Punjab and Haryana High Court, Chandigarh. 
ಸುದ್ದಿಗಳು

ಸಂಗಾತಿ ಸಾವನ್ನಪ್ಪಿದ್ದಾಗ ಅವರ ಕಾನೂನು ಪ್ರತಿನಿಧಿಗಳು ವಿಚ್ಛೇದನ ಪ್ರಕರಣ ಮುಂದುವರೆಸಲಾಗದು: ಪಂಜಾಬ್ ಹೈಕೋರ್ಟ್

ಪತಿ-ಪತ್ನಿಯರ ನಡುವಿನ ವಿವಾಹ ವೈಯಕ್ತಿಕ ಒಪ್ಪಂದವಾಗಿರುವುದರಿಂದ ವಿಚ್ಛೇದನಕ್ಕೆ ಸಂಬಂಧಿಸಿದ ಪ್ರಸ್ತುತ ಮೇಲ್ಮನವಿಯನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಪತಿ ಅಥವಾ ಪತ್ನಿ ಸಾವನ್ನಪ್ಪಿದ್ದರೆ ಅವರ ಕಾನೂನು ಪ್ರತಿನಿಧಿಗಳು ಪ್ರಕರಣ ಮುಂದುವರೆಸಲು ಅನುಮತಿಸಲಾಗದು ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ತೀರ್ಪು ನೀಡಿದೆ.

ದಂಪತಿಯ ವೈವಾಹಿಕ ಸಂಬಂಧಕ್ಕೆ ಉತ್ತರಾಧಿಕಾರ ಇರುವಂತಿಲ್ಲ. ಹೀಗಾಗಿ ಮೃತ ಪಕ್ಷಕಾರರ ಸ್ಥಾನವನ್ನು ಆತನ ಅಥವಾ ಆಕೆಯ ಕಾನೂನು ಪ್ರತಿನಿಧಿಗಳು ತುಂಬುವಂತಿಲ್ಲ ಎಂದು ನ್ಯಾ. ಸುರೇಶ್ ಠಾಕೂರ್ ಮತ್ತು ನ್ಯಾಯಮೂರ್ತಿ ಸುದೀಪ್ತಿ ಶರ್ಮಾ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ವಿಚ್ಛೇದನದ ಪ್ರಕರಣದ ಬಾಕಿಯಿರುವಾಗ ಮರಣಹೊಂದಿದ ತನ್ನ ಮಗನ ಬದಲಿಗೆ ಪ್ರಕರಣದಲ್ಲಿ ತನ್ನನ್ನು ಕಕ್ಷಿದಾರನನ್ನಾಗಿ ಮಾಡಬೇಕೆಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಬದಲಿ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯ  ಈ ವಿಚಾರ ಹೇಳಿದೆ.

ಅರ್ಜಿಯನ್ನು ವಜಾಗೊಳಿಸಲು ಪ್ರಮುಖ ಕಾರಣ ಎಂದರೆ, ವೈವಾಹಿಕ ಪಾಲುದಾರರ ನಡುವಿನ ವಿವಾಹ ನಿಸ್ಸಂಶಯವಾಗಿ ಸಂಗಾತಿಗಳ ನಡುವಿನ ವೈಯಕ್ತಿಕ ಒಪ್ಪಂದವಾಗಿದೆ. ಈ ಒಪ್ಪಂದ ಪಕ್ಷಕಾರರ ಜೀವತಾವಧಿವರೆಗೆ ಮಾತ್ರ ಜೀವಂತವಾಗಿರುತ್ತದೆ. ವೈವಾಹಿಕ ಸಂಬಂಧದ ಪಕ್ಷಕಾರರಲ್ಲಿ ಒಬ್ಬರು ಮರಣವನ್ನಪ್ಪಿದರೆ ಆಗ ಈ ಒಪ್ಪಂದ ಕೊನೆಗೊಳ್ಳುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

ಪತಿ-ಪತ್ನಿಯರ ನಡುವಿನ ವಿವಾಹವು ವೈಯಕ್ತಿಕ ಒಪ್ಪಂದವಾಗಿರುವುದರಿಂದ ಮನವಿಯನ್ನು ರದ್ದುಗೊಳಿಸಲಾಗಿದೆ ಎಂಬುದಾಗಿ  ಘೋಷಿಸುವ ಅಗತ್ಯವಿದೆ ಎಂದು ಅದು ತಿಳಿಸಿತು.

ವಿಚ್ಛೇದನ ಪ್ರಕರಣ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ವೇಳೆ ಸಾವನ್ನಪ್ಪಿದ್ದ ವ್ಯಕ್ತಿಯ ತಾಯಿ ಈ ಅರ್ಜಿ ಸಲ್ಲಿಸಿದ್ದರು. ಮೇಲ್ಮನವಿ ರದ್ದುಗೊಳಿಸಲಾಗಿದೆ ಎಂದು ಘೋಷಿಸಬೇಕಾಗಿತ್ತಾದರೂ ಮಗನ ಪರವಾಗಿ ಪ್ರಕರಣ ಮುಂದುವರೆಸಲು ತಾಯಿ ಅವಕಾಶ ಕೋರಿದ್ದರು. ಆದರೆ ಅರ್ಜಿಯ ನಿರ್ವಹಣಾರ್ಹತೆಯನ್ನು ಪತ್ನಿಯ ಪರ ವಕೀಲರು ಪ್ರಶ್ನಿಸಿದ್ದರು.

ವಿಚಾರಣೆ ಮುಂದುವರೆಸಬೇಕಿದ್ದಾಗ ಮರಣ ಹೊಂದಿದವರ ಬದಲಿಗೆ ಬೇರೆಯವರನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಮೃತ ವ್ಯಕ್ತಿಯ ಆಸ್ತಿ ವಿಚಾರದಲ್ಲಿ ಪ್ರಶ್ನೆಗಳಿದ್ದಾಗ ಅದು ಪ್ರಸ್ತುತವಾಗುತ್ತದೆ. ಈ ಪ್ರಕರಣದಲ್ಲಿ ಅದು ಅಗತ್ಯವಿಲ್ಲ ಎಂದ ನ್ಯಾಯಾಲಯ ಮೇಲ್ಮನವಿಯನ್ನು ವಜಾಗೊಳಿಸಿತು.