Same-Sex Marriage 
ಸುದ್ದಿಗಳು

ನಮ್ಮ ಕಾನೂನು ವ್ಯವಸ್ಥೆ, ಮೌಲ್ಯಗಳು ಸಲಿಂಗ ವಿವಾಹ ಒಪ್ಪುವುದಿಲ್ಲ: ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ಸಲಿಂಗ ವಿವಾಹದ ಕಾನೂನು ಮಾನ್ಯತೆಯ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಿರುವ ನ್ಯಾಯಾಲಯವು ಸಲಿಂಗ ವಿವಾಹ ನೋಂದಣಿಯಾಗದ ಕಾರಣಕ್ಕೆ ನೊಂದವರಿದ್ದರೆ ಅಂತಹವರ ದಾಖಲೆಗಳನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ.

Bar & Bench

ಸಲಿಂಗ ವಿವಾಹವನ್ನು ನಮ್ಮ ಕಾನೂನು ವ್ಯವಸ್ಥೆ, ಮೌಲ್ಯಗಳು ಸಂಸ್ಕಾರಾರ್ಹ ಎಂದು ಒಪ್ಪುವುದಿಲ್ಲ ಎಂಬುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟಿಗೆ ಸೋಮವಾರ ತಿಳಿಸಿದ್ದಾರೆ.

ಅಭಿಜಿತ್ ಅಯ್ಯರ್ ಮಿತ್ರ, ಎಂ. ಗೋಪಿ ಶಂಕರ್, ಗೀತಿ ತದಾನಿ, ಜಿ ಊರ್ವಶಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ತುಷಾರ್ ಮೆಹ್ತಾ ಈಗಾಗಲೇ ಜಾರಿಯಲ್ಲಿರುವ ಶಾಸನಬದ್ಧ ನಿಬಂಧನೆಗಳಿಗೆ ಇದು ವಿರುದ್ಧವಾಗಿದೆ ಎಂದರು.

ಹಿಂದೂ ವಿವಾಹ ಕಾಯ್ದೆಯಡಿ ನಿಷೇಧಿತ ಸಂಬಂಧಗಳ ಕುರಿತ ಸೆಕ್ಷನ್ ಉಲ್ಲೇಖಿಸಿದ ಸಾಲಿಸಿಟರ್‌ ಜನರಲ್ ಮೆಹ್ತಾ ಅವರು ಈ ಕಾಯಿದೆಯು "ಪುರುಷ" ಮತ್ತು "ಮಹಿಳೆ" ನಡುವಿನ ವಿವಾಹವನ್ನು ಉಲ್ಲೇಖಿಸುತ್ತದೆ ಎಂದು ಸೂಚಿಸಿದರು.

ಮೆಹ್ತಾ ವಾದದ ಪ್ರಮುಖಾಂಶಗಳು ಹೀಗಿವೆ:

  • "(ಸುಪ್ರೀಂ ಕೋರ್ಟ್) ಸಲಿಂಗಕಾಮವನ್ನು ಮಾತ್ರ ಕಾನೂನುಬದ್ಧಗೊಳಿಸಿದೆ ಎಂಬುದನ್ನು ನ್ಯಾಯಾಲಯ ಗಮನಿಸಬೇಕು. ಅದಕ್ಕಿಂತ ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ

  • ಐಪಿಸಿ ಸೆಕ್ಷನ್ 498 ಎ ಮತ್ತು ಕೌಟುಂಬಿಕ ಹಿಂಸಾಚಾರದ ವಿರುದ್ಧದ ಕಾನೂನುಗಳ ಪ್ರಕಾರ ‘ಗಂಡ’ ಮತ್ತು ‘ಹೆಂಡತಿ’ ಅಸ್ತಿತ್ವ ಅವಶ್ಯಕ ಮತ್ತು ಸಲಿಂಗ ವಿವಾಹದ ಸಂದರ್ಭದಲ್ಲಿ ಅದು ಸಾಧ್ಯವಿಲ್ಲ.

ಅರ್ಜಿದಾರರ ವಾದ ಪ್ರಮುಖ ಅಂಶಗಳು:

  • ಸಲಿಂಗಕಾಮವನ್ನು ನ್ಯಾಯಸಮ್ಮತಗೊಳಿಸಿದ್ದರೂ, ಹಿಂದೂ ವಿವಾಹ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಲಿಂಗ ವಿವಾಹವನ್ನು ಇನ್ನೂ ಅನುಮತಿಸಿಲ್ಲ. ವಿಶೇಷವಾಗಿ ಈ ಕಾಯಿದೆಯು "ಯಾವುದೇ ಇಬ್ಬರು ಹಿಂದೂಗಳ" ನಡುವಿನ ವಿವಾಹದ ಮಹತ್ವದ ಬಗ್ಗೆ ಹೇಳುತ್ತದೆ.

  • ಮದುವೆಯಾಗುವ ಹಕ್ಕು ಭಾರತದ ಸಂವಿಧಾನದ 21 ನೇ ವಿಧಿಯ ಭಾಗವಾಗಿದೆ.

  • "ಭಿನ್ನಲಿಂಗಿ ದಂಪತಿಗೆ ನೀಡಲಾದ ಹಕ್ಕನ್ನು ಸಲಿಂಗಿಗಳಿಗೆ ವಿಸ್ತರಿಸದಿದ್ದರೆ ಅದು ಸಾಂವಿಧಾನಿಕ ಆದೇಶಕ್ಕೆ ವಿರುದ್ಧವಾಗಲಿದೆ.

  • ಸಲಿಂಗ ಸಮುದಾಯಕ್ಕೆ ಕಾನೂನು ಮಾನ್ಯತೆ ಇಲ್ಲದಿರುವುದರಿಂದ, ಸಲಿಂಗಿ ದಂಪತಿಗಳ ಸಾಮಾಜಿಕ ಮಾನ್ಯತೆಯೂ ಹಿಂದುಳಿದಿದೆ.

  • ಸಲಿಂಗ ದಂಪತಿಗಳಿಗೆ ವಿವಾಹದ ಹಕ್ಕನ್ನು ನಿರಾಕರಿಸುವುದು ಮಾನವ ಹಕ್ಕುಗಳ ಸನ್ನದು ಸೇರಿದಂತೆ ಭಾರತ ಸಹಿ ಹಾಕಿರುವ ವಿವಿಧ ಅಂತರರಾಷ್ಟ್ರೀಯ ಒಪ್ಪಂದಗಳಿಗೆ ವಿರುದ್ಧವಾಗಲಿದೆ.

“ಎಲ್ಲರೂ ಅನುಭವಿಸುವಂತೆ ಲೆಸ್ಬಿಯನ್, ಗೇ, ದ್ವಿಲಿಂಗಿ ಹಾಗೂ ಟ್ರಾನ್ಸ್ಜೆಂಡರ್ (ಎಲ್ ಜಿ ಬಿ ಟಿ) ವ್ಯಕ್ತಿಗಳಿಗೆ ವಿವಾಹದ ಹಕ್ಕು ಒದಗಿಸಿದರೆ ಅದು ತೀವ್ರವಾದವೂ ಆಗದು ಅಥವಾ ಸಂಕೀರ್ಣವೂ ಆಗದು. ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿಗೆ ಆಧಾರವಾಗಿರುವ ಎರಡು ಮೂಲಭೂತ ತತ್ವಗಳಾದ ಸಮಾನತೆ ಮತ್ತು ತಾರತಮ್ಯರಾಹಿತ್ಯತೆಯ ಮೇಲೆ ನಿಂತಿದೆ”
ಅರ್ಜಿದಾರರು

ಕೋರ್ಟ್ ಹೇಳಿದ್ದೇನು?

ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾ. ಪ್ರತೀಕ್ ಜಲನ್ ಅವರಿದ್ದ ವಿಭಾಗಿಯ ಪೀಠವು, ಪ್ರಸ್ತುತ ಹಂತದಲ್ಲಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಉಳಿಸಿಕೊಳ್ಳುವುದು ಪ್ರಾಥಮಿಕ ವಿಷಯವಾಗಿದೆ. ಸಲಿಂಗ ವಿವಾಹ ನೋಂದಣಿಯಾಗದ ಕಾರಣಕ್ಕೆ ನೊಂದವರಿದ್ದರೆ ಅಂತಹವರ ವಿವರಗಳನ್ನು ಸಲ್ಲಿಸುವಂತೆ ಕೋರ್ಟ್ ಅರ್ಜಿದಾರರಿಗೆ ಸೂಚನೆ ನೀಡಿತು.

ಸಲಿಂಗಿಗಳು ಎಂಬ ಕಾರಣಕ್ಕೆ ವಿವಾಹ ನೋಂದಣಿ ನಿರಾಕರಿಸಿದ ಹಲವು ವ್ಯಕ್ತಿಗಳು ಇದ್ದರೂ ಅವರಲ್ಲಿ ಯಾರೂ ವೈಯಕ್ತಿಕವಾಗಿ ನ್ಯಾಯಾಲಯದ ಮುಂದೆ ಬರಲು ಇಚ್ಛಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರಲ್ಲಿ ಒಬ್ಬರಾದ ರಾಘವ್ ಅವಸ್ಥಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ಮುಂದೂಡಲಾಗಿದೆ.