Justice NV Ramana
Justice NV Ramana
ಸುದ್ದಿಗಳು

ಕಾನೂನು ವೃತ್ತಿ ಇರುವುದು ಸಂಪತ್ತು ವೃದ್ಧಿಗಲ್ಲ, ಸಮಾಜ ಸೇವೆಗೆ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ

Bar & Bench

ಕಾನೂನು ನೆರವು ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಕ್ಕಾಗಿ ದೇಶಾದ್ಯಂತ ಕಾನೂನು ವಿದ್ಯಾರ್ಥಿಗಳನ್ನು ಮಂಗಳವಾರ ಶ್ಲಾಘಿಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಕಾನೂನು ನೆರವು ಅವರನ್ನು ಭವಿಷ್ಯದ ದಿಗ್ದರ್ಶಕರನ್ನಾಗಿ ರೂಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾನೂನು ಸೇವಾ ಪ್ರಾಧಿಕಾರಗಳ ಕಾಯಿದೆ ಜಾರಿಗೊಳಿಸಿದ ಸ್ಮರಣಾರ್ಥ ರಾಷ್ಟ್ರೀಯ ಕಾನೂನು ಸೇವಾ ಆಯೋಗ ಉತ್ತರಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಸೇವಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

“ಕಾನೂನು ನೆರವು ಆಂದೋಲನಕ್ಕೆ ಸೇರುವ ನಿಮ್ಮ ನಿರ್ಧಾರವು ಉತ್ತಮ ವೃತ್ತಿಜೀವನಕ್ಕೆ ದಾರಿ ಮಾಡಿಕೊಡುತ್ತದೆ. ಇದು ಸಹಾನುಭೂತಿ, ತಿಳಿವಳಿಕೆ ಹಾಗೂ ನಿಸ್ವಾರ್ಥ ಪ್ರಜ್ಞೆಯನ್ನು ಬೆಳೆಸಲು ನಿಮಗೆ ಸಹಾಯ ಮಾಡುತ್ತದೆ. ನೆನಪಿಡಿ, ಇತರ ವೃತ್ತಿಗಳಿಗಿಂತ ಭಿನ್ನವಾಗಿ ವಕೀಲ ವೃತ್ತಿ ಇದೆ. ವಕೀಲ ವೃತ್ತಿ ಎಂಬುದು ಸಂಪತ್ತು ವೃದ್ಧಿಗಲ್ಲದೆ ಬದಲಿಗೆ ಸಮಾಜ ಸೇವೆಗಾಗಿ ಇದೆ” ಎಂದರು.

ಜೊತೆಗೆ “ಕಾನೂನು ಸೇವಾ ಅಧಿಕಾರಿಗಳ ಮೂಲಕ ನಮ್ಮ ದೇಶದ ತಳಮಟ್ಟದ ವಾಸ್ತವಗಳೊಂದಿಗೆ ಮುಖಾಮುಖಿಯಾಗುತ್ತಿರುವುದು ಕಾನೂನು ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ ಎಂದು ಭಾವಿಸುತ್ತೇನೆ. ನಾನು ತಿಳಿದಿರುವುದು ಏನೆಂದರೆ ವಿದ್ಯಾರ್ಥಿಗಳು ಕಾನೂನು ನೆರವು ಆಂದೋಲನದಲ್ಲಿ ಪ್ರಮುಖ ಭಾಗೀದಾರರಾಗುತ್ತಿದ್ದಾರೆ ಎಂಬುದು. ಇದು ಹೆಚ್ಚು ಉಪಯುಕ್ತ. ಕಾನೂನು ಸೇವೆಗಳ ವ್ಯಾಪ್ತಿಯನ್ನು ದೇಶದ ಮೂಲೆ ಮೂಲೆಗೆ ವಿಸ್ತರಿಸಲು ಅವರು ಅತ್ಯಗತ್ಯ” ಎಂದರು.

“ಈ ದಿನ ನ್ಯಾಯ ಪಡೆಯುವ ಕುರಿತಾದ ಸಾಂವಿಧಾನಿಕ ಗುರಿ ಸಾಧನೆಯ ನಮ್ಮ ಪ್ರಯಾಣದ ಆರಂಭವನ್ನು ಸೂಚಿಸುತ್ತದೆ. 1995ರಲ್ಲಿ ಇದೇ ದಿನದಂದು, ಕಾನೂನು ಸೇವಾ ಪ್ರಾಧಿಕಾರಗಳ ಕಾಯಿದೆ ಜಾರಿಗೆ ಬಂದು ಕಾನೂನು ಸೇವಾ ಪ್ರಾಧಿಕಾರಗಳ ಸಂಪೂರ್ಣ ರೂಪುರೇಷೆಗೆ ದಾರಿ ಮಾಡಿಕೊಟ್ಟಿತು. ಕಾನೂನು ಸೇವೆಗಳ ದಿನಾಚರಣೆಯ ಇಂತಹ ಅದ್ಧೂರಿ ಆಚರಣೆಯನ್ನು ನೋಡಲು ನನಗೆ ಸಂತಸವಾಗುತ್ತಿದೆ” ಎಂದು ಸಿಜೆಐ ವಿವರಿಸಿದರು.

"1995 ರಲ್ಲಿ ಕಾನೂನು ನೆರವಿನ ಪರಿಕಲ್ಪನೆಯನ್ನು ಸಾಂಸ್ಥಿಕಗೊಳಿಸಿದಾಗ, ನಿಜವಾದ ಕಾನೂನು ನೆರವು ಚಳುವಳಿ ಎಂಬುದು ನಮಗೆ ಸ್ವಾತಂತ್ರ್ಯ ಪೂರ್ವಕ್ಕೂ ಮೊದಲು, ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರಾರಂಭವಾಯಿತು ಎಂಬುದನ್ನು ನಾನು ನಿಮಗೆ ನೆನಪಿಸಬೇಕು. ಹಲವಾರು ಕಾನೂನು ತಜ್ಞರು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಕಾನೂನು ಸೇವೆ ಒದಗಿಸಿ ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದರು. ಈ ಕಾನೂನು ನೆರವು ಚಳುವಳಿಯ ಬೆಳವಣಿಗೆ ನಮ್ಮ ಸಂವಿಧಾನದಲ್ಲಿ ಪ್ರತಿಫಲಿಸಿದೆ., ಸಂವಿಧಾನದ ಪ್ರಸ್ತಾವನೆಯಲ್ಲಿ 'ನ್ಯಾಯ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ' ಎಂಬ ಅಭಿವ್ಯಕ್ತಿಯು ವಿಶೇಷ ಸ್ಥಾನ ಪಡೆದಿದೆ. ಇದು ನ್ಯಾಯದ ಪರಿಕಲ್ಪನೆ ಮತ್ತು ಅದರ ವ್ಯಾಪ್ತಿಯ ಬಗ್ಗೆ ಸಂವಿಧಾನ ಸಭೆಯ ಸದಸ್ಯರಿಗಿದ್ದ ಗಂಭೀರತೆಯನ್ನು ಪ್ರತಿಫಲಿಸುತ್ತದೆ” ಎಂದು ಅವರು ಹೇಳಿದರು.

"ಇಂದು, ಕಾನೂನು ಸೇವಾ ಪ್ರಾಧಿಕಾರಗಳ ಪಾತ್ರ ಕೇವಲ ನ್ಯಾಯಾಲಯ ಆಧಾರಿತ ಕಾನೂನು ಪ್ರಾತಿನಿಧ್ಯಕ್ಕೆ ಸೀಮಿತವಾಗಿಲ್ಲ. ಅವರು ಕಾನೂನು ಅರಿವು, ಕಾನೂನು ಸಾಕ್ಷರತೆ, ಸಾಮಾಜಿಕ ಕ್ರಿಯಾ ಮೊಕದ್ದಮೆ, ಪರ್ಯಾಯ ವಿವಾದ ಪರಿಹಾರ (ಎಡಿಆರ್) ವಿಧಾನಗಳ ಮೂಲಕ ವಿವಾದಗಳ ಇತ್ಯರ್ಥಕ್ಕೆ ಶ್ರಮಿಸುತ್ತಿದ್ದಾರೆ” ಎಂದರು.

ರಾಷ್ಟ್ರೀಯ ಕಾನೂನು ನೆರವು ಆಂದೋಲನಕ್ಕೆ ಕೊಡುಗೆ ನೀಡಿದವರಿಗೆ ಧನ್ಯವಾದ ಸಲ್ಲಿಸುವ ಮೂಲಕ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಭಾಷಣ ಮುಕ್ತಾಯಗೊಳಿಸಿದರು. ವಿಶೇಷವಾಗಿ ಕೇಂದ್ರ ಕಾನೂನು ಸಚಿವ ಕಿರೆಣ್ ರಿಜಿಜು ಅವರಿಗೆ ಸಿಜೆಐ ಕೃತಜ್ಞತೆ ಸಲ್ಲಿಸಿದರು.

"ಕಾನೂನು ಸೇವಾ ಪ್ರಾಧಿಕಾರಗಳ ಪ್ರಗತಿಯತ್ತ ನಮ್ಮ ಕಾನೂನು ಸಚಿವರ ವೈಯಕ್ತಿಕ ಒಲವು ಸಂತೋಷದಾಯಕವಾಗಿದೆ. ಅವರ ನಾಯಕತ್ವದಲ್ಲಿ, ಮೂಲಸೌಕರ್ಯ ಸಮಸ್ಯೆಗಳು ಸೇರಿದಂತೆ ಕಾನೂನು ಸೇವಾ ಪ್ರಾಧಿಕಾರಗಳ ಬೆಳವಣಿಗೆಗೆ ಇರುವ ಅಡೆತಡೆಗಳ ಬಗ್ಗೆ ಸೂಕ್ತ ರೀತಿಯಲ್ಲಿ ಕಾಳಜಿ ವಹಿಸುತ್ತಾರೆ ಎಂದು ಭಾವಿಸುವೆ” ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ಅಲಾಹಾಬಾದ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಹಾಗೂ ನ್ಯಾಯಮೂರ್ತಿ ಎಂ ಎನ್ ಭಂಡಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಿಜೆಐ ಅವರು ಮಾಡಿದ ಭಾಷಣದ ಪೂರ್ಣಪಠ್ಯ ಇಲ್ಲಿ ಲಭ್ಯ:

Chief_Justice_Speech.pdf
Preview