ನ್ಯಾಯಾಲಯದ ಆವರಣಕ್ಕೆ ಮದ್ಯದ ಬಾಟಲಿ ಹಿಡಿದು ಬಂದಿದ್ದಲ್ಲದೇ, ಪ್ರಕರಣ ಕರೆದಾಗ ಪೀಠದ ಮುಂದೆ ಹಾಜರಾಗದ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಜಾಮೀನು ರದ್ದುಪಡಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿತು.
ಮೈಸೂರು ತಾಲ್ಲೂಕಿನ ಬೆಳವಾಡಿಯ ಶಿವಕುಮಾರ್ ಅಲಿಯಾಸ್ ಶಿವು ಅಲಿಯಾಸ್ ಆರ್‌ಎಕ್ಸ್ ಶಿವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಸಿ ಎನ್ ರಾಜು ಅವರು “ಜಾಮೀನು ರದ್ದುಪಡಿಸುವುದಕ್ಕೂ ಮುನ್ನ ವಿಚಾರಣಾಧೀನ ನ್ಯಾಯಾಲಯವು ನೋಟಿಸ್ ಜಾರಿ ಮಾಡಿ, ಒಂದು ಅವಕಾಶ ನೀಡಬೇಕಿತ್ತು. ಕಾನೂನಿನ ಪ್ರಕಾರ ಬೇರೆ ಪ್ರಕರಣ ದಾಖಲಿಸಬಹುದಿತ್ತು. ಆರೋಪಿಯು ಕೃಷಿಕರಾಗಿದ್ದು, ಆರೋಪಿಯು ಒಂದು ತಿಂಗಳಿಂದ ಕಸ್ಟಡಿಯಲ್ಲಿದ್ದಾರೆ. ಪೊಲೀಸರ ಹೇಳಿಕೆಯ ಮೇಲೆ ಬಂಧಿಸಲಾಗಿದೆ” ಎಂದರು.
ಆಗ ಪೀಠವು “ವಿಚಾರಣೆಯ ದಿನ ನೀವು ನ್ಯಾಯಾಲಯದಲ್ಲಿ ಮದ್ಯದ ಬಾಟಲಿ ಹಿಡಿದಿದ್ದಿರಿ, ಇದನ್ನು ವಿಚಾರಣಾಧೀನ ನ್ಯಾಯಾಧೀಶರು ವಿಡಿಯೊದಲ್ಲಿ ನೋಡಿದ್ದಾರೆ. ನಿಮ್ಮ ಪ್ರಕರಣ ಕರೆದಾಗ ನೀವು ಪೀಠದ ಮುಂದೆ ಹಾಜರಾಗಿಲ್ಲ. ಮುಂದಿನ ವಿಚಾರಣೆಯಂದೂ ನೀವು ವಿಚಾರಣೆಗೆ ಗೈರಾಗಿದ್ದೀರಿ. ಕುಡಿಯೋಕೆ ಬಾಟಲಿ ಎತ್ಕೊಂಡು ಕೋರ್ಟ್‌ಗೆ ಹೋಗುವುದಕ್ಕೆ ಆಗುತ್ತೆ, ಕೇಸ್ ಕರೆದಾಗ ಪೀಠದ ಮುಂದೆ ಹಾಜರಾಗಲಾಗುವುದಿಲ್ಲ ಎಂದರೆ ಜಾಮೀನು ರದ್ದುಪಡಿಸದೇ ವಿಚಾರಣಾಧೀನ ನ್ಯಾಯಾಲಯ ಏನು ಮಾಡುವುದಕ್ಕಾಗುತ್ತೆ?” ಎಂದು ಪೀಠವು ಕಿಡಿಕಾರಿತು.
ಮುಂದುವರಿದು ಪೀಠವು “ನಿಮಗೆ ಇನ್ನು ಕೋರ್ಟ್‌ನಲ್ಲಿ ಒಂದು ಬಾಟಲಿ ಇಟ್ಟು ಕರೆಯಬೇಕಾಗುತ್ತದೆ ಅಷ್ಟೆ. ಆರೋಪಿ ಇನ್ನೂ ಸ್ಪಲ್ಪ ದಿನ ಜೈಲಿನಲ್ಲಿರಲಿ. ಮದ್ಯ ವ್ಯಸನದಿಂದ ಆತ ಹೊರಬರುತ್ತಾನೆ. ಇನ್ನೂ ಎರಡು ತಿಂಗಳು ಜೈಲಿನಲ್ಲಿದ್ದರೂ ಪರವಾಗಿಲ್ಲ. ಏನೂ ಆಗುವುದಿಲ್ಲ. ವ್ಯಸನ ಮುಕ್ತರಾಗುತ್ತಾನೆ. ಖಾಸಗಿ ವ್ಯಕ್ತಿ ಆರೋಪ ಮಾಡಿದ್ದರೆ ಅದನ್ನು ಆರೋಪ ಎನ್ನಬಹುದಿತ್ತು. ಈ ವಿಡಿಯೊವನ್ನು ನೋಡಿ, ಅದನ್ನು ನ್ಯಾಯಾಧೀಶರು ರೆಕಾರ್ಡ್ ಮಾಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿತು.
ಈ ಹಂತದಲ್ಲಿ ವಕೀಲರು “ಸಿಸಿಟಿವಿ ದೃಶ್ಯಾವಳಿಯಲ್ಲಿ ಅಲ್ಲಿ ಮದ್ಯ ಇತ್ತು ಎಂದು ಹೇಗೆ ಗೊತ್ತಾಗುತ್ತದೆ?” ಎಂದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಪೀಠವು “ತನಿಖೆ ನಡೆಸಿ, ಅಲ್ಲಿ ಸತ್ಯ ಎಂದು ಸಾಬೀತಾದರೆ ವಿಚಾರಣೆಯ ಪೂರ್ತಿ ಸಮಯ ನಿಮ್ಮನ್ನು ಜೈಲಿನಲ್ಲಿ ಇಡಬಹುದೇ? ನಿಮ್ಮ ಕಕ್ಷಿದಾರ ಸರಿಯಾಗಿ ನಡೆದುಕೊಳ್ಳಬೇಕಿತ್ತು. ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆ. ಸ್ವಲ್ಪದಿನ ಅಲ್ಲೇ ಬಿಡಿ, ಅವರು ಸರಿ ಹೋಗುತ್ತಾರೆ. ನ್ಯಾಯಾಲಯದ ಅಧಿಕಾರಿಯಾಗಿ ಇದಕ್ಕೆ ನೀವು ಪ್ರೋತ್ಸಾಹ ನೀಡಬಾರದು. ಕಕ್ಷಿದಾರರನ್ನು ಸಮರ್ಥಿಸುವುದು ನಿಮ್ಮ ವೃತ್ತಿ. ಆದರೆ, ನ್ಯಾಯಾಲಯದ ಬಗ್ಗೆ ಗಂಭೀರವಾಗಿರಬೇಕು” ಎಂದಿತು.
ಅಂತಿಮವಾಗಿ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆಯನ್ನು ಜುಲೈ ಮೊದಲ ವಾರಕ್ಕೆ ಮುಂದೂಡಿತು.