಾರಿ ಸೂಚಿಸಿದ್ದರು. ವಿಚಾರಣೆಗೆ ಹಾಜರಾಗಿದ್ದ ಶಾಲೆಯ ಸಿಬ್ಬಂದಿಗೆ 31 ಸಾವಿರ ರೂಪಾಯಿ ಪಾವತಿಸಲು ಸೂಚನೆ ನೀಡಲಾಗಿತ್ತು. ಈ ಮೊತ್ತ ಪಾವತಿಸಿದ ಬಳಿಕ ಮತ್ತೆ ವಿಚಾರಣೆ ಪ್ರಾರಂಭಿಸಿ, ಬಾಕಿ ಉಳಿಸಿಕೊಂಡಿದ್ದ ಮೊತ್ತಕ್ಕೆ 14 ಸಾವಿರ ರೂಪಾಯಿ ಬಡ್ಡಿ ಪಾವತಿಸಲು ಸೂಚನೆ ನೀಡಲಾಗಿತ್ತು. ಈ ಬಡ್ಡಿಯ ಮೊತ್ತವನ್ನೂ ಟ್ರಸ್ಟ್ ಪಾವತಿಸಿತ್ತು.

ಇದಾದ ಬಳಿಕ ಭವಿಷ್ಯನಿಧಿ ಸಂಸ್ಥೆಯ ಅಧಿಕಾರಿಯು ಅರ್ಜಿದಾರರ ವಿರುದ್ಧ ಭವಿಷ್ಯ ನಿಧಿ ಪಾವತಿ ಮಾಡದ ಆರೋಪದಲ್ಲಿ ಐಪಿಸಿ ಸೆಕ್ಷನ್ 406, 409 ಗಳ ಅಡಿಯಲ್ಲಿ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಚಾರಣಾಧೀನ ನ್ಯಾಯಾಲಯವು ಇದರ ಸಂಜ್ಞೇ ಸ್ವೀಕರಿಸಿತ್ತು. ಇದರ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.