ನ್ಯಾಯಮೂರ್ತಿಗಳ ವಿರುದ್ಧ ರಾಜಕೀಯ ನಾಯಕರು ಮಾಡಿದ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನ್ಯಾಯಾಲಯದ ಭುಜಗಳು ಅಂತಹ ಟೀಕೆಗಳನ್ನು ತಡೆದುಕೊಳ್ಳುವಷ್ಟು ದೊಡ್ಡದಾಗಿವೆ ಎಂದು ಬಾಂಬೆ ಹೈಕೋರ್ಟ್ ಬುಧವಾರ ತಿಳಿಸಿದೆ [ಭಾರತೀಯ ವಕೀಲರ ಸಂಘ ಮತ್ತು ಸಂಜಯ್ ರಾವುತ್ ಇನ್ನಿತರರ ನಡುವಣ ಪ್ರಕರಣ].
ನ್ಯಾಯಾಂಗ ನಿಂದನೆ ಮಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶಿವಸೇನಾ ಸಂಸದ ಸಂಜಯ್ ರಾವುತ್, ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮತ್ತು ಸಾಮ್ನಾ (ಶಿವಸೇನೆ ಪ್ರಕಟಿಸುವ ಮರಾಠಿ ಪತ್ರಿಕೆ) ಪ್ರಕಾಶಕ ವಿವೇಕ್ ಕಾಡಾ ವಿರುದ್ಧ ಮೊಕದ್ದಮೆ ದಾಖಲಿಸಿಕೊಳ್ಳಬೇಕೆಂದು ಕೋರಿ ಭಾರತೀಯ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ವಿ ಜಿ ಬಿಷ್ಟ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
"ನ್ಯಾಯಾಂಗದ ಬಗ್ಗೆ ಅವರು ಏನು ಹೇಳಬೇಕೆಂದರೂ ಹೇಳಲಿ. ಅಂತಹ ಟೀಕೆಗಳನ್ನು ಸ್ವೀಕರಿಸಲು ನಮ್ಮ ಭುಜಗಳು ಸಾಕಷ್ಟು ದೊಡ್ಡದಾಗಿವೆ. ನಮ್ಮ ಆತ್ಮಸಾಕ್ಷಿ ಶುದ್ಧವಾಗಿರುವವರೆಗೆ ಅವರು ಏನು ಬೇಕಾದರೂ ಹೇಳಲಿ," ಎಂದು ನ್ಯಾ. ದತ್ತಾ ಪ್ರತಿಕ್ರಿಯಿಸಿದರು.
ನ್ಯಾಯಾಲಯಗಳ ಬೇಸಿಗೆ ರಜೆ ಬಳಿಕ ಪ್ರಕರಣ ಪಟ್ಟಿ ಮಾಡಲಾಗುವುದು ಎಂದು ಆರಂಭದಲ್ಲಿ ನ್ಯಾಯಾಲಯ ಹೇಳಿದಾಗ,” ನ್ಯಾಯಾಲಯದ ಯತ್ನದ ಹೊರತಾಗಿಯೂ ಪ್ರತಿವಾದಿಗಳ ಟೀಕೆ ಮುಂದುವರೆದಿದೆ” ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಈ ಹಂತದಲ್ಲಿ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಪರಿಗಣಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿತು.